‘ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರೂ ನಮ್ಮ ಸಂಸದರು (ಬಸವರಾಜ ಬೊಮ್ಮಾಯಿ) ಮಾತ್ರ ಕೈಗೆ ಸಿಕ್ಕಿಲ್ಲ. ನಮ್ಮ ಸಂಸದರು ನಮಗೇ ಕಾಲ್ ಶೀಟ್ ಕೊಟ್ಟಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಬಿಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ನಾನು ದೆಹಲಿಯಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದೆ. ಶಿವಮೊಗ್ಗ ಸಂಸದರಾದ ಬಿ ವೈರಾಘವೇಂದ್ರರನ್ನು ಭೇಟಿ ಮಾಡಿದೆ. ಆದರೆ, ನಮ್ಮ ಸಂಸದರನ್ನು ದೆಹಲಿಗೆ ಬಂದ್ರೂ ಭೇಟಿ ಮಾಡೋಕಾಗಲಿಲ್ಲ. ಆಗ ಮನಸಿಗೆ ಬೇಸರ ಆಯ್ತು. ನಮ್ ದುರಾದೃಷ್ಟ ನಮ್ ಸಂಸದರ ಕಾಲ್ ಶೀಟ್ ಸಿಗಲಿಲ್ಲ’ ಅಂತ ಹೇಳಿದೆ ಅಂತ ಬಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಜೊತೆ ನೇರವಾಗಿ ಮಾತನಾಡದೇ ವರ್ಷಗಳೇ ಕಳೆದು ಹೋಯ್ತು. ನಿಮ್ಮನ್ನು ಸಂಪರ್ಕಿಸಬೇಕು, ಕೆಲವು ಅಗತ್ಯ ವಿಚಾರಗಳ ಬಗ್ಗೆ ಮಾತಾಡ್ಬೇಕು ಅಂತ ಕೇಳಿದ್ರೆ ನಮ್ಮ ಪಿಎ ಕಾಂಟ್ಯಾಕ್ಟ್ ಮಾಡು ಅಂತ ಹೇಳ್ತಾರೆ. ಪಿಎ ಕಾಂಟ್ಯಾಕ್ಟ್ ಮಾಡಿದ್ರೆ, ಸಾಹೇಬ್ರು ಇನ್ನೊಂದು ಕಾರಲ್ಲಿ ಇದ್ದಾರೆ, ಅವರ ಜೊತೆ ಇದ್ದಾರೆ, ಇವರ ಜೊತೆ ಇದ್ದಾರೆ ಎಂಬ ಸಬೂಬು ಹೇಳ್ತಾರೆ. ಸಾಹೇಬ್ರಿಗೆ ಹೇಳಿ, ಫೋನ್ ಕೊಡಪ್ಪಾ ಅಂತ ಹೇಳಿದೆ. ಆದರೆ ಎರಡು ದಿನ ಆದರೂ ಯಾವುದೂ ಕಾಲ್ ಬರಲಿಲ್ಲ’ ಅಂತ ಬಿಸಿ ಪಾಟೀಲ್ ಬೇಸರ ಹೊರಹಾಕಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಬಿಸಿ ಪಾಟೀಲ್,’ಜುಲೈ 22ನೇ ತಾರೀಖು ರಾಣೆಬೆನ್ನೂರಿನಲ್ಲಿ ಬಸವರಾಜ ಬೊಮ್ಮಾಯಿ ಸಿಕ್ಕಿದ್ದರು. ನಾನೂ ದೆಹಲಿಗೆ ಬರುತ್ತಿದ್ದೇನಿ ಅಂತ ಹೇಳಿದೆ. ಬನ್ನಿ ಸಿಗೋಣ ಅಂತ ಹೇಳಿದ್ರು. ಮರುದಿನ ದೆಹಲಿಗೆ ಹೋದೆ. ಅವರ ಪಿಎಗೆ ಫೋನ್ ಮಾಡಿದೆ. ಬೊಮ್ಮಾಯವರಂತೂ ಫೋನ್ ಎತ್ತಲ್ಲ’ ಅಂತ ಹೇಳಿದ್ರು.
ಕ್ಷೇತ್ರಕ್ಕೆ ಬಂದು ಹೋದರೂ ನಮ್ಮ ಕೈಗೆ ಸಿಗಲ್ಲ. ಅವರು ಮುತ್ಸದ್ದಿಗಳು, ದೊಡ್ಡೋರು, ಅವರ ತಂದೆಯ ಕಾಲದಿಂದಲೂ ರಾಜಕೀಯ ಮಾಡ್ಕೊಂಡು ಬಂದೋರು. ನಮ್ಮಂತಾ ಸಣ್ಣಪುಟ್ಟ ಮಂದಿಗೆ ಕೈಗೆ ಸಿಕ್ತಾರಾ ಹೇಳಿ ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ. ಅವರು ನಾಲ್ಕನೇ ಫ್ಲೋರ್‌ನಲ್ಲಿ ಇದ್ದರು,ನಾನು ಮೂರನೇ ಫ್ಲೋರ್‌ನಲ್ಲಿ ಇದ್ದೆ. ಮುಖ್ಯಮಂತ್ರಿಗಳು ಎಂಬ ಸೌಜನ್ಯಕ್ಕೆ ಭೇಟಿ ಮಾಡಿದೆ. ನಾವೂ ಕೂಡಾ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು, ಹೀಗಾಗಿ ಭೇಟಿಯಾದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
ಸಧ್ಯ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರೇ ಕೈಗೆ ಸಿಗುತ್ತಾರೆ. ಆದ್ರೆ ನಮ್ಮ ನಾಯಕರ ಕಾಲ್ ಶೀಟ್ ಸಿಗಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಬಿಜೆಪಿಯಿಂದ ಒಂದು ಕಾಲು ಹೊರಗಿಡುವ ಬಗ್ಗೆಯೂ ಮುನ್ಸೂಚನೆ ನೀಡಿದಂತಾಗಿದೆ. ಈಗಾಗಲೇ ಬಿಜೆಪಿ ಸಖ್ಯ ತೊರೆದಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ನಂತರ ಬಿಸಿ ಪಾಟೀಲ್ ಸೂಚ್ಯವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.