ಪ್ರಧಾನಿ ನರೇಂದ್ರ ಮೋದಿಯವರ ‘ಡಬಲ್ ಎಂಜಿನ್’ ಸರ್ಕಾರದ ಪ್ರತಿಪಾದನೆಗೆ ತಿರುಗೇಟು ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಜೆಪಿಯೇತರ ರಾಜ್ಯಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ “ಡಬಲ್ ಎಂಜಿನ್” ಸರ್ಕಾರ ನಡೆಯುವುದಿಲ್ಲ ಎಂದು ಡಿಎಂಕೆ ನಾಯಕ ಸ್ಪಷ್ಟಪಡಿಸಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎನ್‌ಡಿಎ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿಯವರ ಹೇಳಿಕೆಗಳನ್ನು ಅಲ್ಲಗಳೆದ ಸ್ಟಾಲಿನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮಿಳುನಾಡಿಗೆ ಎಸಗಿರುವ ಅನ್ಯಾಯವನ್ನು ರಾಜ್ಯವು ಎಂದಿಗೂ ಮರೆಯುವುದಿಲ್ಲ ಎಂದು ಆರೋಪಿಸಿದರು.
“ಡಬಲ್ ಎಂಜಿನ್” ಪ್ರವೇಶಿಸದ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಹೇಗೆ ಅಭಿವೃದ್ಧಿ ಸಾಧಿಸುತ್ತಿವೆ ಎಂಬುದರ ಬಗ್ಗೆ ಯೋಚಿಸಿ ಎಂದು ಡಿಎಂಕೆ ನಾಯಕ ಮೋದಿಯವರನ್ನು ಪ್ರಶ್ನಿಸಿದರು.
“ಪ್ರಧಾನಿ ಹೇಳುವ ಡಬಲ್ ಎಂಜಿನ್ ತಮಿಳುನಾಡಿನಲ್ಲಿ ಓಡುವುದಿಲ್ಲ… ಕೇಂದ್ರದ ಬಿಜೆಪಿ ಸರ್ಕಾರ ಒಡ್ಡಿರುವ ಎಲ್ಲಾ ಅಡೆತಡೆಗಳನ್ನು ಮೀರಿ ತಮಿಳುನಾಡು ಐತಿಹಾಸಿಕ ಬೆಳವಣಿಗೆಯನ್ನು ಸಾಧಿಸಿದೆ,” ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
“ನೀವು ಹೇಳುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಂತಹ ಡಬಲ್ ಎಂಜಿನ್ ರಾಜ್ಯಗಳಿಗಿಂತ, ಡಬಲ್ ಎಂಜಿನ್ ಪ್ರವೇಶಿಸದ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅಭಿವೃದ್ಧಿ ಸಾಧಿಸುತ್ತಿವೆ ಎಂಬುದನ್ನು ಒಂದು ಕ್ಷಣ ಯೋಚಿಸಿ,” ಎಂದು ಸ್ಟಾಲಿನ್ ಹೇಳಿದರು. ಅಲ್ಲದೆ, “ತಮಿಳುನಾಡು ದೆಹಲಿಯ ಅಹಂಕಾರಕ್ಕೆ ತಲೆಬಾಗುವುದಿಲ್ಲ,” ಎಂದು ಅವರು ಗುಡುಗಿದರು.
ಶುಕ್ರವಾರ ತಮಿಳುನಾಡಿನಲ್ಲಿ ಪ್ರಚಾರ ನಡೆಸಿದ ಮೋದಿ, “ನಾವು ತಮಿಳುನಾಡನ್ನು ಡಿಎಂಕೆ ಹಿಡಿತದಿಂದ ಮುಕ್ತಗೊಳಿಸಬೇಕಿದೆ,” ಎಂದು ಹೇಳಿದರು. ತಮಿಳುನಾಡಿನಲ್ಲಿ ಮಾದಕ ವಸ್ತು ಮತ್ತು ಅಪರಾಧಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ ಮೋದಿ, ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಅಪರಾಧ ಪ್ರಕರಣಗಳಿಂದ ಮಹಿಳೆಯರು ನೊಂದಿದ್ದಾರೆ ಎಂದು ಪ್ರತಿಪಾದಿಸಿದರು.
