ಮೂರು ವರ್ಷಗಳ ಹಿಂದೆ ಪತ್ರಕರ್ತನೊಬ್ಬ ವೈದ್ಯರನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಸುದ್ದಿ ವೃತ್ತಿಯಲ್ಲಿರುವ ಎಲ್ಲರೂ ತಲೆತಗ್ಗಿಸುವಂತೆ ಮಾಡಿತ್ತು. ಇಂಥ ಗಂಭೀರ ಪ್ರಕರಣ ಕೂಡ ಕೇವಲ ಒಂದು ಸುದ್ದಿಯಾಗಿ ತೇಲಿಹೋಗದಿರಲಿ ಎಂಬ ಕಳಕಳಿ ಆಗ ನಮ್ಮದಾಗಿತ್ತು. ಈ ಕುರಿತು ವ್ಯಾಪಕ ಚರ್ಚೆ ನಡೆದು ಮಾಧ್ಯಮ ಕ್ಷೇತ್ರದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ ಎಂಬ ಆಶಯದಿಂದ ‘ಸಮಾಜಮುಖಿ’ ಮಾಸಪತ್ರಿಕೆಯಲ್ಲಿ ವೇದಿಕೆ ಕಲ್ಪಿಸಿದ್ದಲ್ಲದೆ, ‘ಮಾಧ್ಯಮಗಳ ಭ್ರಷ್ಟಾಚಾರ ವಿರೋಧಿಸಿ’ ಅಭಿಯಾನಕ್ಕೆ ಚಾಲನೆ ನೀಡಿದ್ದೆವು ಕೂಡ. ಇದೀಗ ಸಿಎಂ ಕಚೇರಿಯ ದೀಪಾವಳಿ ಭಕ್ಷೀಸು ಪ್ರಕರಣ ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಪ್ರಸ್ತುತ ಮಾಧ್ಯಮ ರಂಗದ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ಸ್ವರೂಪಗಳಲ್ಲಿ ಹೋಳಿ ಹುಣ್ಣಿಮೆಯ ರಂಗು ಮೀರಿಸುವಷ್ಟು ಬಣ್ಣಗಳು. ಎಲ್ಲರಿಗೂ ಅವರವರದೇ ಆದ ಸಮರ್ಥನೆಗಳು, ಸಬೂಬುಗಳು, ಸಂಘರ್ಷಗಳು. ಸಮಾಜದಲ್ಲೇ ನಶಿಸಿಹೋದ ಮೌಲ್ಯಗಳನ್ನು ಮಾಧ್ಯಮದಲ್ಲೇಕೆ ಹುಡುಕುವಿರಿ ಎಂದು ಪ್ರಶ್ನಿಸುವವರ ಜೊತೆಗೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಸವಾಲು ಎಸೆದು ಬಿಲ ಸೇರುವವರೂ ನಮ್ಮಲ್ಲಿದ್ದಾರೆ. ತಮಗೆ ಸಿಹಿ ಸಿಗದವರು ವಿವಾದದ ಹೊಗೆ ಎಬ್ಬಿಸುತ್ತಿದ್ದಾರೆ, ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಲು ಹೇಸದವರಿಗೂ ಕೊರತೆಯಿಲ್ಲ. ಹೊರಗೆ ನಿಂತು ಕಾಮೆಂಟು ಹೊಸೆಯುವ ಬಹುತೇಕರಿಗೆ ತಮ್ಮ ಅಂತರಂಗದ ಒಳಹೊಕ್ಕು ಶೋಧಿಸಿಕೊಳ್ಳುವ ವ್ಯವಧಾನವಿಲ್ಲ. ಹೊಸದಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿರಿಸುವ ಯುವಚೇತನಗಳಿಗೆ ಯಾರನ್ನು ಹಿಂಬಾಲಿಸುವುದು, ಯಾವುದನ್ನು ಪಾಲಿಸುವುದು ಎಂಬ ಗೊಂದಲ ಕಾಡುವುದು ಸಹಜ.
ಇಂದು `ಹಣ ಮಾಡುವುದು ಹೇಗೆ? ಯಶಸ್ಸು ಗಳಿಸುವುದು ಹೇಗೆ?’ ಎಂದು ತೊಳೆತೊಳೆಯಾಗಿ ಬಿಡಿಸಿ ಹೇಳುವ ಬೇಕಾದಷ್ಟು ಪುಸ್ತಕಗಳು ಹೊರಬಂದಿವೆ. ಆದರೆ `ಪ್ರಾಮಾಣಿಕವಾಗಿ ಬದುಕುವುದು ಹೇಗೆ?’ ಶೀರ್ಷಿಕೆಯ ಕೈಪಿಡಿ ಎಲ್ಲೂ ಕಾಣುವುದಿಲ್ಲ. ಅದರ ಅಗತ್ಯ ಗುರುತಿಸುವ ಕಳಕಳಿ ಮತ್ತು ಬರೆಯುವ ನೈತಿಕ ಸಾಮಥ್ರ್ಯ ಬಹಳ ಜನರಲ್ಲಿ ಇರಲಾರದು. ಬಹುಶಃ ‘ನೈತಿಕತೆ’ ಅನ್ನುವುದು ಒಂದು ‘ಮೌಲ್ಯ’ವಾಗಿ ಪ್ರಸ್ತುತತೆ ಕಳೆದುಕೊಂಡ ಕಾಲಘಟ್ಟದಲ್ಲಿ ನಾವಿದ್ದೇವೇನೋ…! ಸುತ್ತಲಿನ ಆಗುಹೋಗುಗಳು ಈ ಮಾತಿಗೆ ಪುಷ್ಟಿಕೊಡುವಂತೆಯೇ ತೆರೆದುಕೊಳ್ಳುತ್ತಿವೆ.
ಪೀಪಲ್ ಮೀಡಿಯಾ ಜಾಲಪತ್ರಿಕೆ ‘ಸಿಹಿ ಉಡುಗೊರೆ’ ಸುದ್ದಿಯನ್ನು ಸ್ಫೋಟಿಸಿದಾಗ ಮಾಧ್ಯಮ ಗೆಳೆಯರ ವಾಟ್ಸಾಪ್ ಗುಂಪೊಂದರಲ್ಲಿ ಯಾರು? ಎಲ್ಲಿ? ಹೇಗೆ? ಎಷ್ಟು? ಇತ್ಯಾದಿ ಚರ್ಚೆಗೆ ಚಾಲನೆ ದೊರೆಯಿತು. ಆಗ ಕನ್ನಡಪ್ರಭ ಬಳಗದ ಉದ್ಯೋಗಿಯೊಬ್ಬರು ಹೀಗೆ ಪ್ರತಿಕ್ರಿಯಿಸಿದರು: ‘ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‍ಗೆ ಬಂದ ಸಿಎಂ ಕಚೇರಿಯ ದೀಪಾವಳಿ ಗಿಫ್ಟ್ ಅನ್ನು ನಿರಾಕರಿಸಲಾಗಿದೆ. ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಸ್ವೀಟ್ ಬಾಕ್ಸ್‍ನಲ್ಲಿದ್ದ `ಕವರ್’ ಗಮನಿಸಿದವರೇ, ಸಿಡಿಮಿಡಿಗೊಂಡ್ರು. ಸ್ವೀಟ್ ಬಾಕ್ಸ್ ತಂದ ಸಿಎಂ ಕಚೇರಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ರವಿ ಹೆಗಡೆ, ಇನ್ನೆಂದಿಗೂ, ಯಾವತ್ತೂ Never try with Us ಎಂದು ಖಡಕ್ ವಾರ್ನಿಂಗ್ ಕೊಟ್ಟು, ವಾಪಸ್ ಕಳಿಸಿದ್ರು. ನಮ್ಮ ಮಾಧ್ಯಮ ಸಂಸ್ಥೆಗಳಿಗೆ ಈ ರೀತಿ ಗಿಫ್ಟ್ ತಲುಪಿಸುವುದನ್ನು ಖಡಾ ಖಂಡಿತ ಖಂಡಿಸಿದ್ರು’.
ಎಂತಹ ಉದಾತ್ತ ನಡೆ! ಯಾರಾದರೂ ಮೆಚ್ಚದಿರಲು ಸಾಧ್ಯವೇ…? ನಾನೂ ಅಭಿನಂದನೆ ಸೂಚಿಸಿ ಸಣ್ಣ ನಿರೀಕ್ಷೆಯನ್ನು ಮುಂದಿಟ್ಟೆ:
‘ಸಿಎಂ ಕಚೇರಿಯಿಂದ ಬಂದಿದ್ದ ಗಿಫ್ಟ್ ಹಣವನ್ನು ಹಿಂದಿರುಗಿಸಿದ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಪ್ರಾಮಾಣಿಕತೆ ಮೆಚ್ಚುವಂಥದ್ದು. ಈ ಗುಂಪಿನಲ್ಲೇ ಇರುವ ಅವರು ಅಂದು ನಡೆದ ಪ್ರಾಥಮಿಕ ಸತ್ಯಸಂಗತಿಗಳನ್ನು ಸ್ವತಃ ಹಂಚಿಕೊಳ್ಳುವ ಅವಕಾಶವಿದೆ. ಆ ಮೂಲಕ ಅವರು ಮಾಧ್ಯಮರಂಗದ ಮೇಲಿನ ಕಳಂಕ ತೊಡೆಯುವ ನಿಟ್ಟಿನಲ್ಲಿ ಮೇಲ್ಪಂಕ್ತಿ ಹಾಕಬಹುದು. ಸಿಎಂ ಕಚೇರಿಯಿಂದ ಗಿಫ್ಟ್ ತಂದವರು ಯಾರು? ಎಷ್ಟು ಹಣ ಇತ್ತು? ಒಟ್ಟು ಎಷ್ಟು ಗಿಫ್ಟ್ ಬಾಕ್ಸುಗಳನ್ನು ತಂದಿದ್ದರು? ಸಂಪಾದಕರಿಗೆ ಮಾತ್ರ ನೀಡಿದರಾ ಅಥವಾ ಇತರ ಸಹೋದ್ಯೋಗಿ ಮಿತ್ರರಿಗೂ ವಿತರಿಸಲು ಯತ್ನಿಸಿದರಾ? ಈ ಪ್ರಸಂಗ ಸಹಜವಾಗಿಯೇ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರಬಹುದಲ್ಲವೇ? ಪ್ರಜಾವಾಣಿಯಂತೆ ಕನ್ನಡಪ್ರಭ ಪತ್ರಿಕೆಯಿಂದಲೂ ಸಿಎಂ ಕಚೇರಿಗೆ ಅಧಿಕೃತವಾಗಿ ಪ್ರತಿಭಟನೆ ಪತ್ರ ಬರೆಯಲಾಗಿದೆಯೇ? ಇದು ಭ್ರಷ್ಟಾಚಾರದ ಗಂಭೀರ ಪ್ರಕರಣವಾದ್ದರಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವ ರವಿ ಹೆಗಡೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಕುರಿತು ಲೋಕಾಯುಕ್ತರಿಗೆ/ಪೊಲೀಸರಿಗೆ ದೂರು ನೀಡಿ ಸಂಪೂರ್ಣ ತನಿಖೆ ನಡೆಯುವಂತಾದರೆ ಒಟ್ಟಾರೆ ಕನ್ನಡ ಪತ್ರಿಕಾರಂಗದ ಘನತೆಗೆ, ಅವಮಾನದಿಂದ ಕುದಿಯುತ್ತಿರುವ ಪ್ರಾಮಾಣಿಕ ಪತ್ರಕರ್ತ ಬಳಗಕ್ಕೆ ಮಹದುಪಕಾರವಾಗುತ್ತದೆ. ಇಷ್ಟನ್ನು ನಿರೀಕ್ಷಿಸಬಹುದೇ?’.
ಊಹೂಂ… ಅವರಿಂದ ಉತ್ತರವೇ ಇಲ್ಲ; ಇದೇ ನಿರೀಕ್ಷೆಯನ್ನು ಸಾರ್ವಜನಿಕವಾಗಿಯೂ ಪ್ರಸ್ತಾಪಿಸಿದೆ. ಅವರ ದಿವ್ಯ ಮೌನವೇ ಎಲ್ಲವನ್ನೂ ಮಾತನಾಡಿತು, ಜನರಿಗೂ ತಲುಪಿತು!
ಪತ್ರಕರ್ತರ ಗುಂಪಿನಲ್ಲಿ ದೀಪಾವಳಿಯ ಗಿಫ್ಟ್ ಪಟಾಕಿ ಸದ್ದು ಕೇಳುತ್ತಲೇ ಇತ್ತು, ಆ ಸದ್ದಿಗೆ ‘ಪೀಪಲ್ ಮೀಡಿಯಾ’ ಸುದ್ದಿಗಳ ಗುದ್ದು. ಜೊತೆಗೆ ಹೊಣೆಯರಿತ ವೃತ್ತಿಮಿತ್ರರ ಸಿಟ್ಟು, ಹತಾಶೆ, ಅವಮಾನದ ನುಡಿಗಳ ನಾನಾ ರೀತಿಯ ಹೊರಹಾಕುವಿಕೆ ಸತತವಾಗಿ ಸಾಗಿತ್ತು. ಈ ಮಧ್ಯೆ ತಮ್ಮ ಕಚೇರಿಗೆ ಸ್ವೀಟ್ ಬಾಕ್ಸ್ ಮಾತ್ರ ತಲುಪಿವೆ ಎಂದು ಉದಯವಾಣಿ, ವಿಜಯವಾಣಿ ಬಹಿರಂಗಪಡಿಸಿದವು.
ಪ್ರಜಾವಾಣಿಯ ಪತ್ರಕರ್ತ ವೈ.ಗ.ಜಗದೀಶ್ ಅವರಿಂದ, ‘ದುಡ್ಡು ಕಳಿಸಿದ್ದು ಹೌದು. ಆದರೆ ದುಡ್ಡು ಎಷ್ಟಿತ್ತೆಂದು ನಾನು ನೋಡಿಲ್ಲ. ದುಡ್ಡಿರುವುದು ಗಮನಕ್ಕೆ ಬಂದಕೂಡಲೇ ತಲುಪಿಸಿದವರಿಗೆ ವಾಪಸ್ ಮಾಡಲಾಗಿದೆ. ಅದರ ಬಗ್ಗೆ ಸಿಇಒ ಕೇಳಿದ ನಂತರ ನಾನು ವಾಪಸ್ ಮಾಡಿದೆನೆಂಬುದು ನಿಜವಲ್ಲ. ಸಿಇಒ ಮತ್ತು ಸಂಪಾದಕರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಸಿಎಂಗೂ ಲಿಖಿತ ಪತ್ರ ಬರೆದು ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅವರು ಸಾರಿ ಕೇಳಿಯೂ ಆಗಿದೆ’ ಎಂಬ ಸ್ಪಷ್ಟೀಕರಣವೂ ಹೊರಬಿದ್ದಿದೆ.
ಭಾಗಿಗಳು ಬಾಯಿ ಮುಚ್ಚಿಕೊಳ್ಳುವುದು ಸಹಜ; ಆದರೆ ಸಾಕ್ಷಿಗಳ ಮೌನ ಅಪಾಯಕಾರಿಯಲ್ಲವೇ?
ಒಂದು ಹಂತದಲ್ಲಿ ಜಿ.ಎನ್.ಮೋಹನ್ ಅವರು, ‘ಗಿಫ್ಟ್ ರಿಜೆಕ್ಟ್ ಮಾಡಿದವರ ಹೆಸರು ಇಲ್ಲಿ (ವಾಟ್ಸಾಪ್ ಗುಂಪಿನಲ್ಲಿ) ಸೇರಿಸುತ್ತಾ ಹೋಗೋಣ, ಇದು ನಾವು ಅವರಿಗೆ ನೀಡುವ ಗೌರವ’ ಎಂಬ ಪ್ರಸಾವನೆ ಮುಂದಿಟ್ಟರು. ‘ಹೌದು ಅಂತಹವರು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು’ ಎಂದು ಸೇರಿಸಿದ ಟೆಲೆಕ್ಸ್ ರವಿಕುಮಾರ್, ‘ಗಿಫ್ಟ್ ವಾಪಸ್ ಕೊಟ್ಟ ಪತ್ರಕರ್ತರು ತಮಗೆ ಯಾರು? ಎಲ್ಲಿ? ಯಾವಾಗ? ಕೊಟ್ಟರು ಎಂಬುದನ್ನು ನಿರ್ದಿಷ್ಟವಾಗಿ ಬಹಿರಂಗಪಡಿಸಬಾರದೇಕೆ?’ ಎಂಬ ಪ್ರಶ್ನೆ ಮುಂದಿಟ್ಟರು. ಕೆಲವರು ಮರುದಿನದ ದಿನಪತ್ರಿಕೆಗಳ ಸಂಪಾದಕೀಯವನ್ನು ಕುತೂಹಲದಿಂದ ಕಾಯುವುದಾಗಿ ನಿರೀಕ್ಷೆ ವ್ಯಕ್ತಪಡಿಸಿದರು.
ಈವರೆಗೂ ಇಂಥ ಯಾರ ನಿರೀಕ್ಷೆಯೂ ಫಲಿಸಿಲ್ಲ; ಯಾವ ಪ್ರಶ್ನೆಗೂ ಉತ್ತರ ಪಡೆಯುವ ಭಾಗ್ಯ ಲಭಿಸಿಲ್ಲ! ನೂರಾರು ಜನರಿಗೆ ತಲುಪಿಸಲಾಗಿದೆ ಎನ್ನಲಾದ ಉಡುಗೊರೆ ರೂಪದ ರುಷುವತ್ತನ್ನು ಹಿಂದಿರುಗಿಸಿದ್ದಾಗಿ ಈವರೆಗೆ ಹೇಳಿಕೊಂಡವರು ಕೇವಲ ಮೂವರು. ಅವರು ಕೂಡ ಅದನ್ನು ಸುದ್ದಿಯಾಗಿಸಲು, ಕ್ರಮ ಜರುಗಿಸಲು ಬಯಸುವುದಿಲ್ಲ. ಅಂದರೆ ಹಿಂದಿರುಗಿಸಿದವರ ಅರೆ ಮೌನ ಮತ್ತು ಉಳಿದವರ ಪೂರಾ ಮೌನದಲ್ಲಿ ಸತ್ಯ ವಿಲವಿಲ ಒದ್ದಾಡುತ್ತಿದೆ! ಈ ಲೆಕ್ಕದಲ್ಲಿ ಇಂದು ಪತ್ರಿಕಾರಂಗ ಪ್ರತಿಶತ 97 ರಷ್ಟು ಭ್ರಷ್ಟಗೊಂಡಿದೆ ಎಂದಾಯಿತು. ಇದು ಪತ್ರಿಕಾರಂಗದ ಸುಡು ವಾಸ್ತವದ ಕನ್ನಡಿಯಲ್ಲಿ ಕಾಣುವ ಒಡಕು ಬಿಂಬ.
ಕಾಂಗ್ರೆಸ್ ಪಕ್ಷ, ‘ಪತ್ರಕರ್ತರಿಗೆ ಗಿಫ್ಟ್ ರೂಪದಲ್ಲಿ ನೀಡಿದ ಹಣದ ಮೂಲ ಪತ್ತೆಯಾಗಬೇಕು, ತನಿಖೆಯಾಗಬೇಕು…’ ಎಂದು ಕಾಟಾಚಾರದ ಹೇಳಿಕೆ ನೀಡಿ ಕೈತೊಳೆದುಕೊಂಡಿದೆ. ‘ಕಾಂಗ್ರೆಸ್ ಪಕ್ಷದವರು ಅಧಿಕಾರದಲ್ಲಿದ್ದಾಗ ಪತ್ರಕರ್ತರಿಗೆ ಐ ಫೋನ್, ಲ್ಯಾಪ್ ಟಾಪ್, ಗೋಲ್ಡ್ ಕಾಯ್ನ್ ಗಿಫ್ಟ್ ಕೊಟ್ಟಿದ್ದಾರೆ. ಅವರಿಗೆ ಯಾವ ನೈತಿಕ ಹಕ್ಕಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಅಂದರೆ ಅಲ್ಲಿಗೆ ಇವರಿಬ್ಬರ ಆಟ ಸಮಸಮ (ಟೈ) ಆದಂತೆ! ಈ ಆಟ ಇಲ್ಲಿಗೆ ಮುಗಿಸಿ ಹೊಸ ಆಟ ಆರಂಭಿಸಲು ಸಿದ್ಧವಾಗುತ್ತಾರೆ. ನಾವು ನವೆಂಬರಿನ ಚಳಿಯಲ್ಲಿ ಇವರ ಹೊಸ ಆಟ ನೋಡಲು ಮಫ್ಲರ್ ಸುತ್ತಿಕೊಂಡು ಸಿದ್ಧವಾಗಬೇಕಷ್ಟೇ.
ಇಲ್ಲಿ ‘ಕೊಟ್ಟವ ಕೋದಂಡ, ಇಸಗೊಂಡವ ಇರುಕಿಸಿಕೊಂಡ’ ಎನ್ನುವಂತಾಗಿದೆ. ಯಾವುದೇ ರೂಪದಲ್ಲಿ ಲಂಚ ನೀಡುವವರು ಯಾರಿಗೆ, ಯಾವಾಗ, ಏಕೆ ನೀಡುತ್ತಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ಎಲ್ಲರಿಗೂ, ಯಾವಾಗಲೂ, ಕಾರಣವಿಲ್ಲದೆ ಲಂಚ ನೀಡಲು ಸಾಧ್ಯವೇ? ಹಾಗಾಗಿ ದೀಪಾವಳಿ ಗಿಫ್ಟ್ ಹಗರಣ ಆಡಳಿತ ಪಕ್ಷದ, ವಿರೋಧ ಪಕ್ಷದ, ಸರ್ಕಾರದ, ಮುಖ್ಯಮಂತ್ರಿಗಳ ಅಥವಾ ಅವರ ಸಿಬ್ಬಂದಿಗಳ ಸಮಸ್ಯೆಯಲ್ಲವೇ ಅಲ್ಲ. ಇದೇನಿದ್ದರೂ ನೇರವಾಗಿ ಪ್ರಜಾತಂತ್ರದ ನಾಲ್ಕನೇ ಕಂಬದ ಕಂಪನಕ್ಕೆ ಸಂಬಂಧಿಸಿದ್ದು. ಪರಿಹಾರ ಕಂಡುಕೊಳ್ಳುವ ಅಗತ್ಯ, ಹೊಣೆ ಇರುವುದೂ ಮಾಧ್ಯಮರಂಗದ ಹೆಗಲ ಮೇಲೆಯೇ.
ಪ್ರಸಕ್ತ ಪತ್ರಿಕಾರಂಗ ತಲುಪಿರುವ ಲಜ್ಜೆಗೇಡಿ ಸ್ಥಿತಿಗೆ ವೃತ್ತಿಯಲ್ಲಿರುವ ಎಲ್ಲರೂ ತಲೆತಗ್ಗಿಸುವಂತಾಗಿದೆ! ಇದು ನಾಚಿಕೆಗೇಡಿನ ವಿದ್ಯಮಾನ. ಇನ್ನಾದರೂ ಕಪ್ಪುಕುರಿಗಳನ್ನು ಬೇರ್ಪಡಿಸುವ ಪ್ರಜ್ಞಾಪೂರ್ವಕ ಪ್ರಯತ್ನಗಳು ಆರಂಭವಾಗಬೇಕಿದೆ. ಈಗಾಗಲೇ ಸಮಾಜದ ದೃಷ್ಟಿಯಲ್ಲಿ ಮಧ್ಯಮ ಸ್ಥಾನಕ್ಕೆ ಇಳಿದಿರುವ ಮಾಧ್ಯಮದ ಆಗುಹೋಗುಗಳು ಅಧಮ ಘಟ್ಟಕ್ಕೆ ಜಾರದಿರಲಿ ಎಂಬ ವೃತ್ತಿಪ್ರೀತಿಯಿಂದ ನಾನಂತೂ ಸಹಮನಸ್ಕ ಸಂಗಾತಿಗಳೊಂದಿಗೆ ಸೇರಿ ಮಾಧ್ಯಮ ರಂಗದ ಭ್ರಷ್ಟಾಚಾರದ ವಿರುದ್ಧ ಗಟ್ಟಿದನಿ ಎತ್ತಲು, ನಿಷ್ಟುರ ಕಟ್ಟಿಕೊಳ್ಳಲು ಸಿದ್ಧವಾಗಿದ್ದೇನೆ. ಪತ್ರಿಕಾವಲಯದಲ್ಲಿರುವ ಭ್ರಷ್ಟಾಚಾರದ ವೈಯಕ್ತಿಕ ಮತ್ತು ಸಾಂಸ್ಥಿಕ ಸ್ವರೂಪಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಿ, ಪರಿಶೀಲಿಸಿ, ಪರಿಹಾರೋಪಾಯಗಳನ್ನು ಹುಡುಕಬೇಕಿದೆ. ಕಾನೂನಾತ್ಮಕ ಕ್ರಮಗಳಿಂದ ಹುಟ್ಟುವ ‘ಅಂಜಿಕೆ’ ಮತ್ತು ಸಾಮಾಜಿಕವಾಗಿ ಹೊಮ್ಮುವ ‘ಅಳುಕು’ ಎರಡರ ಪ್ರಯೋಗವೂ, ಅಳವಡಿಕೆಯೂ ಅನಿವಾರ್ಯ.
ಈ ಬಗ್ಗೆ ಕಾಳಜಿ, ಬದ್ಧತೆ, ನಂಬಿಕೆ ಇರುವವರು ಕಾನೂನಾತ್ಮಕ ಹೋರಾಟ, ನೈತಿಕ ಪ್ರಜ್ಞೆಯ ಜಾಗೃತಿ ಹಾಗೂ ಸ್ವಾವಲೋಕನದ ಸಂಕಲ್ಪಕ್ಕೆ ಸಿದ್ಧವಾಗುವ ಜರೂರಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಎಡವಿದಾಗ ಚಾಟಿ ಬೀಸಲು ಸಶಕ್ತವಾಗಿರುವ ನ್ಯಾಯಾಂಗ ಉಡುಗೊರೆ ಹಗರಣವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡು ತನ್ನ ಸುಪರ್ದಿಯಲ್ಲಿ ತನಿಖೆ ನಡೆಸುವುದು ಅಸಾಧ್ಯವೇನಲ್ಲ.
ಈ ನಿಟ್ಟಿನಲ್ಲಿ ಆಸಕ್ತರು, ಎಷ್ಟೇ ಅಲ್ಪ ಸಂಖ್ಯೆಯಲ್ಲಿದ್ದರೂ, ಕನಿಷ್ಠಪಕ್ಷ ಒಂದು ‘ಒತ್ತಡ ಹೇರುವ ತಂಡ’ ಆಗಿಯಾದರೂ ಕಾರ್ಯನಿರ್ವಹಿಸಲು ಮುಂದಾಗಬೇಕಲ್ಲವೇ…?
- (ಲೇಖಕರು ಅನುಭವಿ ಪತ್ರಕರ್ತರು, ಸಮಾಜಮುಖಿ ಪತ್ರಿಕೆಯ ಸಂಪಾದಕರು)
ಇದನ್ನೂ ಓದಿ: ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತ ಸಮುದಾಯಕ್ಕೇ ಕೆಟ್ಟ ಹೆಸರು ಬರುವಂತಾಗಬಾರದು– ಅನಂತ ಚಿನಿವಾರ್
ಇದನ್ನೂ ಓದಿ: ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತರಿಗೆ ಸ್ವಾರ್ಥ ರಾಜಕಾರಣಿಗಳ ಬಗ್ಗೆ ಎಚ್ಚರ ಅಗತ್ಯ – ಸಿ.ಜಿ.ಮಂಜುಳಾ