Home ದೇಶ ಹಿಂದಿ ಭಾಷಿಕ ರಾಜ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಭಾಷೆಗಳನ್ನು ಕಲಿಯುತ್ತಾರೆಯೇ?: ಕೇಂದ್ರಕ್ಕೆ ಸ್ಟಾಲಿನ್ ಪ್ರಶ್ನೆ

ಹಿಂದಿ ಭಾಷಿಕ ರಾಜ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಭಾಷೆಗಳನ್ನು ಕಲಿಯುತ್ತಾರೆಯೇ?: ಕೇಂದ್ರಕ್ಕೆ ಸ್ಟಾಲಿನ್ ಪ್ರಶ್ನೆ

0

ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ (CBSE) ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ 2026-27ರ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುವ ಪ್ರಸ್ತಾಪದ ಕುರಿತು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ರಾಜಕೀಯ ಪ್ರೇರಿತ ಕ್ರಮವಾಗಿದ್ದು, ದೇಶದ ಭಾಷಾ ವೈವಿಧ್ಯತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ (NEP) ಭಾಗವಾಗಿ ತರಲಾದ ಈ ಯೋಜನೆಯನ್ನು ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಘಾಟುವಾಗಿ ಪ್ರತಿಕ್ರಿಯಿಸಿರುವ ಸ್ಟಾಲಿನ್, ಇದು ಕೇವಲ ಸಾಮಾನ್ಯ ಶೈಕ್ಷಣಿಕ ಸುಧಾರಣೆಯಲ್ಲ ಎಂದು ಕಿಡಿಕಾರಿದ್ದಾರೆ. ಭಾರತೀಯ ಭಾಷೆಗಳನ್ನು ಉತ್ತೇಜಿಸುತ್ತಿದ್ದೇವೆ ಎಂಬ ಮುಸುಕಿನಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ನಡೆಯುತ್ತಿರುವ ಆತಂಕಕಾರಿ ಪ್ರಯತ್ನವಿದು ಎಂದು ವಿಮರ್ಶಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಇತರ ಪ್ರಾದೇಶಿಕ ಭಾಷೆಗಳನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆಗೆ ಮಾತ್ರ ಅಗ್ರಸ್ಥಾನ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಭಾಷಾ ನೀತಿಯ ಹೆಸರಿನಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ವಿಸ್ತರಿಸಲು ನೋಡುತ್ತಿದ್ದಾರೆ; ಇದು ದಕ್ಷಿಣ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಬಲವಂತವಾಗಿ ಹಿಂದಿ ಕಲಿಸುವುದೇ ಹೊರತು ಬೇರೇನೂ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ ಅಥವಾ ಮಲಯಾಳಂನಂತಹ ದಕ್ಷಿಣದ ಭಾಷೆಗಳನ್ನು ಕಡ್ಡಾಯವಾಗಿ ಕಲಿಯುತ್ತಾರೆಯೇ?” ಎಂದು ಸ್ಟಾಲಿನ್ ಕೇಂದ್ರವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಲು ವಿಫಲವಾಗಿರುವ ಕೇಂದ್ರ ಸರ್ಕಾರ, ಈಗ ರಾಜ್ಯಗಳಿಗೆ ಭಾಷೆಗಳ ಬಗ್ಗೆ ಪಾಠ ಹೇಳುತ್ತಿರುವುದು ದ್ವಂದ್ವ ನೀತಿಯ ಪರಮಾವಧಿ ಎಂದು ಎದ್ದೇವಾ ಮಾಡಿದ್ದಾರೆ. ಈ ನೀತಿಯನ್ನು ಜಾರಿಗೊಳಿಸಲು ಅಗತ್ಯವಿರುವ ಮೂಲಸೌಕರ್ಯಗಳು, ತರಬೇತಿ ಪಡೆದ ಶಿಕ್ಷಕರು ಮತ್ತು ಆರ್ಥಿಕ ಯೋಜನೆಗಳು ಸರಿಯಾಗಿವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ತ್ರಿಭಾಷಾ ನೀತಿಯಿಂದಾಗಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳಿಗೇ ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಪ್ರಯೋಜನ ಸಿಗುತ್ತದೆ ಮತ್ತು ರಾಜ್ಯಗಳ ನಡುವೆ ಅಸಮಾನತೆ ಹೆಚ್ಚಾಗುತ್ತದೆ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI), ಅನಿಮೇಷನ್ ಮತ್ತು ಗೇಮಿಂಗ್‌ನಂತಹ ಆಧುನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ನೀಡಬೇಕಾದ ಈ ಸಮಯದಲ್ಲಿ, ಅವರ ಮೇಲೆ ಭಾಷೆಯ ಹೆಚ್ಚುವರಿ ಹೊರೆಯನ್ನು ಹೇರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯಗಳ ಆತಂಕವನ್ನು ಕೇಂದ್ರವು ಗಮನಿಸದಿರುವುದು ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ಮತ್ತು ಕೋಟ್ಯಂತರ ಜನರ ಭಾಷಾ ಗುರುತಿಗೆ ಮಾಡಿದ ಅವಮಾನ ಎಂದು ಸ್ಟಾಲಿನ್ ವ್ಯಾಖ್ಯಾನಿಸಿದ್ದಾರೆ.

You cannot copy content of this page

Exit mobile version