ಅಗರ್ತಲಾ: ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಆರೋಪಿಸಿದ್ದಾರೆ. ವೈವಿಧ್ಯತೆಯ ನಡುವೆಯೂ ಭಾರತದ ನಿಜವಾದ ಶಕ್ತಿ ಇರುವುದು ಅದರ ಐಕ್ಯತೆಯಲ್ಲಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಗರ್ತಲಾದಿಂದ ಸುಮಾರು 23 ಕಿ.ಮೀ ದೂರದಲ್ಲಿರುವ ಫಕ್ರೀಮುರಾದಲ್ಲಿ ಮಾ ಚಿನ್ಮಯಿ ಸೌಂದರ್ಯ ದೇವಸ್ಥಾನದ ಪ್ರತಿಷ್ಠಾಪನಾ ಸಮಾರಂಭದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಭಾರತವು ತನ್ನ ಶತಮಾನಗಳ ಹಳೆಯ ನಾಗರಿಕತೆಯ ಬಲದೊಂದಿಗೆ ಮುನ್ನಡೆದರೆ, ತಮ್ಮ “ಅಂಗಡಿಗಳು” (ಸ್ವಾರ್ಥಗಳು) ಮುಚ್ಚುತ್ತವೆ ಎಂದು ಕೆಲವು “ದುಷ್ಟ ಶಕ್ತಿಗಳು” ಆತಂಕಗೊಂಡಿವೆ ಎಂದು ದೂರಿದರು.
“ಅವರು ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಜನರ ನಡುವೆ ಜಗಳವನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ನಾನು ಉದಾಹರಣೆಗಳನ್ನು ನೀಡುವ ಅಗತ್ಯವಿಲ್ಲ” ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ತ್ರಿಪುರಾ ರಾಜ್ಯಪಾಲ ಇಂದ್ರಸೇನ ರೆಡ್ಡಿ, ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಮತ್ತು ಮುಖ್ಯಮಂತ್ರಿ ಮಾಣಿಕ್ ಸಾಹಾ ಉಪಸ್ಥಿತರಿದ್ದರು.
ವೈವಿಧ್ಯತೆಯು ಭಾರತದ ವಿಶಿಷ್ಟ ಲಕ್ಷಣವಾಗಿದೆ ಎಂದು ಒತ್ತಿಹೇಳಿದ ಭಾಗವತ್, ಅನೇಕ ಭಾಷೆಗಳು, ನಂಬಿಕೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಹೊಂದಿದ್ದರೂ ಭಾರತವು ಶತಮಾನಗಳ ಕಾಲ ಅಭಿವೃದ್ಧಿ ಹೊಂದುತ್ತಾ ಬಂದಿದೆ ಎಂದರು. “4,000 ಅಥವಾ 5,000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿಲ್ಲದ ರಾಷ್ಟ್ರಗಳು ಒಂದೇ ಧರ್ಮ ಮತ್ತು ಒಂದೇ ಭಾಷೆಯನ್ನು ಹೊಂದಿರಬಹುದು, ಆದರೆ ಭಾರತವು ಸಂಪೂರ್ಣವಾಗಿ ಭಿನ್ನವಾಗಿದೆ. ಇದು ಸುದೀರ್ಘ ಇತಿಹಾಸ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಹೊಂದಿದೆ” ಎಂದು ಅವರು ವಿವರಿಸಿದರು.
ಅಶಾಂತಿ ಬಿತ್ತುವ ಪ್ರಯತ್ನಗಳನ್ನು ವಿಫಲಗೊಳಿಸಲು ಜನರು ಒಗ್ಗಟ್ಟಾಗಿರಬೇಕೆಂದು ಅವರು ಕರೆ ನೀಡಿದರು. “ಯಾವುದೇ ಪರಿಸ್ಥಿತಿ ಎದುರಾದರೂ ಭಯಪಡುವ ಅಗತ್ಯವಿಲ್ಲ” ಎಂದು ಅವರು ಧೈರ್ಯ ತುಂಬಿದರು. ಪ್ರಸ್ತುತ ಜಗತ್ತಿನಲ್ಲಿ ಸತ್ಯಕ್ಕಿಂತ ಅಧಿಕಾರಕ್ಕೇ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದು ವಿಷಾದಿಸಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಸರಿಯಾದ ಹಾದಿಯಲ್ಲಿದ್ದರೂ ಬಲವಿಲ್ಲದಿದ್ದರೆ ಯಾರೂ ಗಮನಿಸುವುದಿಲ್ಲ. ಆದ್ದರಿಂದ ಜ್ಞಾನ ಮತ್ತು ಶಕ್ತಿಯನ್ನು ಗಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಐತಿಹಾಸಿಕವಾಗಿ ಸಾಮಾಜಿಕ ಜೀವನ ಮತ್ತು ಜ್ಞಾನದ ಕೇಂದ್ರಗಳಾಗಿ ಸೇವೆ ಸಲ್ಲಿಸಿವೆ ಎಂದು ಅವರು ಹೇಳಿದರು.
