Home ಅಪರಾಧ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಉದ್ವಿಗ್ನತೆ ತೀವ್ರ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಉದ್ವಿಗ್ನತೆ ತೀವ್ರ

0

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಹಿರಿಯ ಮುಖಂಡ ಸುವೆಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಾಧ್ಯಮಗ್ರಾಮ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಚಂದ್ರನಾಥ್ ರಥ್ ಅವರು ತಮ್ಮ ಸ್ಕಾರ್ಪಿಯೋ ಎಸ್‌ಯುವಿ ವಾಹನದಲ್ಲಿ ಕುಳಿತಿದ್ದ ವೇಳೆ ದಾಳಿ ನಡೆದಿದೆ. ನಾಲ್ಕು ಮೋಟಾರ್‌ಸೈಕಲ್‌ಗಳಲ್ಲಿ ಬಂದಿದ್ದ ಸುಮಾರು ಎಂಟು ಮಂದಿ ದುಷ್ಕರ್ಮಿಗಳು ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಕೋರರು ಬಳಸಿದ್ದ ಕಾರು ಮತ್ತು ಬೈಕ್‌ಗಳಿಗೆ ನಕಲಿ ನೋಂದಣಿ ಸಂಖ್ಯೆಗಳು ಅಳವಡಿಸಲಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಥ್ ಅವರ ಎದೆ ಮತ್ತು ಹೊಟ್ಟೆ ಭಾಗಗಳಿಗೆ ಹಲವು ಗುಂಡೇಟುಗಳು ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಘಟನೆಯ ಸುದ್ದಿ ತಿಳಿದ ತಕ್ಷಣ ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳಿಂದ ಜಯಗಳಿಸಿರುವ ಸುವೆಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇದು ಪೂರ್ವಯೋಜಿತ ಹಾಗೂ ತಣ್ಣಗಿನ ರಕ್ತದ ಕೊಲೆ. ನನ್ನ ಆಪ್ತರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಬಾರಾಸತ್ ಎಸ್‌ಪಿ ಪುಷ್ಪಾ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶಕ ಜಿಪಿ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

“ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ,” ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ಹತ್ಯೆ ಪ್ರಕರಣ ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸುವ ಸಾಧ್ಯತೆ ಇದೆ.

You cannot copy content of this page

Exit mobile version