ಕಲಬುರಗಿ: ಕಲಬುರಗಿ ಜಿಲ್ಲೆಯ ಜೀವರ್ಗಿ ಬಳಿ ಶನಿವಾರ ಬೆಳಗಿನ ಜಾವ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆಯಿಂದ ಗುಲ್ಬರ್ಗದ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಗುಂಪು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಬಂದರು. ಮೃತರನ್ನು ಮೆಹಬೂಬ್ ಗದ್ದನಕೇರಿ (52), ವಾಜಿದ್ ಮೆಹಬೂಬ್ (2), ಮೆಹಬೂಬಿ ಉಸ್ಮಾನಸಾಬ್ (53), ಪ್ರಿಯಾಂಕಾ ಮಂಜುನಾಥ್ (13), ಮತ್ತು ಮೆಹಬೂಬ್ ಉಸ್ಮಾನಸಾಬ್ (29) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾದರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣವರ್, ಉಪ ಎಸ್ಪಿ ಲೋಕೇಶ್ವರ್ ಮತ್ತು ಸಿಪಿಐ ರಾಜೇಸಾಬ್ ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.