ದೆಹಲಿ: ತಂಬಾಕು ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಗಳು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದರೂ, ದೇಶದಲ್ಲಿ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಇತ್ತೀಚಿನ ಸಮೀಕ್ಷೆಯ ವಿವರಗಳು ಬಹಿರಂಗಪಡಿಸಿವೆ.
ಮುಖ್ಯವಾಗಿ ಗುಟ್ಕಾ ಮತ್ತು ತಂಬಾಕು ರೂಪದಲ್ಲಿ ಗ್ರಾಮೀಣರು ತಂಬಾಕನ್ನು ಅಧಿಕವಾಗಿ ಬಳಸುತ್ತಿದ್ದಾರೆ ಎಂದು ‘ಗೃಹಬಳಕೆಯ ವೆಚ್ಚದ ಸಮೀಕ್ಷೆ’ (HCES) ತಿಳಿಸಿದೆ. ಗ್ರಾಮೀಣ ಕುಟುಂಬಗಳು ತಮ್ಮ ಆದಾಯದಲ್ಲಿ ಶೇ. 4ರಷ್ಟು ಹಣವನ್ನು ತಂಬಾಕಿಗಾಗಿ ಮೀಸಲಿಡುತ್ತಿದ್ದರೆ, ಶಿಕ್ಷಣಕ್ಕಾಗಿ ಕೇವಲ ಶೇ. 2.5ರಷ್ಟು ಮಾತ್ರ ಖರ್ಚು ಮಾಡುತ್ತಿವೆ ಎಂದು ಆ ಸಮೀಕ್ಷೆ ಉಲ್ಲೇಖಿಸಿದೆ.
ಫೆಬ್ರವರಿ 1ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲಿರುವ ವಾರ್ಷಿಕ ಬಜೆಟ್‌ನಲ್ಲಿ ತಂಬಾಕು ಉತ್ಪನ್ನಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚಿನ ಸಮೀಕ್ಷೆಯು ಕುತೂಹಲ ಮೂಡಿಸಿದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ತಂಬಾಕು ಬಳಕೆ ಸ್ಥಿರವಾಗಿ ಏರಿಕೆಯಾಗಿರುವುದನ್ನು ಅಂಕಿಅಂಶಗಳು ತೋರಿಸುತ್ತಿವೆ. 2011-12ರಿಂದ 2023-24ರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕಿನ ಮೇಲಿನ ತಲಾವಾರು ವೆಚ್ಚವು (per capita expenditure) ಶೇ. 58ರಷ್ಟು ಹೆಚ್ಚಾಗಿದೆ.
