ಚೆನ್ನೈ: ಬಿಹಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಹುದ್ದೆಗೆ ಇರುವ ಗೌರವವನ್ನು ಮರೆತು ಪ್ರಾದೇಶಿಕ ಉದ್ವಿಗ್ನತೆಗಳನ್ನು (Regional Tensions) ಪ್ರಚೋದಿಸುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಟೀಕಿಸಿದ್ದಾರೆ.
ಬಿಹಾರದ ಚಂಪಾದಲ್ಲಿ ಗುರುವಾರ ಮೋದಿ ಅವರು ಮಾಡಿದ ಭಾಷಣದ ವಿಡಿಯೋ ಕ್ಲಿಪ್ ಅನ್ನು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ ಸ್ಟಾಲಿನ್, ಮೋದಿ ಅವರು “ಬಿಹಾರದಿಂದ ತಮಿಳುನಾಡಿಗೆ ಬಂದ ಜನರನ್ನು ಡಿಎಂಕೆ ಸರ್ಕಾರ ಹಿಂಸಿಸುತ್ತಿದೆ” ಎಂದು ಹೇಳಿದ್ದನ್ನು ಉಲ್ಲೇಖಿಸಿದರು.
“ಪ್ರಧಾನಿ ಮೋದಿ ಅವರು ಭಾರತದ ಎಲ್ಲ ನಾಗರಿಕರಿಗೆ ಸೇವೆ ಸಲ್ಲಿಸುವ ಹುದ್ದೆಯಲ್ಲಿ ತಾನಿದ್ದೇನೆ ಎಂಬ ವಿಷಯವನ್ನು ಆಗಾಗ್ಗೆ ಮರೆಯುತ್ತಾರೆ,” ಎಂದು ಸ್ಟಾಲಿನ್ ಟೀಕಿಸಿದರು. ಅಂತಹ ಭಾಷಣಗಳ ಮೂಲಕ ಪ್ರಧಾನಿಯವರು ತಮ್ಮ ಹುದ್ದೆಯ ಗೌರವವನ್ನು ಕೆಳಮಟ್ಟಕ್ಕೆ ಇಳಿಸಬಾರದು ಎಂದು ಅವರು ಮನವಿ ಮಾಡಿದರು.
