ಕಳ್ಳತನಕ್ಕೆ ಯಾವುದೂ ಅನರ್ಹವಲ್ಲ ಎಂಬುದನ್ನು ಸಾಬೀತುಪಡಿಸುವಂತೆ, ಕೆಲ ಘದೀಮಾ ಕಳ್ಳರು ಬೃಹತ್ ಕಬ್ಬಿಣದ ಸೇತುವೆಯನ್ನೇ ರಾತ್ರೋರಾತ್ರಿ ಕದ್ದೊಯ್ದ ಘಟನೆ ನಡೆದಿದೆ.
ರಾತ್ರಿ ಕಂಡ ಸೇತುವೆ ಬೆಳಗಾಗುವುದರೊಳಗೆ ಮಾಯವಾಗಿರುವುದನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ. ಈ ಘಟನೆ ಛತ್ತೀಸ್‌ಗಢದ ಕೊರ್ಬಾದಲ್ಲಿ ನಡೆದಿದೆ. ಎರಡು ಗ್ರಾಮಗಳನ್ನು ಸಂಪರ್ಕಿಸುವ, 40 ವರ್ಷಗಳ ಹಿಂದೆ ನಿರ್ಮಿಸಲಾದ 60 ಅಡಿ ಉದ್ದದ ಕಬ್ಬಿಣದ ಸೇತುವೆ ಕೊರ್ಬಾದಲ್ಲಿ ಹಠಾತ್ತನೆ ಕಾಣೆಯಾಗಿದೆ. ಶನಿವಾರ ರಾತ್ರಿಯವರೆಗೂ ಇದರ ಮೇಲೆ ಓಡಾಟವಿತ್ತು. ಆದರೆ ಭಾನುವಾರ ಬೆಳಿಗ್ಗೆ ನೋಡಿದಾಗ, ಅಲ್ಲಿ ಸೇತುವೆ ಇದ್ದ ಕುರುಹುಗಳು ಕೂಡ ಇರಲಿಲ್ಲ.
ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಕೆಲ ಕಳ್ಳರು ರಾತ್ರೋರಾತ್ರಿ ಬಿಚ್ಚಿ ಕದ್ದೊಯ್ದಿದ್ದಾರೆ. ಕಳ್ಳರು ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಸೇತುವೆಯ ಕಂಬಗಳು ಮತ್ತು ಇತರ ಭಾಗಗಳನ್ನು ಕತ್ತರಿಸಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್‌ಗೆ ಆಧಾರವಾಗಿ ಅಳವಡಿಸಲಾಗಿದ್ದ 40 ಅಡಿ ಉದ್ದದ ಬೀಮ್ ಅನ್ನೂ ಇವರು ಕತ್ತರಿಸಿದ್ದಾರೆ. ಆದರೆ ಅದೃಷ್ಟವಶಾತ್ ಪೈಪ್‌ಲೈನ್‌ಗೆ ಯಾವುದೇ ಹಾನಿಯಾಗದಿರುವುದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹಲವಾರು ಕಬ್ಬಿಣದ ಗುಜರಿ ವ್ಯಾಪಾರಿಗಳನ್ನು ವಿಚಾರಣೆ ನಡೆಸಲಾಗಿದೆ, ಆದರೆ ಶುಕ್ರವಾರದವರೆಗೂ ಕಳ್ಳರ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
