ಮೋದಿಯ ಪದವಿ ವಿವಾದ ಮತ್ತೆ ಚರ್ಚೆಗೆ: “ನೀವು ಪದವಿ ದಾಖಲೆ ತೋರಿಸಿ, ನಾನು ನನ್ನ ಸಾಲದ ದಾಖಲೆ ಬಹಿರಂಗಪಡಿಸುತ್ತೇನೆ, ಯಾವುದೇ ಇಡಿ ತನಿಖೆಗೂ ಸಿದ್ಧ” : ಅಭೀಜಿತ್ ದೀಪ್ಕೆ

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತ ವಿವಾದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭೀಜಿತ್ ದೀಪ್ಕೆ ಅವರು ಪ್ರಧಾನಿ ಮೋದಿಯವರಿಗೆ ನೇರ ಸವಾಲು ಹಾಕಿದ್ದು, “ಮೋದಿ ತಮ್ಮ ಪದವಿ ದಾಖಲೆಗಳನ್ನು ಸಾರ್ವಜನಿಕಗೊಳಿಸಿದರೆ, ನಾನು ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಪಡೆದ ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿವೇತನದ ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತರೊಬ್ಬರು, ದೀಪ್ಕೆ ಅವರ ತಂದೆ ನಿವೃತ್ತ ಸರ್ಕಾರಿ ನೌಕರರಾಗಿರುವ ಹಿನ್ನೆಲೆ, ಅವರನ್ನು ವಿದೇಶಕ್ಕೆ ಓದಲು ಕಳುಹಿಸಿದ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ದೀಪ್ಕೆ, ತಾವು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನದ ನೆರವಿನಿಂದ ವಿದ್ಯಾಭ್ಯಾಸ ಮಾಡಿದ್ದು, ಅದಕ್ಕಾಗಿ ಶೈಕ್ಷಣಿಕ ಸಾಲವನ್ನೂ ಪಡೆದಿದ್ದೇನೆ. ಆ ಸಾಲವನ್ನು ಇಂದಿಗೂ ಮರುಪಾವತಿಸುತ್ತಿದ್ದೇನೆ. ನನ್ನ ಶಿಕ್ಷಣದ ಎಲ್ಲ ದಾಖಲೆಗಳು ಪಾರದರ್ಶಕವಾಗಿದ್ದು, ಯಾರೂ ಬೇಕಾದರೂ ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ದೀಪ್ಕೆ ಆರೋಪಿಸಿದರು. “ನನ್ನ ಮನೆಗೆ ಇಡಿ ಅಧಿಕಾರಿಗಳು ಬರಲಿ, ತನಿಖೆ ನಡೆಸಲಿ. ನನ್ನ ಪದವಿ ಅಧಿಕೃತವಾಗಿದೆ. ಹಾಗೆಯೇ ಪ್ರಧಾನಿ ಮೋದಿಯವರ ಪದವಿಯೂ ಅಧಿಕೃತವಾಗಿರಲಿ ಎಂದು ನಾನು ಆಶಿಸುತ್ತೇನೆ. ಆದರೆ ಇಡಿಯನ್ನು ಕಳುಹಿಸುವ ಪ್ರಧಾನಿ ತಮ್ಮ ಪದವಿ ಪ್ರಮಾಣಪತ್ರವನ್ನು ಯಾವಾಗ ಸಾರ್ವಜನಿಕರಿಗೆ ತೋರಿಸುತ್ತಾರೆ?” ಎಂದು ಪ್ರಶ್ನಿಸಿದರು.

ರಾಜಕೀಯ ವ್ಯವಸ್ಥೆಯ ಮೇಲೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇಂದು ಮತದಾರರ ಆಶಯಕ್ಕೆ ಬೆಲೆ ಇಲ್ಲದಂತಾಗಿದೆ. ಜನರು ಒಬ್ಬರಿಗೆ ಮತ ಹಾಕಿದರೂ, ನಂತರ ಶಾಸಕರು ಪಕ್ಷಾಂತರ ಮಾಡಿ ಬೇರೆ ಸರ್ಕಾರ ರಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷವಾಗಿ ಮುಂದುವರಿಯುವುದಕ್ಕಿಂತ ಸಾರ್ವಜನಿಕ ಚಳವಳಿಯಾಗಿ ಕಾರ್ಯನಿರ್ವಹಿಸುವುದೇ ಸೂಕ್ತ” ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಇಡಿ ಮತ್ತು ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಯನ್ನು ಬಾಂಗ್ಲಾದೇಶ ಮತ್ತು ನೇಪಾಳದ ದಂಗೆಗಳಿಗೆ ಹೋಲಿಸಿದ ಲೇಖಕಿ ತಸ್ಲಿಮಾ ನಸ್ರೀನ್ ಅವರ ಹೇಳಿಕೆಯನ್ನು ದೀಪ್ಕೆ ತೀವ್ರವಾಗಿ ಖಂಡಿಸಿದರು. “ನಾವು ಮಹಾತ್ಮ ಗಾಂಧೀಜಿಯವರ ಅಹಿಂಸೆಯ ತತ್ವವನ್ನು ಅನುಸರಿಸುವವರು. ನಮ್ಮ ಹೋರಾಟ ಸಂವಿಧಾನಬದ್ಧವಾಗಿದೆ. ನಮ್ಮನ್ನು ವಿದೇಶಿ ದಂಗೆಕೋರರಿಗೆ ಹೋಲಿಸುವುದು ಸರಿಯಲ್ಲ. ನೀಟ್ ಅಕ್ರಮದ ವಿರುದ್ಧ ಹೋರಾಡಿದ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿದ ದೀಪ್ಕೆ, “ದೇಶದ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ. ಆದರೆ ಪ್ರಸ್ತುತ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಅನುದಾನ ನೀಡುತ್ತಿದೆ. ಶಿಕ್ಷಣ ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗಬೇಕು. ಸಿಜೆಪಿ ಸಂಘಟನೆಯನ್ನು ದೇಶಾದ್ಯಂತ ವಿಸ್ತರಿಸಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಲಾಗುವುದು” ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು