ಹಾಸನ: ಜಿಲ್ಲಾಧಿಕಾರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಅವರು ಕಾನೂನಾತ್ಮಕವಾಗಿ ಮೀಸಲಾತಿ ಮಾಡಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಕಳುಹಿಸಿದ್ದೇ ಅಂತಿಮವಲ್ಲ. ಅದರಲ್ಲಿ ಕೆಲವು ತಪ್ಪುಗಳಿರುತ್ತವೆ. ಅವುಗಳನ್ನು ಸರಿಪಡಿಸಿ ಜಿಲ್ಲಾಧಿಕಾರಿ ಅವರು ಮಂಡಿಸಿದ್ದಾರೆ. ತಹಶೀಲ್ದಾರ್ ಏನೇ ಕಳುಹಿಸಿದ್ದರು ಅದನ್ನೇ ಜಿಲ್ಲಾಧಿಕಾರಿ ಒಪ್ಪಿಕೊಳ್ಳಬೇಕು ಎಂಬ ನಿಯಮ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಎಲ್ಲಿಂದ ಹಿಡಿದುಕೊಂಡು ಬಂದ್ರು ಎಂಬಂತಹ ಪದಗಳನ್ನು ಯಾರ ಬಗ್ಗೆಯೂ ಬಳಸುವುದು ಒಳ್ಳೆಯದಲ್ಲ. ಅಧಿಕಾರಿಗಳ ಬಗ್ಗೆ ಗೌರವವಾಗಿ ಮಾತನಾಡಬೇಕು ಎಂದು ಅವರು ಹೇಳಿದರು.
ನಾವೇನು ಅವರನ್ನು ಇಟ್ಟುಕೊಂಡು ಬಂದಿಲ್ಲ. ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರನ್ನು ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಿದಂತೆ ಇಲ್ಲಿಗೂ ನೇಮಕ ಮಾಡಿದ್ದಾರೆ. ತಪ್ಪಾಗಿ ಮಾತನಾಡಿದರೆ ಕಾನೂನಿನ ಪ್ರಕಾರ ಅನುಭವಿಸುತ್ತಾರೆ ಎಂದು ಸಚಿವರು ಎಚ್ಚರಿಸಿದರು. ಜಿಲ್ಲಾಧಿಕಾರಿ ಬಗ್ಗೆ ಆ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಜಿಲ್ಲಾಧಿಕಾರಿ ತಪ್ಪು ಮಾಡಿದ್ದರೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಜಿಲ್ಲಾಡಳಿತವನ್ನೇ ದೋಷಪೂರಿತವಾಗಿ ನೋಡುವ ಮನೋಭಾವನೆ ಒಳ್ಳೆಯದಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಯನ್ನು ಹೆದರಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದಾದರೆ ತನಿಖೆ ನಡೆಸಲಿ. ಆದರೆ, ಜಿಲ್ಲಾಧಿಕಾರಿ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ ಎಂದು ಶಿವಲಿಂಗೇಗೌಡ ಹೇಳಿದರು.
