ದೆಹಲಿ: ಅಮೆರಿಕ ವಿಧಿಸಿರುವ ಹೆಚ್ಚಿನ ಸುಂಕಗಳ (Tariffs) ಕಾರಣದಿಂದಾಗಿ ದೇಶದ ಜವಳಿ ವಲಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಜವಳಿ ಉದ್ಯಮವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜವಳಿ ವಲಯದ ಬಿಕ್ಕಟ್ಟಿನಿಂದಾಗಿ ನೌಕರರು ಮತ್ತು ಸಣ್ಣ ವ್ಯಾಪಾರಿಗಳು ಅಪಾಯ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಶುಕ್ರವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಇತ್ತೀಚೆಗೆ ಹರಿಯಾಣದ ವಸ್ತ್ರ ಕಾರ್ಖಾನೆಯೊಂದಕ್ಕೆ ಭೇಟಿ ನೀಡಿದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
“ಅಮೆರಿಕ ವಿಧಿಸಿರುವ ಶೇ. 50ರಷ್ಟು ಸುಂಕ ಮತ್ತು ಅನಿಶ್ಚಿತತೆಯು ದೇಶದ ವಸ್ತ್ರ ರಫ್ತುದಾರರಿಗೆ ಬಲವಾದ ಪೆಟ್ಟು ನೀಡುತ್ತಿದೆ,” ಎಂದು ರಾಹುಲ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಉದ್ಯೋಗ ನಷ್ಟ, ಕಾರ್ಖಾನೆಗಳ ಮುಚ್ಚುವಿಕೆ ಮತ್ತು ಕಡಿಮೆಯಾದ ಆರ್ಡರ್‌ಗಳು ನಮ್ಮ ‘ಮೃತ ಆರ್ಥಿಕತೆಯ’ (Dead Economy) ನೈಜ ಸ್ಥಿತಿಯಾಗಿದೆ,” ಎಂದು ಅವರು ಉಲ್ಲೇಖಿಸಿದ್ದಾರೆ. ಆದರೂ ಪ್ರಧಾನಿಯವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
“4.5 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಲಕ್ಷಾಂತರ ವ್ಯಾಪಾರಗಳು ಅಪಾಯದಲ್ಲಿದ್ದರೂ ಮೋದಿ ಅವರು ಯಾವುದೇ ಪರಿಹಾರ ನೀಡಿಲ್ಲ. ಸುಂಕಗಳ ಬಗ್ಗೆ ಮಾತನಾಡುತ್ತಿಲ್ಲ. ಮೋದಿಜೀ, ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ದಯವಿಟ್ಟು ಈ ವಿಷಯದ ಕಡೆ ನಿಮ್ಮ ಗಮನ ಹರಿಸಿ,” ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
