Home ದೇಶ ಈ ಸರ್ಕಾರ ಇನ್ನು ಮೂರು ತಿಂಗಳಾದರೂ ಉಳಿಯುತ್ತಾ?: ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಕುರಿತು ಅನುಮಾನ...

ಈ ಸರ್ಕಾರ ಇನ್ನು ಮೂರು ತಿಂಗಳಾದರೂ ಉಳಿಯುತ್ತಾ?: ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಕುರಿತು ಅನುಮಾನ ವ್ಯಕ್ತಪಡಿಸಿದ ಎಂ.ಕೆ. ಸ್ಟಾಲಿನ್

0

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಬಿರುಗಾಳಿ ಎದ್ದಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಂಸ್ಥಾಪಕ ಹಾಗೂ ನೂತನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ಆಡಳಿತದ ಅವಧಿಯ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪ್ರಸ್ತುತ ಸರ್ಕಾರವು ದೀರ್ಘಕಾಲ ಅಧಿಕಾರದಲ್ಲಿ ಉಳಿಯಲು ಸಾಧ್ಯವೇ ಇಲ್ಲ ಎಂಬ ಸಂಶಯ ವ್ಯಕ್ತಪಡಿಸುವ ಮೂಲಕ ಸ್ಟಾಲಿನ್ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದ್ದಾರೆ.

ತಮಿಳುನಾಡಿನಲ್ಲಿ ಕಳೆದ ಸುಮಾರು ಆರು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ರಾಜಕೀಯವನ್ನು ಆಳುತ್ತಿದ್ದವು. ಆದರೆ ಇತ್ತೀಚಿನ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಭಾರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲಾಗಿತ್ತು. ಆದರೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲವೇ ದಿನಗಳು ಕಳೆದಿದ್ದರೂ, ಅದರ ಆಡಳಿತ ವೈಖರಿಯ ವಿರುದ್ಧ ವಿರೋಧ ಪಕ್ಷಗಳಿಂದ ತೀವ್ರ ವಿಮರ್ಶೆಗಳು ವ್ಯಕ್ತವಾಗುತ್ತಿವೆ.

ಇತ್ತೀಚೆಗೆ ವಿಸಿಕೆ (VCK) ಪಕ್ಷದ ಮಾಜಿ ಶಾಸಕ ಪನೈಯೂರು ಬಾಬು ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಎಂ.ಕೆ. ಸ್ಟಾಲಿನ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ಸರ್ಕಾರದ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಂಡರು. “ಪ್ರಸ್ತುತ ಸರ್ಕಾರವು ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ನಾನು ಒಂದು ನಿರ್ಧಾರ ಕೈಗೊಂಡಿದ್ದೆ. ಹೊಸದಾಗಿ ರಚನೆಯಾದ ಸರ್ಕಾರದ ಮೇಲೆ ಕನಿಷ್ಠ ಆರು ತಿಂಗಳವರೆಗೆ ಯಾವುದೇ ಬಹಿರಂಗ ಟೀಕೆ ಮಾಡಬಾರದು, ಅವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದುಕೊಂಡಿದ್ದೆ. ಆದರೆ ಪ್ರಸ್ತುತ ತಮಿಳುನಾಡಿನಲ್ಲಿ ನೆಲೆಸಿರುವ ದುಸ್ಥಿತಿಯನ್ನು ನೋಡುತ್ತಿದ್ದರೆ ಆರು ತಿಂಗಳು ಪೂರ್ಣಗೊಳ್ಳುವವರೆಗೂ ನಾನು ಕಾಯಲು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ” ಎಂದಿದ್ದಾರೆ.

ಸರ್ಕಾರದ ಭವಿಷ್ಯದ ಮೇಲೆ ಸ್ಟಾಲಿನ್ ಅನುಮಾನ: ಇಷ್ಟಕ್ಕೇ ನಿಲ್ಲಿಸದ ಸ್ಟಾಲಿನ್, ವಿಜಯ್ ಸರ್ಕಾರದ ಭವಿಷ್ಯದ ಮೇಲೆಯೇ ನೇರ ಪ್ರಶ್ನೆ ಎತ್ತಿದ್ದಾರೆ. “ಈಗಾಗಲೇ ಈ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯದ ಅನೇಕ ಟೀಕೆಗಳು ಕೇಳಿಬರುತ್ತಿವೆ. ಸಾರ್ವಜನಿಕರಲ್ಲೂ ತೀವ್ರ ಅಸಮಾಧಾನ ಹೆಚ್ಚಾಗುತ್ತಿದೆ. ಈಗಿನ ಚರ್ಚೆ ಆರು ತಿಂಗಳು, ಐದು ತಿಂಗಳು ಅಥವಾ ನಾಲ್ಕು ತಿಂಗಳ ಅಧಿಕಾರದ ಬಗ್ಗೆ ಅಲ್ಲ. ಅಸಲಿಗೆ ಈ ಸರ್ಕಾರ ಇನ್ನು ಕೇವಲ ಮೂರು ತಿಂಗಳಾದರೂ ಉsourceಳುತ್ತಾ ಇಲ್ಲವೇ ಉರುಳಿ ಬೀಳುತ್ತಾ? ಎಂಬುದೇ ಸದ್ಯದ ಪ್ರಮುಖ ಪ್ರಶ್ನೆಯಾಗಿದೆ” ಎಂದು ಸ್ಟಾಲಿನ್ ಹೇಳಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಮೂಲಕ ವಿಜಯ್ ಸರ್ಕಾರವು ಆಂತರಿಕವಾಗಿ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದನ್ನು ಸ್ಟಾಲಿನ್ ಪರೋಕ್ಷವಾಗಿ ಸೂಚಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಡಿಎಂಕೆ ಪಕ್ಷಕ್ಕೆ ಹೊಸದಾಗಿ ಸೇರಿದ ನಾಯಕರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದ ಸ್ಟಾಲಿನ್, “ತಾವು ಈ ಹಿಂದೆ ಇದ್ದ ಪಕ್ಷಗಳ ವಿರುದ್ಧ ಅನಗತ್ಯ ಹಾಗೂ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ರಾಜಕೀಯದಲ್ಲಿ ಎದುರಾಳಿಗಳನ್ನು ಗೌರವಿಸುವ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

You cannot copy content of this page

Exit mobile version