Home ಬ್ರೇಕಿಂಗ್ ಸುದ್ದಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ ಮೋದಿ ಸರ್ಕಾರ

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ ಮೋದಿ ಸರ್ಕಾರ

0

ಕಳೆದ ಬಾರಿಯಂತೆ ಈ ಬಾರಿಯೂ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ನರೇಂದ್ರ ಮೋದಿ ಸರ್ಕಾರ ತಿರಸ್ಕರಿಸಿದೆ. ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರದ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹಲವು ವರ್ಷಗಳಿಂದ ಕರ್ನಾಟಕದ ಸಾಧನೆ, ಸಂಸ್ಕೃತಿ, ಜನಪದ ಪರಂಪರೆಯನ್ನು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬಿಂಬಿಸುತ್ತಾ ಕರ್ನಾಟಕ ದೇಶದ ಗಮನ ಸೆಳೆದಿದ್ದು ಮರೆಯುವಂತಿಲ್ಲ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಕಳೆದ ಬಾರಿ ಕೂಡಾ ಕರ್ನಾಟಕದ ಸ್ತಬ್ಧಚಿತ್ರವನ್ನು ತಿರಸ್ಕರಿಸಿ ಕರ್ನಾಟಕವನ್ನು ಅವಮಾನಿಸಿತ್ತು.

ಈ ಬಾರಿ ಪರೇಡ್ ನಲ್ಲಿ ಭಾಗವಹಿಸಲು ವಾರ್ತಾ ಇಲಾಖೆ ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿನ ಸಾಧನೆ ಮತ್ತು ಪರಂಪರೆಯನ್ನು ಬಿಂಬಿಸುವ ಬ್ರಾಂಡ್ ಬೆಂಗಳೂರು ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗವಹಿಸಲು ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತಮ ನಿರ್ವಹಣೆಯ ಕಿರೀಟ ಹೊತ್ತಿತ್ತು.. ಅಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಬಿರುದು ಪಡೆದುಕೊಂಡು ಇಂದಿಗೂ ಅದೇ ಬೇಡಿಕೆಯನ್ನು ಇರಿಸಿಕೊಂಡಿದೆ. ಇವೆಲ್ಲವನ್ನೂ ಒಳಗೊಂಡಂತೆ ಬ್ರಾಂಡ್ ಬೆಂಗಳೂರು ಮಾದರಿಯ ಸ್ತಬ್ಧಚಿತ್ರವನ್ನು ಕರ್ನಾಟಕ ಪೆರೇಡ್ ಗೆ ರೂಪಿಸಿತ್ತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ದೇವತೆ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ.

ಕಳೆದ ಬಾರಿ ಚುನಾವಣಾ ವರ್ಷವಾಗಿದ್ದರೂ ಸಹ ಕರ್ನಾಟಕ ಸ್ತಬ್ಧಚಿತ್ರವನ್ನು ಕೇಂದ್ರ ತನ್ನ ಆಯ್ಕೆ ಪಟ್ಟಿಯಿಂದ ಹೊರಗಿಟ್ಟಿತ್ತು. ಆದರೆ ಇದು ರಾಜಕೀಯ ಸ್ವರೂಪ ಪಡೆದುಕೊಂಡು ರಾಜ್ಯದ ಜನ ಪಕ್ಷಾತೀತವಾಗಿ ಕೇಂದ್ರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಕೊನೆಯ ಹಂತದಲ್ಲಿ ಪೆರೇಡ್ ಗೆ ಅವಕಾಶ ನೀಡಿತ್ತು.

ಆದರೆ ಈ ಬಾರಿ ಕೇಂದ್ರ ಸರ್ಕಾರ ಕರ್ನಾಟಕದ ಮನವಿಯನ್ನು ತಳ್ಳಿ ಹಾಕಿದ್ದಲ್ಲದೆ, ಈ ಬಾರಿ ಯಾವುದೇ ಮನವಿ ಅಥವಾ ಒತ್ತಡಕ್ಕೆ ಮಣಿಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಎಂಬುದನ್ನು ಬಿಡಿಸಿ ಹೇಳುವಂತಿಲ್ಲ.

ಏನೇ ಇದ್ದರೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡದೇ ಇರುವುದು ಮೋದಿ ಸರ್ಕಾರದ ಕನ್ನಡ ವಿರೋಧಿ ಧೋರಣೆ ಎಂದು ಬಿಂಬಿಸಲಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ “ಪೆರೇಡ್ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version