ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕಾಡಾನೆ-ಮಾನವ ಸಂಘರ್ಷ ಜಟಿಲವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಸಂಸದ ಶ್ರೇಯಸ್ ಪಟೇಲ್ ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಮಸ್ಯೆ ನಿವಾರಣೆಗೆ ಸಕಲೇಶಪುರ ತಾಲೂಕು ಹೆತ್ತೂರು ಭಾಗದ 8 ಗ್ರಾಮಗಳ 412 ರೈತರು ಒಟ್ಟು 2261.21 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ.
2012ರಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಸಮಿತಿಯು ಈ ಸಂಬಂಧ ಸಮಗ್ರ ವರದಿ ತಯಾರಿಸಿದೆ. ಹೆತ್ತೂರು ಭಾಗದಲ್ಲಿ ಕಾಡಾನೆಗಳು ಹೆಚ್ಚಿರುವುದರಿಂದ ಅಲ್ಲಿನ ರೈತರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಸೂಕ್ತ ಪರಿಹಾರ ಕಲ್ಪಿಸಿದರೆ ಭೂಮಿ ನೀಡಲು ಈಗಲೂ ರೈತರು ಸಿದ್ಧರಿದ್ದಾರೆ ಎಂದು ಮನವರಿಕೆ ಮಾಡಿದರು. ಆದ್ದರಿಂದ ಕಾಂಪಾ ಯೋಜನೆಯಡಿ ಪರಿಹಾರ ಕಲ್ಪಿಸಬೇಕು ಎಂದು ಕೋರಿದರು.ಆನೆ ಕಾರಿಡಾರ್ ನಿರ್ಮಾಣವೊಂದೇ ಅಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸುವ ದಾರಿಯಾಗಿದೆ.
ಒಟ್ಟು 416 ಭೂ ಮಾಲೀಕರು ತಮ್ಮ 2261.21 ಎಕರೆ ಭೂಮಿಯನ್ನು ಹಸ್ತಾಂತರಿಸಲು ಲಿಖಿತ ಮನವಿಯನ್ನೂ ನೀಡಿದ್ದರು.
ಅರಣಿ ಗ್ರಾಮದ 55 ರೈತರು 368.13 ಎಕರೆ, ಬೋರನಮನೆ 62 ರೈತರು 406.19 ಎಕರೆ, ಬಾಳೆಹಳ್ಳ ಗ್ರಾಮದ 46 ರೈತರು 272 ಎಕರೆ, ಬೆಟ್ಟಕುಮಾರಿ ಊರಿನ 62 ರೈತರು 218.37, ಮಂಕನಹಳ್ಳಿ 101 ರೈತರು 578.25 ಎಕರೆ, ಎತ್ತಿನಹಳ್ಳದ 85 ರೈತರು 369.17, ಬಾಜಿಮನೆ ಎಸ್ಟೇಟ್ನ 5 ರೈತರು 48 ಎಕರೆ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದರು.ಈ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಉದ್ದೇಶಿತ ಯೋಜನೆಗೆ ಅನುದಾನ ನೀಡುವ ಮೂಲಕ ನೆರವಾಗಬೇಕೆಂದು ಪ್ರಸ್ತಾವನೆ ಸಲ್ಲಿಸಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಬಳಿಕ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನೂ ಭೇಟಿಯಾದ ಶ್ರೇಯಸ್, ಶ್ರವಣಬೆಳಗೊಳದ ಬಾಹುಬಲಿ ನೆಲೆಸಿರುವ ವಿಂಧ್ಯಗಿರಿ ಬೆಟ್ಟವನ್ನು ಪ್ರಸಾದ್ ಯೋಜನೆ ಹಾಗೂ ಬೇಲೂರು ಚನ್ನಕೇಶವ ದೇವಾಲಯವನ್ನು ಸ್ವದೇಶ್ ದರ್ಶನ್ ಯೋಜನೆಯಡಿ ಸೇರಿಸಬೇಕು ಎಂದು ಮನವಿ ಸಲ್ಲಿಸಿದರು.ಮುಂದುವರಿದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಹಾಸನ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ಮತ್ತು 69ರ ಕಾಮಗಾರಿ ಪೂರ್ಣಗೊಳಿಸಬೇಕು. ಜೊತೆಗೆ ಮೇಲ್ಸೇತುವೆ ಕಾಮಗಾರಿಗಳನ್ನು ಆದ್ಯತೆಯಾಗಿ ಪರಿಗಣಿಸಿ ಶೀಘ್ರ ಪೂರ್ಣಗೊಳಿಸುವಂತೆ ವಿನಂತಿಸಿದರು.