ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐಸಿಸ್ ಬೆಂಬಲಿಗರ ನಂಟು ಇದೆ ಎಂಬ ಗಂಭೀರ ಆರೋಪ ಮಾಡಿದ್ದರು. ಮುಸ್ಲಿಂ ಧರ್ಮೀಯರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ನಿಂತಿದ್ದ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರ ಫೋಟೊ ಉಲ್ಲೇಖಿಸಿ ಐಸಿಸ್ ನಂಟನ್ನು ಹೊಂದಿರುವವರ ಜೊತೆಗೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದರು.
ಅಷ್ಟೆ ಅಲ್ಲದೆ ನೇರವಾಗಿ ಕೇಂದ್ರ ಗೃಹ ಸಚಿವರಿಗೆ ಯತ್ನಾಳ್ ಪತ್ರ ಬರೆದಿದ್ದು, ಮೌಲ್ವಿ ಉಗ್ರರ ಸಂಪಕ ಹೊಂದಿರುವ ಆರೋಪದ ಬಗ್ಗೆ ಎನ್‍ಐಎ ತನಿಖೆ ನಡೆಸುವಂತೆ ಮನವಿ ಮಾಡಿ ಪತ್ರವನ್ನು ಬರೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಆದರೆ ಇದೇ ಹೇಳಿಕೆ ಈಗ ಶಾಸಕ ಯತ್ನಾಳ್ ಗೆ ತಿರುಗುಬಾಣವಾಗುವ ಸಾಧ್ಯತೆ ಹುಟ್ಟು ಹಾಕಿದೆ. ಶಾಸಕ ಯತ್ನಾಳ್ ಆರೋಪದ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರು ಬಿಜೆಪಿ ಮುಖಂಡರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡಿ ಯತ್ನಾಳ್ ಹಾಗೂ ಬಿಜೆಪಿ ಪಕ್ಷವನ್ನು ಮುಜುಗರಕ್ಕೆ ಸಿಕ್ಕಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡಾ ತನ್ವೀರ್ ಹಾಶ್ಮಿಯವರ ಜೊತೆಗೆ ನಿಂತಿದ್ದ ಫೋಟೊ ಹಂಚಿಕೊಂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ, ‘ಯತ್ನಾಳ್ ಆರೋಪದ ಮೇಲೆಯೇ ಹೇಳುವುದಾದರೆ ಇವರ ಮೇಲೂ ಆರೋಪ ಯಾಕೆ ಮಾಡಿಲ್ಲ’ ಎನ್ನುವ ಮೂಲಕ ಗಂಭೀರವಾಗಿ ಯತ್ನಾಳ್ ನಡೆಯನ್ನು ಟೀಕಿಸಿದ್ದಾರೆ.
ಈ ಆರೋಪ ದೊಡ್ಡ ಮಟ್ಟಕ್ಕೆ ಸುದ್ದಿ ಆಗುತ್ತಿದ್ದಂತೆ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗೆ ಶಾಸಕ ಯತ್ನಾಳ್ ವ್ಯಾವಹಾರಿಕವಾಗಿಯೂ ಸಂಪರ್ಕ ಹೊಂದಿದ ಬಗ್ಗೆ ಪ್ರಜಾವಾಣಿ ವರದಿ ಮಾಡಿದೆ. ಯತ್ನಾಳ್ ಹಾಗೂ ತನ್ವೀರ್ ಹಾಶ್ಮಿ ವಿಜಯಪುರ ನಗರದ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್ ಹೋಟೆಲ್’ನ ಪಾಲುದಾರರಾಗಿರುವ ಬಗ್ಗೆ ಈ ವರದಿ ಬಹಿರಂಗಪಡಿಸಿದೆ.
ವಿಜಯಪುರ ನಗರದ ಹೊರವಲಯದ ಮಹಲ್ ಐನಾಪುರ ಗ್ರಾಮದ ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿಯೂ ಯತ್ನಾಳ್ ಹಾಗೂ ತನ್ವೀರ್ ಹಾಶ್ಮಿಯವರ ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲೇ ಇವೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು ಹಾಶ್ಮಿಯವರ ಜೊತೆಗೆ ಇಷ್ಟೆಲ್ಲಾ ನಂಟು ಹೊಂದಿರುವ ಯತ್ನಾಳ್ ಅವರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಎತ್ತಿದ್ದಾರೆ. ಅಷ್ಟೆ ಅಲ್ಲದೆ ‘ಹಾಶ್ಮಿಯವರು ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಯತ್ನಾಳ್ ಸುಮ್ಮನಿದ್ದರು? ಒಂದೋ ಯತ್ನಾಳ್ ಅವರು ಆರೋಪ ಸಾಬೀತು ಪಡಿಸಬೇಕು, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ಆರೋಪಗಳ ನಡುವೆ ಮೌಲ್ವಿ ತನ್ವೀರ್ ಹಾಶ್ಮಿ ಮೌನ ಮುರಿದಿದ್ದು, “ನನಗೆ ಭಯೋತ್ಪಾದಕರ ಜೊತೆ ನಂಟಿದೆ ಎಂಬುವುದು ಖಾತ್ರಿಪಡಿಸಿದರೆ ದೇಶ ತೊರೆಯುತ್ತೇನೆ. ನೀವು ಮಾಡಿರುವ ಆರೋಪ ಸುಳ್ಳು ಎಂಬುವುದು ಖಚಿತವಾದರೆ ದೇಶ ತೊರೆಯಲು ಸಿದ್ದರಿದ್ದೀರಾ?” ಎಂದು ಸವಾಲ್ ಹಾಕಿದ್ದಾರೆ.
ವಿವಿಧ ಮಾಧ್ಯಮಗಳ ಫ್ಯಾಕ್ಟ್ ಚೆಕ್ ವಿಭಾಗಗಳು ನಡೆಸಿದ ತನಿಖೆ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಆರೋಪ ಸುಳ್ಳು ಎಂದು ತಿಳಿದು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ತನ್ವೀರ್ ಹಾಶ್ಮಿಯವರು ಯತ್ನಾಳ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗದೇ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಒಲವು ಹೊಂದಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಆರೋಪ ಮಾಡಿದ್ದಾರೆ. ವಯಕ್ತಿಕ ದ್ವೇಷದ ಕಾರಣಕ್ಕೆ ಮೌಲ್ವಿ ತನ್ವೀರ್ ಹಾಶ್ಮಿಯವರ ಸಾಮಾಜಿಕ ಜಾಲತಾಣ ಖಾತೆಯಲ್ಲಿನ ಫೋಟೋಗಳನ್ನು ಎತ್ತಿ ಈ ರೀತಿಯ ಅಪಪ್ರಚಾರಕ್ಕೆ ಯತ್ನಾಳ್ ಇಳಿದಿದ್ದಾರೆ ಎಂದೂ ತಿಳಿದು ಬಂದಿದೆ.
ಇತ್ತ ತನ್ವೀರ್ ಹಾಶ್ಮಿಯವರ ಜೊತೆಗೆ ವ್ಯಾವಹಾರಿಕವಾಗಿ ಸಂಬಂಧ ಹೊಂದಿರುವುದು ಸಾಭೀತುಪಡಿಸಬೇಕು, ಇಲ್ಲವಾದರೆ ಈ ರೀತಿಯ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಯತ್ನಾಳ್ ಗುಡುಗಿದ್ದಾರೆ. ಈ ಆರೋಪ ಪ್ರತ್ಯಾರೋಪಗಳನ್ನು ನೋಡಿದರೆ ಪ್ರಕರಣ ಸಂಪೂರ್ಣವಾಗಿ ಯತ್ನಾಳ್ ವಿರುದ್ಧವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಯತ್ನಾಳ್ ಪರ ನಿಂತವರು ಮುಜುಗರಕ್ಕೆ ಸಿಕ್ಕುವ ಸಾಧ್ಯತೆಗಳೇ ಹೆಚ್ಚಿದೆ.