Home ರಾಜ್ಯ ಹಾಸನ ಶೃಂಗೇರಿ ಮರುಎಣಿಕೆ ವಿವಾದ: ಪೋಸ್ಟಲ್ ಬ್ಯಾಲೆಟ್ ತಿದ್ದುಪಡಿ ಮೂಲಕ ಬಿಜೆಪಿ ಕ್ರಿಮಿನಲ್‌ ಕೆಲಸ ಮಾಡಿದೆ: ಸಚಿವ...

ಶೃಂಗೇರಿ ಮರುಎಣಿಕೆ ವಿವಾದ: ಪೋಸ್ಟಲ್ ಬ್ಯಾಲೆಟ್ ತಿದ್ದುಪಡಿ ಮೂಲಕ ಬಿಜೆಪಿ ಕ್ರಿಮಿನಲ್‌ ಕೆಲಸ ಮಾಡಿದೆ: ಸಚಿವ ಕೃಷ್ಣ ಬೈರೇಗೌಡ

0

ಹಾಸನ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆಯ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕಂದಾಯ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ)ಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಮತಗಳನ್ನು ಕದಿಯಲಾಗಿದೆ ಎಂದು ಅವರು ದೂರಿದ್ದಾರೆ.

ಜಿಲ್ಲಾಡಳಿತ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಸನಕ್ಕೆ ಆಗಮಿಸಿದ್ದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚುನಾವಣಾ ಅಕ್ರಮಗಳ ಕುರಿತು ಮಾಹಿತಿ ನೀಡಿದರು. “ಕಳೆದ ಬಾರಿ ಮತ ಎಣಿಕೆ ನಡೆದಾಗ ಎಲ್ಲಾ ಪಕ್ಷದ ಏಜೆಂಟ್‌ಗಳು ಒಪ್ಪಿ ಸಹಿ ಹಾಕಿದ್ದ ಅಂಚೆ ಮತಪತ್ರಗಳನ್ನು ಈ ಬಾರಿ ಮರುಎಣಿಕೆಯ ಸಂದರ್ಭದಲ್ಲಿ ದುರುದ್ದೇಶಪೂರ್ವಕವಾಗಿ ತಿದ್ದಲಾಗಿದೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ಚಲಾವಣೆಯಾಗಿದ್ದ ಮತಪತ್ರಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಸಚಿವರು ವಿವರಿಸಿದರು. “ರಾಜೇಗೌಡ ಅವರಿಗೆ ಮತ ಚಲಾವಣೆಯಾಗಿದ್ದ ಬ್ಯಾಲೆಟ್ ಪೇಪರ್‌ಗಳ ಕೆಳಭಾಗದಲ್ಲಿ ಬೇರೆಯದೇ ಶಾಯಿಯನ್ನು ಬಳಸಿ ಇತರ ಅಭ್ಯರ್ಥಿಗಳ ಹೆಸರಿನ ಮುಂದೆ ಟಿಕ್ ಮಾರ್ಕ್ ಹಾಕಲಾಗಿದೆ. ಈ ಮೂಲಕ ಆ ಮತಗಳು ಅಸಿಂಧುಗೊಳ್ಳುವಂತೆ (Invalid) ಮಾಡಲಾಗಿದೆ,” ಎಂದು ಅವರು ತಿಳಿಸಿದರು.

ಇದು ಕೇವಲ ತಾಂತ್ರಿಕ ದೋಷವಲ್ಲ, ಇದೊಂದು ವ್ಯವಸ್ಥಿತ ಕ್ರಿಮಿನಲ್ ಪಿತೂರಿ ಎಂದು ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. “ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದರೆ ಸಮಗ್ರ ತನಿಖೆ ನಡೆಯಬೇಕು. ವಿವಾದಿತ ಮತಪತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಪರೀಕ್ಷಿಸಬೇಕು. ಮೂಲ ಮತದ ಶಾಯಿ ಮತ್ತು ನಂತರ ಹಾಕಲಾದ ಟಿಕ್ ಮಾರ್ಕ್‌ನ ಶಾಯಿ ಒಂದೇ ಆಗಿದೆಯೇ ಎಂದು ಪರಿಶೀಲಿಸಿದರೆ ಸತ್ಯ ಬಯಲಾಗುತ್ತದೆ,” ಎಂದು ಅವರು ಒತ್ತಾಯಿಸಿದರು.

ಕೆಲವು ಅಧಿಕಾರಿಗಳ ವಿರುದ್ಧವೂ ಕಿಡಿಕಾರಿದ ಸಚಿವರು, “ಕೆಲವು ಅಧಿಕಾರಿಗಳು ರಾಜೇಗೌಡ ಅವರ ಪರವಾಗಿದ್ದ ಮತಪತ್ರಗಳನ್ನು ಒಂದು ಬಂಡಲ್ ಮಾಡಿಟ್ಟುಕೊಂಡು, ನಂತರ ಅದಕ್ಕೆ ತಿದ್ದುಪಡಿ ಮಾಡಿದ್ದಾರೆ. ಎಣಿಕೆ ವೇಳೆ ಆ ಬಂಡಲ್ ತೆರೆದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಚುನಾವಣಾ ದರೋಡೆ,” ಎಂದು ಕಿಡಿಕಾರಿದರು.

ಇದೇ ವೇಳೆ ಪಶ್ಚಿಮ ಬಂಗಾಳದ ಚುನಾವಣೆ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಬಿಜೆಪಿಯು ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಮತ್ತು ಐಟಿಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರ ಹಿಡಿದಿದೆ ಎಂದು ಆರೋಪಿಸಿದರು. “ಬಿಜೆಪಿ ಪ್ರಾಮಾಣಿಕ ಹಾದಿಯಲ್ಲಿ ಗೆಲುವು ಸಾಧಿಸಿಲ್ಲ. ಆದರೆ, ಜನರು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ,” ಎಂದು ಅವರು ಮಾತು ಮುಗಿಸಿದರು.

You cannot copy content of this page

Exit mobile version