ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ‘ಮಾಜಿ ಮುಖ್ಯಮಂತ್ರಿಯೊಬ್ಬರ ಲೈಂಗಿಕ ಹಗರಣ’ ಆರೋಪದ ಬೆನ್ನಲ್ಲೇ ಈಗ ವಕೀಲ ಜಗದೀಶ್ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ಯತ್ನ ನಡೆದಿದೆ.
ಭಾನುವಾರ ತಡರಾತ್ರಿ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಇರುವ ವಕೀಲ ಜಗದೀಶ್ ಮನೆ ಬಳಿ ತೆರಳಿದ ಸುಮಾರು 20 ಮಂದಿ ಕಿಡಿಗೇಡಿಗಳು ಜಗದೀಶ್ ಅವರ ಮನೆ ಸುತ್ತಲೂ ಹಲ್ಲೆಗೆ ಹೊಂಚು ಹಾಕಿ ನಿಂತಿದ್ದ ಬಗ್ಗೆ ಸ್ವತಃ ಜಗದೀಶ್ ಆರೋಪಿಸಿದ್ದಾರೆ.
ಬಂದವರೆಲ್ಲರೂ ತಾವು ಬಿಜೆಪಿ ಪಕ್ಷದವರೆಂದು ಹೇಳಿಕೊಂಡಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ. ಬಹುತೇಕ ಆಗಂತುಕರು ಭದ್ರಪ್ಪ ಲೇಔಟ್ ನ ಸ್ಲಂ ನಿವಾಸಿಗಳು ಎಂದೂ ಆರೋಪಿಸಿರುವ ಜಗದೀಶ್, ಬಂದವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಕಡೆಯವರು ಎಂದೂ ಹೇಳಿಕೊಂಡ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.
ಇದರ ಜೊತೆಗೇ ಬೆಂಗಳೂರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿರುವ ವಕೀಲ ಜಗದೀಶ್, ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ ಅರ್ಧ ಗಂಟೆಯ ನಂತರ ಸ್ಥಳಕ್ಕೆ ಪೊಲೀಸರು ಬಂದಿದ್ದು, ‘ಬಹುಶಃ ಜಗದೀಶ್ ನ ಮರ್ಡರ್ ಮಾಡಿದ ನಂತರ ಹೋಗೋಣ’ ಎಂದು ಪೊಲೀಸರು ನಿರ್ಧರಿಸಿದಂತಿದೆ ಎಂದು ಆರೋಪಿಸಿದ್ದಾರೆ.
ಬಂದ ಆಗಂತುಕರ ಬಳಿ ಮಾರಕಾಸ್ತ್ರಗಳೂ ಇದ್ದು, ವಿಡಿಯೋ ಮಾಡಿದ ಕೂಡಲೇ ಪರಾರಿಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೀಪಲ್ ಮೀಡಿಯಾ ಜೊತೆ ಹಂಚಿಕೊಂಡಿದ್ದ ವಿಡಿಯೋದಲ್ಲಿ, ಕೊಡಿಗೇಹಳ್ಳಿ ಪೊಲೀಸ್ ಇನಿಸ್ಪೆಕ್ಟರ್ ಮಹೇಶ್ ಮೇಲೆ ಗಂಭೀರವಾಗಿ ಆರೋಪ ಮಾಡಿದ್ದಾರೆ. ಬಂದ ಆಗಂತುಕರು ಶೋಭಾ ಕರಂದ್ಲಾಜೆ ಪೋಸ್ಟಿಂಗ್ ಹಾಕಿಸಿದ ವ್ಯಕ್ತಿ ಇನಿಸ್ಪೆಕ್ಟರ್ ನಮಗೆ ಗೊತ್ತು ಎಂಬಂತೆ ಆವಾಜ್ ಹಾಕಿದ್ದಾರೆ ಎಂದು ಜಗದೀಶ್ ಹೇಳಿದ್ದಾರೆ.
ಕಿಡಿಗೇಡಿಗಳ ಅರೆಸ್ಟ್ ಮಾಡಿ ವಿಚಾರಣೆ ನಡೆಸದೇ ಹೋದರೆ ಮುಂದಾಗುವ ಪರಿಣಾಮದ ಬಗ್ಗೆ ಜಗದೀಶ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಕೊನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿಯವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಒಟ್ಟಾರೆ ಮಾಜಿ ಮುಖ್ಯಮಂತ್ರಿಯೊಬ್ಬರ ಲೈಂಗಿಕ ಹಗರಣದ ಸಿಡಿ ರಾಜ್ಯದಲ್ಲಿ ಮತ್ತಷ್ಟು ಸದ್ದು ಮಾಡಲಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಗೆದುಕೊಳ್ಳಲಿದೆ ಎಂದು ವಕೀಲರಾದ ಜಗದೀಶ್ ಅವರೇ ಉತ್ತರಿಸಬೇಕಿದೆ.