ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿಯಾಗಿ ಆರಂಭಿಸಿದ ಮತ್ತೊಂದು ಯೋಜನೆ ಗುರಿ ತಲುಪುವ ಮುನ್ನವೇ ವಿಫಲವಾಗಿದೆ.
ಕೇಂದ್ರ ಸರ್ಕಾರವು 2021ರ ಅಕ್ಟೋಬರ್‌ನಲ್ಲಿ ‘ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್’ (ACC) ‘ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್’ (PLI) ಯೋಜನೆಯನ್ನು ಆರ್ಭಟದಿಂದ ಘೋಷಿಸಿತ್ತು. ‘ಮೇಕ್ ಇನ್ ಇಂಡಿಯಾ’ದ ಭಾಗವಾಗಿ ದೇಶದಲ್ಲೇ ಬ್ಯಾಟರಿ ತಯಾರಿಕಾ ವ್ಯವಸ್ಥೆಯನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವುದೇ ಇದರ ಪ್ರಮುಖ ಗುರಿಗಳೆಂದು ಸರ್ಕಾರ ಘೋಷಿಸಿತ್ತು.
ನಾಲ್ಕು ವರ್ಷಗಳ ನಂತರ ಇದನ್ನು ಪರಿಶೀಲಿಸಿದಾಗ, ಎಸಿಸಿ ಪಿಎಲ್‌ಐ ಮೂಲಕ 10.3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಿದ್ದ ಕಡೆ, ಕೇವಲ 1,118 ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ. 11,250 ಕೋಟಿ ರೂ. ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿತ್ತಾದರೂ, ಕೇವಲ 2,870 ಕೋಟಿ ರೂ. ಮಾತ್ರ ಹೂಡಿಕೆ ಬಂದಿದೆ. ಜೆಎಂಕೆ ರಿಸರ್ಚ್ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಷಿಯಲ್ ಅನಾಲಿಸಿಸ್ (IEEFA) ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿಗಳು ಬಹಿರಂಗಗೊಂಡಿವೆ.
ಪ್ರೋತ್ಸಾಹಧನಕ್ಕೆ ಅರ್ಹತಾ ನಿಯಮಗಳು ಕಠಿಣ: 2025ರ ಅಕ್ಟೋಬರ್ ವೇಳೆಗೆ ಈ ಯೋಜನೆಯಡಿ ಪ್ರೋತ್ಸಾಹಧನ (Incentives) ವಿತರಣೆ ನಡೆದಿಲ್ಲ. ಈಗಲೂ ನಮ್ಮ ದೇಶ ಶೇ. 100ರಷ್ಟು ಆಮದು ಮಾಡಿಕೊಂಡ ಬ್ಯಾಟರಿಗಳ ಮೇಲೆಯೇ ಅವಲಂಬಿತವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಸೃಷ್ಟಿಸುವ ಉದ್ದೇಶ ಹೊಂದಿದ್ದ ಈ ಯೋಜನೆ, ತನ್ನ ಮೂಲ ಗುರಿ ಸಾಧಿಸುವಲ್ಲಿ ತೀವ್ರವಾಗಿ ವಿಫಲವಾಗಿದೆ.
ನೀತಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಅಡೆತಡೆಗಳಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಪ್ರೋತ್ಸಾಹಧನ ಪಡೆಯಲು ಇರುವ ಅರ್ಹತಾ ನಿಯಮಗಳು ಕಠಿಣವಾಗಿರುವುದು, ಘಟಕ ಸ್ಥಾಪನೆಯ (Installation) ಗಡುವನ್ನು ಎರಡು ವರ್ಷಗಳಿಗೆ ನಿಗದಿಪಡಿಸಿರುವುದು ಮತ್ತು ಚೀನಾ ತಾಂತ್ರಿಕ ತಜ್ಞರಿಗೆ ವೀಸಾ ಅನುಮೋದನೆಯಲ್ಲಿ ಉಂಟಾದ ವಿಳಂಬದಂತಹ ಕಾರಣಗಳಿಂದಾಗಿ ಈ ವೈಫಲ್ಯ ಉಂಟಾಗಿದೆ. ವಿಶೇಷ ಬ್ಯಾಟರಿ ತಯಾರಿಕಾ ಉಪಕರಣಗಳನ್ನು ಅಳವಡಿಸಿ, ಆರಂಭಿಸಲು ಚೀನಾ ತಜ್ಞರ ಅವಶ್ಯಕತೆ ಇದೆ.
