Home ಬೆಂಗಳೂರು ರಾಜ್ಯದಲ್ಲಿ ಇನ್ಮುಂದೆ ಮೆಡಿಕಲ್ ಹಿಸ್ಟರಿ ಡಿಜಿಟಲ್‌ ರೂಪದಲ್ಲಿ ಲಭ್ಯ – ರಾಜ್ಯ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಇನ್ಮುಂದೆ ಮೆಡಿಕಲ್ ಹಿಸ್ಟರಿ ಡಿಜಿಟಲ್‌ ರೂಪದಲ್ಲಿ ಲಭ್ಯ – ರಾಜ್ಯ ಆರೋಗ್ಯ ಇಲಾಖೆ

ಬೆಂಗಳೂರು : ರಾಜ್ಯದ(Karnataka) ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯೊಂದಕ್ಕೆ ಚಾಲನೆ ಸಿಕ್ಕಿದೆ. ಸಾರ್ವಜನಿಕರು ಆಸ್ಪತ್ರೆಗೆ(Hospital) ಹೋಗುವಾಗ ತಮ್ಮ ಹಳೆಯ ವೈದ್ಯಕೀಯ ದಾಖಲೆಗಳ(Medical record) ದೊಡ್ಡ ಫೈಲ್ ಹಿಡಿದು ಅಲೆಯುವ ಸಂಕಷ್ಟಕ್ಕೆ ಇನ್ಮುಂದೆ ಮುಕ್ತಿ ಸಿಗಲಿದೆ. ರೋಗಿಗಳ ಸಮಗ್ರ ಚಿಕಿತ್ಸಾ ಇತಿಹಾಸವನ್ನು (ಮೆಡಿಕಲ್ ಹಿಸ್ಟರಿ) ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಹೊಸ ‘ಆಸ್ಪತ್ರೆ ನಿರ್ವಹಣೆ ವ್ಯವಸ್ಥೆ’ (HMS) ಮತ್ತು ಸಮುದಾಯ ಆರೋಗ್ಯ ವ್ಯವಸ್ಥೆಯನ್ನು ಸಂಯೋಜಿಸಿ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಇಲ್ಲಿ ರೋಗಿಯ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಸಂಖ್ಯೆಯೇ ಆತನ ಡಿಜಿಟಲ್ ಆರೋಗ್ಯ ಗುರುತಿನ ಚೀಟಿಯಾಗಿ ಕೆಲಸ ಮಾಡಲಿದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಇತಿಹಾಸ ತಿಳಿಯಿರಿ
ಮೊದಲ ಹಂತವಾಗಿ ಆಸ್ಪತ್ರೆಗಳ ನಿರ್ವಹಣೆಗಾಗಿ ವಿಶೇಷ ಆ್ಯಪ್‌ಗಳನ್ನು ಸಿದ್ಧಪಡಿಸಲಾಗಿದೆ. ಸದ್ಯ ವಿಜಯಪುರ, ದಾವಣಗೆರೆ ಹಾಗೂ ಮೈಸೂರು ಜಿಲ್ಲಾಸ್ಪತ್ರೆಗಳಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ರೋಗಿ ಆಸ್ಪತ್ರೆಗೆ ಬಂದಾಗ ಅಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಆತನ ಎಬಿಎಚ್‌ಎ (ABHA) ಐಡಿ ಮೂಲಕ ಈ ಹಿಂದೆ ಆತ ಪಡೆದ ಚಿಕಿತ್ಸೆ ಮತ್ತು ಔಷಧಿಗಳ ವಿವರ ವೈದ್ಯರ ಮೊಬೈಲ್ ಪರದೆಯ ಮೇಲೆ ಲಭ್ಯವಾಗಲಿದೆ. ಚಿಕಿತ್ಸೆಯ ನಂತರ ಹೊಸ ವಿವರಗಳನ್ನೂ ಇದೇ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಮನೆ ಬಾಗಿಲಿಗೇ ಬರಲಿದೆ ‘ಸಮಸ್ತಾ’ ಆ್ಯಪ್‌
ಇನ್ನೊಂದೆಡೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿದಾಗ ಕುಟುಂಬಸ್ಥರ ಆರೋಗ್ಯದ ಮಾಹಿತಿ ಸಂಗ್ರಹಿಸಲು ‘ಸಮಸ್ತಾ’ ಎಂಬ ವಿಶೇಷ ಆ್ಯಪ್ ಬಳಸಲಿದ್ದಾರೆ. ವಿಶೇಷವಾಗಿ ಗರ್ಭಿಣಿಯರು, ಮಕ್ಕಳ ಆರೋಗ್ಯ, ಲಸಿಕಾಕರಣ, ಬಿಪಿ ಮತ್ತು ಶುಗರ್‌ನಂತಹ ದೀರ್ಘಕಾಲದ ಕಾಯಿಲೆಗಳ ವಿವರಗಳನ್ನು ಇದರಲ್ಲಿ ದಾಖಲಿಸಲಾಗುತ್ತದೆ. ಉಡುಪಿಯಲ್ಲಿ ಈಗಾಗಲೇ ಇದರ ಯಶಸ್ವಿ ಪರೀಕ್ಷೆ ನಡೆದಿದ್ದು, ‘ಗೃಹ ಆರೋಗ್ಯ’ ಯೋಜನೆಯಡಿ ಜನರ ಆರೋಗ್ಯದ ಸ್ಥಿತಿಗತಿ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತಿದೆ.

ಒಟಿಪಿ ಮೂಲಕ ರೋಗಿಯ ದಾಖಲೆಗಳಿಗೆ ಸೂಪರ್ ಭದ್ರತೆ
‘ಸಮಸ್ತಾ’ ಮತ್ತು ‘ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ’ ಎರಡನ್ನೂ ರೋಗಿಯ ಎಬಿಎಚ್‌ಎ ಖಾತೆಗೆ ಲಿಂಕ್ ಮಾಡಲಾಗುತ್ತದೆಯಲ್ಲದೆ, ಈ ಎಲ್ಲಾ ವೈಯಕ್ತಿಕ ದಾಖಲೆಗಳು ‘ಪಿಎಚ್‌ಆರ್’ (PHR) ಆ್ಯಪ್‌ನಲ್ಲಿ ಅತ್ಯಂತ ಸುರಕ್ಷಿತವಾಗಿರಲಿವೆ. ರೋಗಿಯ ವೈಯಕ್ತಿಕ ಗೌಪ್ಯತೆಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದ್ದು, ರೋಗಿಯ ಮೊಬೈಲ್‌ಗೆ ಬರುವ ಒಟಿಪಿ (OTP) ಸಂಖ್ಯೆಯನ್ನು ನಮೂದಿಸಿ ಆತನ ಒಪ್ಪಿಗೆ ಪಡೆದ ನಂತರವಷ್ಟೇ ವೈದ್ಯರು ಹಳೆಯ ದಾಖಲೆಗಳನ್ನು ನೋಡಲು ಸಾಧ್ಯವಾಗುತ್ತದೆ.

ಮುಂದಿನ ವರ್ಷದ ಆರಂಭದಿಂದ ರಾಜ್ಯಾದ್ಯಂತ ಜಾರಿ
ಮೂರು ವರ್ಷಗಳ ಹಿಂದೆ ಬಿಹಾರದಲ್ಲಿ ಇಂತಹ ವ್ಯವಸ್ಥೆ ಜಾರಿಗೆ ಬಂದಿದ್ದರೂ, ಅಲ್ಲಿ ಒಂದೇ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಗಿತ್ತು. ಆದರೆ ಕರ್ನಾಟಕ ಸರ್ಕಾರ ಸುರಕ್ಷತೆಯ ದೃಷ್ಟಿಯಿಂದ ಮೂರ್ನಾಲ್ಕು ಸಂಸ್ಥೆಗಳ ಮೂಲಕ ಇದನ್ನು ಜಾರಿಗೆ ತರುತ್ತಿದೆ. ಈಗಾಗಲೇ ತಾಂತ್ರಿಕ ಬಿಡ್ ಪ್ರಕ್ರಿಯೆಗಳು ಮುಗಿದಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಆರ್ಥಿಕ ಬಿಡ್ ಪ್ರಕ್ರಿಯೆ ಮುಕ್ತಾಯವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ (2027) ಆರಂಭದಿಂದಲೇ ರಾಜ್ಯಾದ್ಯಂತ ಈ ಅತ್ಯಾಧುನಿಕ ಡಿಜಿಟಲ್ ಆರೋಗ್ಯ ಸೇವೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

You cannot copy content of this page

Exit mobile version