ಬೆಂಗಳೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮತ್ತೊಮ್ಮೆ ತನ್ನ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ.
ಹೌದು ನಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಅದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.
ಈ ವಾರ ರಾಜ್ಯಸಭಾ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸೋಮಶೇಖರ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಸಲ್ಲಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಸಲ್ಲಿಸಿದ್ದರು. ಇನ್ನೊಬ್ಬ ಶಾಸಕ ಶಿವರಾಮ್ ಹೆಬ್ಬಾರ್ ಅನಾರೋಗ್ಯದ ನೆಪ ಹೇಳಿ ಚುನಾವಣೆಗೆ ಚಕ್ಕರ್ ಹಾಕಿದ್ದರು.
ಈ ಕುರಿತು ಮಾಧ್ಯಮಗಳು ಪ್ರಶ್ನೆ ಕೇಳುತ್ತಿರುವುದಕ್ಕೆ ಸಿಟ್ಟಿಗೆದ್ದು ಪ್ರತಿಕ್ರಿಯಿಸಿದ ಸೋಮಶೇಖರ್ “ಹೌದು ನಾನು ಮತ [ಕಾಂಗ್ರೆಸ್ ಅಭ್ಯರ್ಥಿಗೆ] ಹಾಕಿದ್ದೇನೆ. ಇದರಲ್ಲಿ ಮುಚ್ಚಮರೆ ಏನೂ ಇಲ್ಲ. ಯಾರಿಗೂ ಹೆದರುವ ಮನುಷ್ಯ ನಾನಲ್ಲ. ಅವರಿಗೆ ತಾಕತ್ ಇದ್ದರೆ ನನ್ನ ವಿರುದ್ಧ ಕ್ರಮ ತೆಗೆದುಕೊಂಡು ತೋರಿಸಲಿ. ನಾನೂ ಇಪ್ಪತ್ತು-ಇಪ್ಪತೈದು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಏನು ಮಾಡಬೇಕೆನ್ನುವುದು ನನಗೂ ಗೊತ್ತು. ನಾನು ಯಾರಿಗೂ ಹೆದರುವ ಮನುಷ್ಯ ಅಲ್ಲ” ಎಂದು ಅವರು ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
ಕಳೆದ ವರ್ಷದ ವಿಧಾನಸಭಾ ಚುನಾವಣೆ ನಡೆದ ದಿನದಿಂದ ಸೋಮಶೇಖರ ಅವರು ಬಿಜೆಪಿ ಮುಜುಗರ ತರುತ್ತಲೇ ಇದ್ದು, ಪಕ್ಷವು ಯಾವ ಕ್ರಮವನ್ನೂ ಕೈಗೊಳ್ಳಲಾಗದೆ ಕೈಕಟ್ಟಿಕೊಂಡು ಕುಳಿತಿದೆ. ಈಗ ಲೋಕಸಭಾ ಚುನಾವಣೆಯೊಂದಿಗೆ ಉಪಚುನಾವಣೆ ಕೂಡಾ ನಡೆಸಬಹುದಾದ ಸಾಧ್ಯತೆ ಹೆಚ್ಚಿರುವುದರಿಂದ ಸೋಮಶೇಖರ್ ಅವರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ.