Saturday, April 27, 2024

ಸತ್ಯ | ನ್ಯಾಯ |ಧರ್ಮ

“ದುಡ್ಡೆಂಬ ದೊಡ್ಡಪ್ಪನ ತಾಪತ್ರಯಗಳು”

ನಮ್ಮ ಹಿರಿಯರು ವರ್ಷಕ್ಕೊಮ್ಮೆ ದಸರೆಗೋ, ದೀಪಾವಳಿಗೋ ಮನೆಯವರೆಲ್ಲರಿಗೂ ಬಟ್ಟೆ ಖರೀದಿ ಮಾಡುತ್ತಿದ್ದವರು. ಅವಶ್ಯಕತೆಯಿರದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮ್ಯೂಸಿಯಂ ಮಾಡುವ ಯಾವ ಹಂಬಲಗಳೂ ಇಲ್ಲದೆ ಬದುಕಿದ್ದವರು. ಮಿನಿಮಲಿಸಂ ಎಂಬ ಪದವೊಂದು ಹುಟ್ಟುವುದಕ್ಕೆ ಮುನ್ನವೇ ನಿಜವಾದ ಮಿನಿಮಲಿಸ್ಟ್ ಆಗಿ ಅರ್ಥಪೂರ್ಣವಾಗಿ ತಮ್ಮ ಜೀವನವನ್ನು ಸಾಗಿಸಿದವರು. ಇಂದು ಮಹಾನಗರಗಳಲ್ಲಿ ದುಡಿಯುವ ಮಂದಿಗೆ ಲಕ್ಷ ದುಡಿದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ. ಆಸೆಗಳು ಮುಗಿಯುವುದಿಲ್ಲ. ಮೆಟ್ರೋಸಿಟಿಗಳಲ್ಲಿ ಬಾಳುತ್ತಿರುವ ನಮ್ಮಂಥವರು ಈ ಬಗೆಯ ಜೀವನ ಶೈಲಿಯತ್ತ ಮತ್ತೆ ಮರಳ ಬೇಕಿದೆ ಪ್ರಸಾದ್‌ ನಾಯ್ಕ್‌ , ದೆಹಲಿ

“ನಮ್ಮಲ್ಲಿ ಮಧ್ಯಮ ವರ್ಗ ಅನ್ನೋದೇ ಇಲ್ಲ”, ಎಂದರವರು.

ಹಾಗಂದರೇನಪ್ಪ ಎಂದು ತಲೆಕೆರೆದುಕೊಂಡು ನಾನು ಮೈಯೆಲ್ಲಾ ಕಿವಿಯಾಗಿ ಕೂತೆ. ನಾನಾಗ ಆಫ್ರಿಕಾ ಖಂಡದಲ್ಲಿರುವ ರಿಪಬ್ಲಿಕ್ ಆಫ್ ಅಂಗೋಲಾ ಎಂಬ ದೇಶದ ಅಜ್ಞಾತ ಮೂಲೆಯೊಂದರಲ್ಲಿದ್ದೆ. ಅಂದು ನನ್ನೊಂದಿಗೆ ಮಾತಾಡುತ್ತಿದ್ದಿದ್ದು ಡಿನಿಸ್ ಜೂಲಿಯೋ ಮಾರ್ಟಿನ್ಸ್ ಎಂಬ ಹೆಸರಿನ ಮಧ್ಯವಯಸ್ಕ. ನನ್ನ ಮತ್ತು ಡಿನಿಸ್ ಮಧ್ಯೆ ಅಂಗೋಲನ್ ತರುಣ ಮಿಗೆಲ್ ಎಂಬೋಸೋ ಕೂಡ ಕೂತಿದ್ದ. ಇಂಗ್ಲಿಷ್ ಮಾತಾಡುತ್ತಿದ್ದ ನನ್ನ ಮತ್ತು ಪೋರ್ಚುಗೀಸ್-ಕಿಕೋಂಗೊ ಮಾತಾಡುತ್ತಿದ್ದ ಡಿನಿಸ್ ಮಧ್ಯೆ ಕೂತಿದ್ದ ಮಿಗೆಲ್ ಮಹಾಶಯನ ಕೆಲಸವು ನಮ್ಮಿಬ್ಬರನ್ನು ಬೆಸೆಯುವುದಾಗಿತ್ತು. ಆ ದೃಶ್ಯವು ಮೇಲ್ನೋಟಕ್ಕೆ ಯಕ್ಷಗಾನ ತಾಳಮದ್ದಲೆಗಳಲ್ಲಿ ಕಾಣುವಂತೆ ಇಬ್ಬದಿಗಳಲ್ಲಿ ಕೂತಿದ್ದ ಅರ್ಥಧಾರಿಗಳು ಮತ್ತು ಮಧ್ಯದಲ್ಲಿ ಕೂತಿದ್ದ ಒಬ್ಬ ಭಾಗವತರ ಪ್ರಸ್ತುತಿಯಂತೆಯೂ ಇತ್ತು.

ತನ್ನ ಮಾತನ್ನು ಮುಂದುವರಿಸಿದ ಡಿನಿಸ್ ಅಂಗೋಲಾದಲ್ಲಿರುವ ಎರಡೇ ಎರಡು ಸೋಶಿಯಲ್ ಸ್ಟೇಟಸ್ ಬಗ್ಗೆ ನನಗೆ ಸಂಕ್ಷಿಪ್ತವಾಗಿ ಹೇಳಿದ್ದರು. ಅದೇನೆಂದರೆ ಕೂಡಿಟ್ಟ ಸಂಪತ್ತು ಹೇರಳವಾಗಿದ್ದ, ಬೋರಾದಾಗಲೆಲ್ಲಾ ಯೂರೋಪ್ ಪ್ರವಾಸಗಳನ್ನು ಮಾಡುತ್ತಿದ್ದ ಮತ್ತು ಸ್ವರ್ಣಲೇಪಿತ ಶೌಚಾಲಯಗಳಲ್ಲಿ ಹಗುರಾಗುತ್ತಿದ್ದ ಸಿರಿವಂತರ ಎಲೀಟ್ ವರ್ಗ ಒಂದು ಕಡೆ. ಇನ್ನು ದಿನಕ್ಕೆರಡು ಹೊತ್ತಿಗೆ ಅನ್ನ ನಸೀಬಾದರೆ ದಿನವು ಹೇಗೋ ಮುಗಿದು ಹೋಗುತ್ತಪ್ಪ ಎಂದು ಯೋಚಿಸುವ ಕಡುಬಡವರ ವರ್ಗ ಮತ್ತೊಂದು ಕಡೆ. ದೇಶವೊಂದರ ನಾಗರಿಕರ ಮಧ್ಯೆ ಸಂಪತ್ತಿನ ಹಂಚಿಕೆಯಲ್ಲಿ ಇಷ್ಟು ದೊಡ್ಡ ಕಂದಕಗಳು ಸೃಷ್ಟಿಯಾಗಿ ಬಿಟ್ಟಾಗ ಅಲ್ಲಿನ ಆರ್ಥಿಕತೆಯೂ ಕ್ರಮೇಣ ದೇವರಿಗಷ್ಟೇ ಪ್ರೀತಿ ಎಂಬಂತಾಗುತ್ತದೆ. ಅಂಗೋಲಾದ ಪರಿಸ್ಥಿತಿ ಹಾಗಿದ್ದಿದ್ದು ಕೂಡ ಸತ್ಯ.

ಸಂಪತ್ತಿನ ವಿಚಾರದಲ್ಲಿ ಈ ಪೀಠಿಕೆ ಏಕೆಂದರೆ ಮೊದಲಿಗೆ “ಹೇರಳ” ಮತ್ತು “ಅಭಾವ”ಗಳೆಂಬ ಎರಡು ಧ್ರುವಗಳನ್ನು ಸ್ಪಷ್ಟವಾಗಿ ಗುರುತಿಸುವುದು ಮತ್ತು ನಂತರ ಇವೆರಡು ಧ್ರುವಗಳ ನಡುವಿನಲ್ಲಿರುವ ಸೂಕ್ಷ್ಮ ಆಯಾಮಗಳನ್ನು ಗಮನಿಸುವುದು. ಬಡತನವು ಕವಿತೆಯ ಸಾಲುಗಳಲ್ಲಷ್ಟೇ ಚಂದ ಎಂಬ ಮಾತಿದೆ. ನಮ್ಮಲ್ಲಿ ಬಡತನವನ್ನು ಹೆಚ್ಚೇ ರೊಮ್ಯಾಂಟಿಸೈಸ್ ಮಾಡುತ್ತಿದ್ದೇವೆ ಎನ್ನುವುದರ ಜೊತೆಗೇ ಶ್ರೀಮಂತಿಕೆಯೆಂಬ ತಳವಿಲ್ಲದ ಮಡಕೆಯನ್ನು ತುಂಬಿಸಲು ನಾವು ಜಿದ್ದಿಗೆ ಬಿದ್ದಂತೆ ಹೆಣಗಾಡುತ್ತಲೇ ಇದ್ದೇವೆ ಎನ್ನುವುದನ್ನು ಕೂಡ ಒಪ್ಪಲೇಬೇಕಾಗುತ್ತದೆ. ಮಹಾನಗರಗಳಲ್ಲಂತೂ ಇದು ಅಕ್ಷರಶಃ ಸತ್ಯ.

ಹಾಗಾದರೆ ಮನುಷ್ಯನ ಬಳಿ ಎಷ್ಟು ದುಡ್ಡಿರಬೇಕು?

ಕಲಾಂ ಮತ್ತು ಖುಷ್ವಂತ್ ಸಿಂಗ್

ಖ್ಯಾತ ಲೇಖಕ, ಪತ್ರಕರ್ತ ಸರ್ದಾರ್ ಖುಷ್ವಂತ್ ಸಿಂಗ್ ಇದರ ಬಗ್ಗೆ ಚಂದದ ಒಂದು ಲೇಖನವನ್ನೇ ಬರೆದಿದ್ದಾರೆ. ಬಡತನವನ್ನು ಅನಗತ್ಯ ಕಾವ್ಯಾತ್ಮಕ ಭಾಷೆಯಲ್ಲಿ ವರ್ಣಿಸಲು ಹೋಗದ ಸಿಂಗ್, ಸಿರಿವಂತಿಕೆಯ ಬಗ್ಗೆಯೂ ಭಾವೋದ್ರೇಕ ಗೊಂಡವರಂತೆ ಬರೆಯುವುದಿಲ್ಲ. ಹಾಗೆ ನೋಡಿದರೆ ಅವರ ಕೌಟುಂಬಿಕ ಹಿನ್ನೆಲೆಯು ಶ್ರೀಮಂತಿಕೆಯದ್ದೇ ಆಗಿತ್ತು. ಆದರೆ ಈ ಎಲೀಟ್ ವರ್ಗದ ಬಗೆಗಿನ ಮೋಹವು ಅವರ ಬರಹಗಳಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಬದಲಾಗಿ ಅಲ್ಲಿರುವ ಆಷಾಢಭೂತಿತನವನ್ನು ಅವರು ಟೀಕಿಸಿದ್ದೇ ಹೆಚ್ಚು. ಈ ಬಗೆಯ ನಿರ್ಲಿಪ್ತ ಮನಸ್ಥಿತಿಯು ಅವರ ಓದು-ಬರವಣಿಗೆಗೂ ಅನ್ವಯವಾಗುತ್ತಿತ್ತು ಎಂಬ ಮಾತಿದೆ. ಶಿಸ್ತಿನ ಜೀವನ ಶೈಲಿಯನ್ನು ಮೈಗೂಡಿಸಿ ಕೊಂಡಿದ್ದ ಸಿಂಗ್ ಶಿಸ್ತಾಗಿ ಕೂತು ತಣ್ಣಗೆ ಬರೆಯುತ್ತಿದ್ದರೇ ಕೊರತು, ಈ ಬಗ್ಗೆ ವಿಪರೀತ ಎಂಬಷ್ಟಿನ ಹಪಾಹಪಿಯು ಅವರಿಗಿರಲಿಲ್ಲವಂತೆ.

ಜೀವನೋಪಾಯಕ್ಕೆ ಆದಾಯದೊಂದಿಗೆ ತುರ್ತು ಅಗತ್ಯಕ್ಕೊಂದು ಚಿಕ್ಕ ಗಂಟು, ವರ್ಷಕ್ಕೊಂದು ಪ್ರವಾಸ ಹೋಗಲು, ಅಪರೂಪಕ್ಕೊಮ್ಮೆ ತಮ್ಮದೇ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಲು ತಕ್ಕಮಟ್ಟಿನ ಒಂದು ಉಳಿತಾಯ, ಕೊನೆಗಾಲದಲ್ಲಿ ನೆರವಿಗೆ ಬರಬಲ್ಲ ಒಂದಿಷ್ಟು ಇಡುಗಂಟು, ಒಟ್ಟಾರೆಯಾಗಿ ವ್ಯಕ್ತಿಯೊಬ್ಬನಿಗೆ ಒಂದು ಸಾಮಾನ್ಯ ಬದುಕನ್ನು ಸಂತೃಪ್ತನಾಗಿ ಕಳೆಯುವಷ್ಟು ದುಡ್ಡಿದ್ದರೆ ಸಾಕು ಎಂದು ಸೊಗಸಾಗಿ ಮನಮುಟ್ಟುವಂತೆ ಬರೆಯುತ್ತಾರೆ ಖುಷ್ವಂತ್ ಸಿಂಗ್. ಸಂಪತ್ತಿನ ಬಗ್ಗೆ ಓದಲೇಬೇಕಾದ ಬೆರಳೆಣಿಕೆಯ ಅತ್ಯುತ್ತಮ ಲೇಖನಗಳಲ್ಲಿ ಇದೂ ಒಂದು.

ಆದರೆ ಖುಷ್ವಂತ್ ಸಿಂಗ್ ಹೇಳುವ ಸಾಮಾನ್ಯ ಮತ್ತು ಸಂತೃಪ್ತ ಬದುಕಿನ ಪರಿಕಲ್ಪನೆಗಳು ಇಂದು ಕೊಂಚ ಮಾಸಿದಂತೆ ಕಾಣುತ್ತದೆ. ಏಕೆಂದರೆ ಪರಿಸ್ಥಿತಿಗಳು ಬದಲಾಗಿವೆ. ಕೆಲ ವರ್ಷಗಳ ಹಿಂದೆ ನನ್ನ ಪುಂಡ ಸ್ನೇಹಿತನೊಬ್ಬ ಹೆಸರು ಹೇಳಲಿಚ್ಚಿಸದ ಪ್ರಖ್ಯಾತ ಕಂಪೆನಿಯೊಂದರ ವಿಶೇಷ ಸೆಷನ್ ಒಂದಕ್ಕೆ ಒತ್ತಾಯ ಪೂರ್ವಕವಾಗಿ ಕರೆದೊಯ್ದಿದ್ದ. ದೊಡ್ಡ ವೇದಿಕೆಯೊಂದರಲ್ಲಿ ರಾಕ್ ಕಾನ್ಸರ್ಟ್ ಒಂದನ್ನು ನಡೆಸುತ್ತಿರುವವರಂತೆ ಮೇಲ್ನೋಟಕ್ಕೆ ಕಾಣುತ್ತಿದ್ದ ಆ ಕಾರ್ಯಕ್ರಮವನ್ನು ಕನಿಷ್ಠ ಖರ್ಚಿನಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಸಾಲದ್ದೆಂಬಂತೆ ಜನರ ಗಮನವನ್ನು ಸೆಳೆಯಲು ಅನಗತ್ಯ ರೋಚಕತೆ ಮತ್ತು ಗ್ಲಾಮರಸ್ ಅಂಶಗಳನ್ನು ಕೂಡ ಎಲ್ಲೆಂದರಲ್ಲಿ ತುರುಕಲಾಗಿತ್ತು. ಕೊನೆಗೆ ನಮ್ಮ ಆದಾಯದ ಬಗ್ಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳಿದ ನಂತರ ಅಲ್ಲಿ ಎರಡು ತೀರ್ಪುಗಳನ್ನು ಹೊರಡಿಸಲಾಯಿತು. ಅವುಗಳು ಒಟ್ಟಾರೆಯಾಗಿ ಹೀಗಿದ್ದವು: 1) ನಾವೆಲ್ಲರೂ ಬಡವರಾಗಿದ್ದೆವು 2) ಲಕ್ಷ-ಕೋಟ್ಯಾಧಿಪತಿಗಳಲ್ಲದ ನಾವೆಲ್ಲ ಯಾವ ಕೆಲಸಕ್ಕೂ ಬಾರದ ದಂಡಪಿಂಡಗಳಾಗಿದ್ದೆವು.

ಕೆಲ ದಿನಗಳ ನಂತರ ಆ ಸೆಷನ್ನಿನಲ್ಲಿ ಸಭಿಕರಾಗಿ ಭಾಗವಹಿಸಿದ ಹಲವರನ್ನು ಹುಡುಕಿಕೊಂಡು ಹೋಗಿ, ಅವರ ಅನಿಸಿಕೆಯನ್ನು ಕೇಳಿದಾಗ ಹಲವು ಅಚ್ಚರಿಯ ಅಂಶಗಳನ್ನು ನಾನು ಕಂಡುಕೊಂಡಿದ್ದೆ. ಅದೇನೆಂದರೆ ಆ ಭಾಷಣವನ್ನು ಕೇಳುವವರೆಗೆ ಅಲ್ಲಿಗೆ ಬಂದಿದ್ದ ಬಹಳಷ್ಟು ಮಂದಿ ತಮ್ಮನ್ನು ತಾವು ಬಡವರು ಎಂದು ಭಾವಿಸಿಯೇ ಇರಲಿಲ್ಲ. ತಿಂಗಳಿಗೆ ಐವತ್ತು ಸಾವಿರ ಹುಟ್ಟುವ ಸಂಬಳದ ದುಡಿಮೆಯ ಬಗ್ಗೆ ಅವರಿಗೆ ಹೇಳಿಕೊಳ್ಳುವಂತಹ ದೂರುಗಳೇನೂ ಇರಲಿಲ್ಲ. ಆದರೆ ನೆರೆದಿದ್ದ ಮಂದಿಯ ಚರ್ಚೆಗಳು ಕೋಟಿಗಳಲ್ಲಾಗುತ್ತಿದ್ದಾಗ ಸಹಜವಾಗಿಯೇ ಸಾವಿರಗಳಲ್ಲಿ ದುಡಿಯುತ್ತಿದ್ದ ಮಂದಿಗೆ ಕೀಳರಿಮೆಯ ಭಾವನೆಯೊಂದು ಅಚಾನಕ್ಕಾಗಿ ಮೊಳಕೆಯೊಡೆದಿತ್ತು. ತಾವು ಈವರೆಗೆ ಕಳೆದ ಜೀವನವು ಮೂರನೆಯ ದರ್ಜೆಯದ್ದು ಎಂದು ಏಕಾಏಕಿ ಅನ್ನಿಸತೊಡಗಿತ್ತು. ಎಮ್.ಎಲ್.ಎಮ್ ಎಂದೇ ಹೆಸರಾಗಿರುವ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಐಡಿಯಾಗಳು, ಪಿರಮಿಡ್ ಸ್ಕೀಮುಗಳು, ಪಾಂಝಿ ಸ್ಕೀಮುಗಳು ಇವತ್ತಿಗೂ ನಮ್ಮ ನಡುವೆ ಸಲೀಸಾಗಿ ನಡೆಯುವುದು ಮಾನವ ಮನಸ್ಸಿನ ಇಂಥದ್ದೊಂದು ದುರ್ಬಲ ಎಳೆಯನ್ನಿಟ್ಟುಕೊಂಡೇ.

ಹಳ್ಳಿ ಅಥವಾ ಪುಟ್ಟ ಪಟ್ಟಣಗಳಲ್ಲಿ ತಕ್ಕಮಟ್ಟಿನ ವ್ಯವಹಾರವೊಂದನ್ನು ನಡೆಸುತ್ತಿರುವ ಪುಟ್ಟ ಉದ್ಯಮಿಯೊಬ್ಬನ ಕನಸಿನ ಬಂಡಿಯು ಸದಾ ಮಹಾನಗರದ ಆಸುಪಾಸೇ ಗಿರಕಿ ಹೊಡೆಯುತ್ತಿರುತ್ತದೆ. ಮುಖ್ಯವಾಗಿ ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಹಾನಗರಗಳಿಗೆ ವಲಸೆ ಹೋಗುವ ಯುವಜನತೆಯು ಹಲವು ಅನಿವಾರ್ಯತೆಗಳ ಬಲೆಯಲ್ಲಿ ಸೆರೆಯಾಗಿ, ಕ್ರಮೇಣ ಅಲ್ಲೇ ಗಟ್ಟಿಯಾಗಿ ಬೇರೂರಬೇಕಾದ ಆಯ್ಕೆಗೆ ಜೋತುಬೀಳುತ್ತದೆ. ತಿಂಗಳ ಕೊನೆಯಲ್ಲಿ ಸಂಬಳ ಎಣಿಸುವಂತಹ ಉದ್ಯೋಗಿಯಂತೂ ತರಹೇವಾರಿ ದೀರ್ಘಾವಧಿಯ ಸಾಲಗಳು, ನಿಯಮಿತವಾಗಿ ಬಂದು ಕದ ತಟ್ಟುವ ಇ.ಎಮ್.ಐ ಗಳು, ಕುಟುಂಬದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ-ವಿವಾಹದ ಖರ್ಚು… ಇತ್ಯಾದಿ ಮುಗಿಯದ ಓಟದಲ್ಲೇ ಕಳೆದುಹೋಗಿ ತನ್ನ ಆಯಸ್ಸನ್ನು ಮುಗಿಸಿಬಿಟ್ಟಿರುತ್ತಾನೆ. ಆತನ ಪಾಲಿಗೆ ಬದುಕು ಹಾಗೆ ಬಂದು ಹೀಗೆ ಹೋಗಿರುತ್ತದೆ. ಫಾಸ್ಟ್ ಫಾರ್ವರ್ಡ್ ಮಾಡಿಬಿಟ್ಟ ಒಂದು ಪುಟ್ಟ ಕನಸಿನಂತೆ.

ಈ ಬೆಳವಣಿಗೆಗಳ ಪರಿಣಾಮವೋ ಏನೋ ಎಂಬಂತೆ “ಮಿನಿಮಲಿಸ್ಟ್” ಪರಿಕಲ್ಪನೆಯು ಕೆಲ ಪಾಶ್ಚಾತ್ಯ ದೇಶಗಳಲ್ಲಿ ನಿಧಾನವಾಗಿ ಜನಪ್ರಿಯವಾಯಿತು. ಚಂದದ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಸಂತೃಪ್ತಿಯಿಂದ ಬದುಕುವುದು ಇಲ್ಲಿನ ಧ್ಯೇಯ. ಹಟಕ್ಕೆ ಬಿದ್ದವರಂತೆ ಕಣ್ಣಿಗೆ ಬಿದ್ದಿದ್ದನ್ನೆಲ್ಲ ಖರೀದಿಸುವುದು, ಅದನ್ನು ಮನೆಯಲ್ಲಿ ತಂದು ರಾಶಿ ಹಾಕುವುದು, ಮತ್ತಷ್ಟು ಬೇಕೆಂದು ಹಂಬಲಿಸುವುದು… ಇತ್ಯಾದಿ ಮುಖ್ಯವಾಹಿನಿಯ ಕನ್ಸ್ಯೂಮರಿಸಂ ಮನಸ್ಥಿತಿಗೆ ವಿರುದ್ಧವಾಗಿದೆ ಈ ವಾದ. ಮಿನಿಮಲಿಸ್ಟ್ ಗಳು ಹೇಳುವ ಪ್ರಕಾರ ಈ ಬಗೆಯ ಜೀವನಶೈಲಿಯನ್ನು ಅಳವಡಿಸಿ ಕೊಂಡಾಗಿನಿಂದ, ಹಣಕಾಸಿಗೆ ಸಂಬಂಧಪಟ್ಟಂತೆ ಅವರ ಮೇಲಿದ್ದ ಅನಗತ್ಯ ಮಾನಸಿಕ ಒತ್ತಡಗಳು ಮರೆಯಾಗಿ ನಿರಾಳವಾಗಿದೆಯಂತೆ. 

ಬಾದಲ್‌ ಅವರೊಂದಿಗೆ ಲೇಖಕರು

ಕೆಲ ವರ್ಷಗಳ ಹಿಂದೆ ನಾನು ದಿಲ್ಲಿಯಲ್ಲಿ ಬಾದಲ್ ಚಿತ್ರಕಾರ್ ಎಂಬ ಖ್ಯಾತ ಚಿತ್ರಕಲಾವಿದರೊಬ್ಬರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಹೀಗೆ ಶುರುವಾದ ಹರಟೆಯೊಂದು ನಂತರ ಚಂದದ ಸಂದರ್ಶನವೊಂದರಲ್ಲಿ ಕೊನೆಯಾಗಿತ್ತು. ಬಾದಲ್ ರವರ ಹಲವು ಕಲಾಕೃತಿಗಳು ಭಾರತದ ಪ್ರತಿಷ್ಠಿತ ಮ್ಯೂಸಿಯಂಗಳಲ್ಲಿ ಗತ್ತಿನಿಂದ ಕೂತಿವೆ. ಗೀತರಚನಾಕಾರ ನೀರಜ್ ಸೇರಿದಂತೆ ಹಲವು ಬಾಲಿವುಡ್ ದಿಗ್ಗಜರೊಂದಿಗೆ ಅವರಿಗೆ ನಿಕಟ ಸಂಪರ್ಕವಿತ್ತು. ಈ ದೇಶದ ಕೆಲ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳಿಂದ ಬಾದಲ್ ತಮ್ಮ ಕಲಾಜಗತ್ತಿನ ಸಾಧನೆಗಾಗಿ ಸನ್ಮಾನಿಸಲ್ಪಟ್ಟವರೂ ಹೌದು.

ದೆಹಲಿ ನಿವಾಸಿಯಾಗಿರುವ ಬಾದಲ್ ಚಿತ್ರಕಾರ್ ಮನಸ್ಸು ಮಾಡಿದ್ದರೆ ಹಲವು ಅಕಾಡೆಮಿ, ಕಲ್ಚರಲ್ ಇನ್ಸ್ಟಿಟ್ಯೂಟ್ ಗಳ ಅಧ್ಯಕ್ಷರೋ, ನಿರ್ದೇಶಕರೋ ಆಗಿ ಐಷಾರಾಮಿ ಬದುಕನ್ನು ಸವಿಯಬಹುದಿತ್ತು. ಆದರೆ ಅವರು ಇದ್ಯಾವುದರ ಗೋಜೇ ಇಲ್ಲದವರಂತೆ ದಿಲ್ಲಿಯಲ್ಲಿರುವ ತಮ್ಮ ಚಿಕ್ಕದೊಂದು ಗೂಡಿನಂತಹ ಮನೆಯಲ್ಲಿ ಹಾಯಾಗಿದ್ದಾರೆ. ಎಂಭತ್ತರ ಸಾಲಿನಲ್ಲಿರುವ ಬಾದಲ್ ಇಂದಿಗೂ ಮನಸಾರೆ ನಗುತ್ತಾರೆ. ಯುವಕರನ್ನು ನಾಚಿಸುವಂತೆ ಬುದುಬುದು ಹೆಜ್ಜೆಹಾಕುತ್ತಾ ವೇಗವಾಗಿ ನಡೆಯುತ್ತಾರೆ. ಏನ್ಸಾರ್, ಫೋಟೋಗೆ ಪೋಸ್ ಕೂಡಲು ಕೂಡ ನಿಮಗೆ ಬರೋದಿಲ್ವಲ್ರೀ ಎಂದು ನನಗೆ ಕೀಟಲೆ ಮಾಡುತ್ತಾರೆ. ಆ ವಯಸ್ಸಿನಲ್ಲೂ ಚಿತ್ರಕಲೆಯೊಂದನ್ನು ಬಿಟ್ಟು ಅವರಿಗೆ ಬೇರೇನೂ ತಿಳಿದಿರಲಿಲ್ಲ. ಅವರ ಸುತ್ತಮುತ್ತ ಬಣ್ಣಗಳು, ಕ್ಯಾನ್ವಾಸುಗಳು ಮತ್ತು ಆಸಕ್ತ ವಿದ್ಯಾರ್ಥಿಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ವಿಶೇಷವೆಂದರೆ ಅವರು ಚಕಚಕನೆ ಬಿಡಿಸುತ್ತಿದ್ದ ಹಲವು ರೇಖಾಚಿತ್ರಗಳು ದಿಲ್ಲಿಯ ಮಾರ್ಕೆಟ್ಟುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗುತ್ತಲೂ ಇತ್ತು. ಅದೂ ಖ್ಯಾತಿಯ ಭಾರವನ್ನು ಹೊತ್ತಿದ್ದ ಅವರ ಹೆಸರಿನ ಹಂಗಿಲ್ಲದೆ!

ಕಲಾಂ ಮತ್ತು ಬಾದಲ್

ನಮ್ಮ ಹಿರಿಯರು ವರ್ಷಕ್ಕೊಮ್ಮೆ ದಸರೆಗೋ, ದೀಪಾವಳಿಗೋ ಮನೆಯವರೆಲ್ಲರಿಗೂ ಬಟ್ಟೆ ಖರೀದಿ ಮಾಡುತ್ತಿದ್ದವರು. ತಕ್ಕಮಟ್ಟಿನ ಸಂಪಾದನೆಯಲ್ಲೇ ಆರೇಳು ಮಂದಿಯ ಕುಟುಂಬವನ್ನು ಸಲೀಸಾಗಿ ನಡೆಸುತ್ತಿದ್ದವರು. ಅವಶ್ಯಕತೆಯಿರದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮ್ಯೂಸಿಯಂ ಮಾಡುವ ಯಾವ ಹಂಬಲಗಳೂ ಇಲ್ಲದೆ ಬದುಕಿದ್ದವರು. ಮಿನಿಮಲಿಸಂ ಎಂಬ ಪದವೊಂದು ಹುಟ್ಟುವುದಕ್ಕೆ ಮುನ್ನವೇ ನಿಜವಾದ ಮಿನಿಮಲಿಸ್ಟ್ ಆಗಿ ಅರ್ಥಪೂರ್ಣವಾಗಿ ತಮ್ಮ ಜೀವನವನ್ನು ಸಾಗಿಸಿದವರು. ಇಂದು ಮಹಾನಗರಗಳಲ್ಲಿ ದುಡಿಯುವ ಮಂದಿಗೆ ಲಕ್ಷ ದುಡಿದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ. ಆಸೆಗಳು ಮುಗಿಯುವುದಿಲ್ಲ. ಸಂತೃಪ್ತಿಯಂತೂ ಕೈಗೆಟುಕದಿರುವ ದೂರದ ನಕ್ಷತ್ರ.

ಬಾದಲ್ ಚಿತ್ರಕಾರ್ ಅವರ ಕಲಾಕೃತಿ

ಮೆಟ್ರೋಸಿಟಿಗಳಲ್ಲಿ ಬಾಳುತ್ತಿರುವ ನಮ್ಮಂಥವರು ಈ ಬಗೆಯ ಜೀವನಶೈಲಿಯತ್ತ ಮತ್ತೆ ಮರಳಬೇಕಿದೆ.

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ-

“ಕಂಡಿದ್ದು, ಕೇಳಿದ್ದು, ದಕ್ಕಿದ್ದು” https://peepalmedia.com/seen-heard-found/

ಮಹಾನಗರವೊಂದರ ಜೀವನ ಕಥನ https://peepalmedia.com/a-life-story-of-a-metropolis/

ಬದುಕಿನ ಕೊಲಾಜ್ ಚಿತ್ರಪಟಗಳು” https://peepalmedia.com/collage-pictures-of-life/

“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ” https://peepalmedia.com/the-innovative-quest-of-networking/

ಮಹಾನಗರ Vs. ಮಹತ್ವಾಕಾಂಕ್ಷೆ”https://peepalmedia.com/metropolis-city-vs-ambition/

“ಒಂದು ಮಿನಿಮಳೆಯ ಕಥೆ”https://peepalmedia.com/the-story-of-a-mini-rain/

“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/

“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

Related Articles

ಇತ್ತೀಚಿನ ಸುದ್ದಿಗಳು