”ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಯಾವಾಗಲೂ ಸರಕಾರದ ಪರವಾಗಿಯೇ ಇರುತ್ತಿದ್ದರು. ಧನಕರ್ ಅವರ ರಾಜೀನಾಮೆಗೆ ಕಾರಣವಾದ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಪ್ರಧಾನಿ ಮೋದಿ ಹಾಗೂ ಧನಕರ್ ಮಧ್ಯೆ ಏನು ನಡೆದಿದೆ ಗೊತ್ತಿಲ್ಲ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ”ನಾವು ರಾಜ್ಯಸಭೆಯಲ್ಲಿ ರೈತರು, ಬಡವರು, ಅಂತಾರಾಷ್ಟ್ರೀಯ ಸಮಸ್ಯೆಗಳು ಹಾಗೂ ವಿದೇಶಾಂಗ ನೀತಿ ಬಗ್ಗೆ ಪ್ರಸ್ತಾಪಿಸಿದಾಗ ಜಗದೀಪ್ ಧನಕರ್ ಚರ್ಚೆಗೆ ಅವಕಾಶ ಕೊಡುತ್ತಿರಲಿಲ್ಲ. ಅಲ್ಲದೇ, ಮಹಿಳೆಯರು, ದೀನ ದಲಿತರ ಮೇಲಿನ ದೌರ್ಜನ್ಯ ಮತ್ತು ಹಿಂದೂ-ಮುಸ್ಲಿಂ ಗಲಾಟೆಗಳ ಬಗ್ಗೆ ಚರ್ಚೆಗೆ ನೋಟಿಸ್ ನೀಡಿದರೂ, ಅವಕಾಶ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ಧನಕರ್ ರಾಜೀನಾಮೆಗೆ ಕಾರಣವಾದ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ” ಎಂದರು.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದ ಕುರಿತ ಪ್ರಶ್ನೆಗೆ, ”ಇದನ್ನೆಲ್ಲ ಈಗ ಹೇಳುವುದಿಲ್ಲ. ನಂತರ ಹೇಳೋಣ” ಎಂದಷ್ಟೇ ಹೇಳಿದರು.