“ಹೆಣ್ಣು ಮಕ್ಕಳ ಅತ್ಯಂತ ಖಾಸಗಿ ಅಂಗದ ಮೇಲೆ ನಡೆಯುವ ಈ ದೌರ್ಜನ್ಯದ ಅತ್ಯಂತ ಕಟು ವಾಸ್ತವವೆಂದರೆ, ಇದನ್ನು ಒಬ್ಬ ಹೆಣ್ಣೇ ಇನ್ನೊಬ್ಬ ಹೆಣ್ಣುಮಗುವಿಗೆ ಮಾಡುವುದು..” The Wire ನಿಯತಕಾಲಿಕೆಯ ಅಂಕಣ ಬರಹದ ಅನುವಾದ. ಮೂಲ ಬರಹ ಹರೀಂದರ್ ಬವೇಜಾ.. ಕನ್ನಡಕ್ಕೆ ಸುನೈಫ್
ವರ್ಷಗಳ ಕಾಲ ನಡೆಯುವ ಕಾನೂನು ಹೋರಾಟಗಳನ್ನು ಗಮನಿಸುವ ಮೊದಲು ನಾವು ಇಲ್ಲಿನ ವೈಯಕ್ತಿಕ ಕಥೆಗಳನ್ನು ಕೇಳಿಸಿಕೊಳ್ಳಬೇಕಿದೆ. ಧರ್ಮ, ಸಂಸ್ಕೃತಿ, ಆಚಾರಗಳೆಂದು ಹೇಳಿಕೊಂಡು ಆರೇಳು ವರ್ಷ ಪ್ರಾಯದ ಹೆಣ್ಣು ಮಕ್ಕಳ ಮೇಲೆ ನಡೆಯುವ ಈ ದೌರ್ಜನ್ಯದ ಆಳವನ್ನು ಗಮನಿಸಬೇಕಿದೆ.
ಒಲೆಯ ಮೇಲೆ ಕಾಯಿಸಿದ ಬ್ಲೇಡ್ ಅಥವಾ ಚಾಕುವಿನ ಸಹಾಯದಿಂದ ಹೆಣ್ಣು ಮಕ್ಕಳ ಭಗಶಿಶ್ನದ ಭಾಗವನ್ನು ಕತ್ತರಿಸುವ ಪ್ರಕ್ರಿಯೆಯೇ ಹೆಣ್ಣು ಮಕ್ಕಳ ಜನನಾಂಗ ಛೇದನ (FGM). ಇದು ಅತ್ಯಂತ ಕ್ರೂರವೂ ಅಮಾವನೀಯವೂ ಆಗಿ ನಡೆಯುತ್ತದೆ. ತಾಯಿ, ಅಜ್ಜಿ ಅಥವಾ ಇತರ ಹಿರಿಯ ಮಹಿಳೆಯರು ಮಗುವನ್ನು ಬಲವಾಗಿ ಹಿಡಿದಿಟ್ಟುಕೊಂಡು, ಯಾವುದೇ ರೀತಿಯ ತರಬೇತಿಯಿಲ್ಲದ ಮಹಿಳೆಯರ ಕೈಯಿಂದ, ಕಾಯಿಸಿದ ಹರಿತ ಆಯುಧಗಳ ಮೂಲಕ ಜನನಾಂಗವನ್ನು ಕತ್ತರಿಸುತ್ತಾರೆ.
ಇದಕ್ಕಾಗಿ ಮುಂಬೈನ ಬೋಹ್ರಾ ಮೊಹಲ್ಲಾಗಳಲ್ಲಿರುವ ಶಿಥಿಲಾವಸ್ಥೆಯ ಮನೆಗಳಿಗೆ ಈ ಮಕ್ಕಳನ್ನು ಕರೆದೊಯ್ಯಲಾಗುತ್ತದೆ. ಈ ಮಕ್ಕಳು ತಾವು ಅತಿಯಾಗಿ ನಂಬುವ ಅಮ್ಮ ಅಥವಾ ಹತ್ತಿರದ ಇತರ ಮಹಿಳೆಯರ ಜೊತೆಗೆ ಚಾಕಲೇಟ್ ಮತ್ತು ಐಸ್‌ಕ್ರೀಂ ತಿನ್ನುವ ಆಸೆಯಲ್ಲಿ ಹೊರಡುತ್ತಾರೆ. ಆದರೆ, ಮರಳಿ ಬರುವುದು ಜೀವ ಹಿಂಡುವ ನೋವಿನೊಂದಿಗೆ.
ಈ ನೋವು ಮಾತ್ರ ಜೀವಮಾನ ಪೂರ್ತಿ ಉಳಿದು ಬಿಡುತ್ತದೆ. ಭಾರತದಲ್ಲಿರುವ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಬೊಹ್ರಾ ಸಮುದಾಯದ ಹೆಣ್ಣುಮಕ್ಕಳ ಪಾಲಿನ ನರಕವಾಗಿ ಬಿಡುತ್ತದೆ. ಈ ನೋವು ಮತ್ತು ಆಘಾತಗಳ ನಡುವೆಯೇ ಇಂದು ಅದಕ್ಕೊಂದು ದನಿ ಸಿಕ್ಕಿದೆ. ಸುಮಾರು 50 ವರ್ಷಗಳ ಹಿಂದೆ ಈ ಹಿಂಸೆಗೆ ಒಳಗಾಗಿದ್ದ ಮಾಸೂಮಾ ರನಾಲ್ವಿ ಅವರು ಈಗ ಈ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿಸಲು ನಿರ್ಧರಿಸಿದ್ದಾರೆ.
ರನಾಲ್ವಿ ಮತ್ತು ಈ ಕೃತ್ಯಕ್ಕೆ ಬಲಿಯಾದ ಇತರ ಬೋಹ್ರಾ ಹೆಣ್ಣು ಮಕ್ಕಳು ಸೇರಿಕೊಂಡು, ಖತ್ನಾ ಅಥವಾ ಖಫ್ಜ್ ಎಂದು ಸಮುದಾಯದೊಳಗೆ ಕರೆಯುವ ಈ ಅಕ್ರಮದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಮೊದಲು ಆನ್ಲೈನ್ ಅಭಿಯಾನಗಳ ಮೂಲಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗುವ ಮೂಲಕ ಈ ಪುರಾತನ ಪದ್ಧತಿಯ ಬಗ್ಗೆ ಜನರ ಗಮನ ಸೆಳೆದಿದ್ದಾರೆ.
2017ರಲ್ಲಿ ಆರಂಭವಾದ ಈ ಕಾನೂನು ಹೋರಾಟವನ್ನು ಈಗ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಆದರೆ, ಈ ಪ್ರಕರಣವನ್ನು “ಧಾರ್ಮಿಕ ಸ್ವಾತಂತ್ರ್ಯ”ಕ್ಕೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ (ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಮತ್ತು ಸಮುದಾಯದ ಹೊರಗೆ ವಿವಾಹವಾದ ಪಾರ್ಸಿ ಮಹಿಳೆಯರು ಅಗ್ನಿ ದೇಗುಲ ಪ್ರವೇಶಿಸುವ ಹಕ್ಕುಗಳ ಪ್ರಕರಣ) ಸೇರಿಸಿರುವುದರಿಂದ, FGM ನಿಷೇಧದ ಬಗ್ಗೆ ತೀರ್ಪು ಬರುವ ಸಾಧ್ಯತೆ ಬಹಳ ಕ್ಷೀಣವೆಂದು ಹೇಳಲಾಗುತ್ತಿದೆ. ಇಲ್ಲಿ ರನಾಲ್ವಿ ಮತ್ತು ಅವರ ವಕೀಲರು ಎತ್ತಿರುವ ಮೂಲಭೂತ ಪ್ರಶ್ನೆ ಅತ್ಯಂತ ಸಮಂಜಸವಾಗಿದೆ: “ದೇಹಕ್ಕೆ ಹಾನಿ ಮಾಡುವ ಇಂತಹ ಕ್ರೂರ ಪದ್ಧತಿಯನ್ನು, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣಗಳ ಜೊತೆ ಸೇರಿಸಲು ಹೇಗೆ ಸಾಧ್ಯ?”
ಈ ಒಂಭತ್ತು ನ್ಯಾಯಾಧೀಶರ ಪೀಠವು ಸಂವಿಧಾನದ 25 ಮತ್ತು 26ನೇ ವಿಧಿಗಳ ವ್ಯಾಪ್ತಿ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯಗಳಿಗೆ ಹಸ್ತಕ್ಷೇಪ ನಡೆಸಲು ಇರುವ ವ್ಯಾಪ್ತಿಯ ಬಗ್ಗೆ ಪರಿಶೀಲಿಸುತ್ತಿದೆ. ಆದರೆ, ರನಾಲ್ವಿ ವಾದಿಸುವಂತೆ FGM ಪದ್ಧತಿಯು ಇಸ್ಲಾಂ ಧರ್ಮಕ್ಕಿಂತಲೂ ಹಳೆಯದು. ಹಾಗಾಗಿಯೇ ಇದು ಧರ್ಮಕ್ಕೆ ಸಂಬಂಧಿಸಿದ ವಿಷಯವೇ ಅಲ್ಲ.
“ನ್ಯಾಯಾಧೀಶರು ಈ ಜನನಾಂಗ ಛೇದನವನ್ನು ದೈಹಿಕ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ದೃಷ್ಟಿಕೋನದಿಂದ ನೋಡುತ್ತಾರೆ ಎಂದು ನಾವು ನಂಬಿದ್ದೇವೆ. ಹೆಣ್ಣು ಮಗುವಿನ ಅತ್ಯಂತ ಖಾಸಗಿ ಅಂಗಗಳನ್ನು ಮುಟ್ಟಿ ಅವಳನ್ನು ಜೀವನಪರ್ಯಂತ ಮಾನಸಿಕವಾಗಿ ಕುಗ್ಗಿಸುವ ಹಕ್ಕು ಯಾರಿಗೂ ಇಲ್ಲ. ಈಜಿಪ್ಟ್ ಮತ್ತು ಇಂಡೋನೇಷ್ಯಾದಂತಹ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು FGM ಅನ್ನು ನಿಷೇಧಿಸಿವೆ,” ಎಂದು ಅವರು ‘ದಿ ವೈರ್’ ಪತ್ರಿಕೆಗೆ ತಿಳಿಸಿದ್ದಾರೆ. ಮುಂದುವರಿದು, “ಈ ಪದ್ಧತಿಯು ಸಂಪೂರ್ಣವಾಗಿ ವಂಚನೆಯಿಂದ ಕೂಡಿದೆ. ಇದು ನಂಬಿಕೆಗೆ ದ್ರೋಹ ಬಗೆಯುವ ಕೃತ್ಯ ಮತ್ತು ನಿಮ್ಮ ಸ್ವಂತ ದೇಹದ ಮೇಲಿನ ಹಕ್ಕನ್ನೇ ಕಸಿದುಕೊಳ್ಳುತ್ತದೆ,” ಎಂದಿದ್ದಾರೆ.
ಆದರೆ, ಸರ್ಕಾರದ ನಿಲುವು ಈ ಹೋರಾಟಕ್ಕೆ ತೊಡಕಾಗಿ ನಿಂತಿದೆ. 2017ರಲ್ಲಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಿ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿದ್ದರು:
* FGM ಪದ್ಧತಿಯನ್ನು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಘೋಷಿಸಬೇಕು.
* ಅಂತರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳಿಗೆ ಅನುಗುಣವಾಗಿ FGM ವಿರೋಧಿ ಕಾನೂನುಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು.
* ಈಗಿರುವ ಕಾನೂನುಗಳ ಅಡಿಯಲ್ಲಿ FGM ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಬೇಕು.
‘ವಿ ಸ್ಪೀಕ್ ಔಟ್’ ಸಂಘಟನೆಯ ಮೂಲಕ ಕೆಲಸ ಮಾಡುತ್ತಿರುವ ರನಾಲ್ವಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಅದರ ಆರಂಭಿಕ ವಿಚಾರಣೆಗಳು ಆಶಾದಾಯಕವಾಗಿದ್ದವು. 2018ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರಿದ್ದ ಪೀಠವು, “ಮೇಲ್ನೋಟಕ್ಕೆ FGM ಸಂವಿಧಾನ ನೀಡಿರುವ ಖಾಸಗಿತನದ ಹಕ್ಕು ಮತ್ತು ಮಗುವಿನ ದೈಹಿಕ ಸಮಗ್ರತೆಯ ಉಲ್ಲಂಘನೆಯಂತೆ ಕಾಣುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದರು. ಅಲ್ಲದೆ ಈ ಪದ್ಧತಿಗೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಆಧಾರವಿಲ್ಲವೆಂದೂ ಇದು ತೀವ್ರ ನೋವು, ರಕ್ತಸ್ರಾವ ಹಾಗೂ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ ಎಂದೂ ನ್ಯಾಯಾಲಯ ಗುರುತಿಸಿತ್ತು.
FGM ಪದ್ಧತಿಯು ಭಾರತೀಯ ದಂಡ ಸಂಹಿತೆ (IPC) ಮತ್ತು ಪೋಕ್ಸೋ (POCSO) ಕಾಯಿದೆಯಗಳಡಿಯಲ್ಲಿ ಬರುತ್ತದೆಯಾದರೂ, ಭಾರತದಲ್ಲಿ ಇದನ್ನು ನಿಷೇಧಿಸುವ ಪ್ರತ್ಯೇಕ ಕಾನೂನು ಇಲ್ಲ. ಈ ಪ್ರಕರಣ ಆರಂಭವಾಗುವ ಮೊದಲು ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಮೇನಕಾ ಗಾಂಧಿ ಅವರು FGM ಒಂದು ಅಪರಾಧ ಎಂದು ಕಟುವಾಗಿ ಹೇಳಿದ್ದರು ಮತ್ತು ಬೋಹ್ರಾ ಸಮುದಾಯದ ಧಾರ್ಮಿಕ ಮುಖ್ಯಸ್ಥರಾದ ಸೈಯದ್ನಾ ಅವರಿಗೆ ಈ ಪದ್ಧತಿಯನ್ನು ನಿಲ್ಲಿಸಲು ಸೂಚಿಸಿದ್ದರು. ಇಲ್ಲದಿದ್ದರೆ ಸರ್ಕಾರವೇ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದೂ ತಾಕೀತು ಮಾಡಿದ್ದರು. ಆದರೆ, 2019ರಲ್ಲಿ ಸೈಯದ್ನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂಬೈನಲ್ಲಿ ಭೇಟಿಯಾಗುತ್ತಾರೆ.
ನಂತರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ, ಅಥವಾ ನಿರೀಕ್ಷಿತವೆಂದೇ ಹೇಳಬಹುದಾದ ಬೆಳವಣಿಗೆಯಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ಲಿಖಿತ ಮಾಹಿತಿ ನೀಡುತ್ತದೆ. ಅದರಲ್ಲಿ ಸರ್ಕಾರದ ವಾದ ಹೀಗಿತ್ತು. “ಭಾರತದಲ್ಲಿ ಹೆಣ್ಣು ಮಕ್ಕಳ ಜನನಾಂಗ ಛೇದನ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ರೀತಿಯ ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಯಲ್ಲಿ ಈ ಬಗ್ಗೆ ಯಾವುದೇ ದೂರುಗಳು ಇಲ್ಲ.” ಆದರೆ ಇಲ್ಲಿ ಗಮನಿಸಬೇಕಿರುವ ಮುಖ್ಯ ಅಂಶವೆಂದರೆ, ಅಪರಾಧವೆಂದು ಇನ್ನೂ ಪರಿಗಣಿತವಾಗದಿರುವ FGM ಅದು ಹೇಗೆ ಅಪರಾಧ ದಾಖಲೆ ಬ್ಯೂರೋದಲ್ಲಿ ಲಭ್ಯವಾಗುತ್ತದೆ?
ಇದೇ ಸಮಯದಲ್ಲಿ ಬೋಹ್ರಾ ಸಮುದಾಯದ ಒಳಗಿನ ಒಂದು ಗುಂಪು “ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ದಾವೂದಿ ಬೋಹ್ರಾ ಮಹಿಳಾ ಸಂಘ” (DBWRF) ಎಂಬ ಹೆಸರಿನಲ್ಲಿ ಸಂಘಟಿತವಾಗಿ ಈ PIL ಅನ್ನು ವಿರೋಧಿಸಲು ಶುರು ಮಾಡುತ್ತಿದೆ. ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ.
ಹೆಣ್ಣು ಮಕ್ಕಳ ಅತ್ಯಂತ ಖಾಸಗಿ ಅಂಗದ ಮೇಲೆ ನಡೆಯುವ ಈ ದೌರ್ಜನ್ಯದ ಅತ್ಯಂತ ಕಟು ವಾಸ್ತವವೆಂದರೆ, ಇದನ್ನು ಒಬ್ಬ ಹೆಣ್ಣೇ ಇನ್ನೊಬ್ಬ ಹೆಣ್ಣುಮಗುವಿಗೆ ಮಾಡುವುದು. ಭಗಶಿಶ್ನದ ಮೇಲ್ಭಾಗವು ‘ಅನಗತ್ಯ ಚರ್ಮ’ ಎಂದೂ, ಅದು ‘ಪಾಪದ ಮೂಲ’ ಎಂದೂ ಮತ್ತು ಅದು ಮಹಿಳೆಯರನ್ನು ದಾರಿ ತಪ್ಪುವಂತೆ ಮಾಡುತ್ತದೆ ಎಂಬ ನಂಬಿಕೆಗಳೇ ಈ ಕ್ರೌರ್ಯಕ್ಕೆ ಕಾರಣ. ಅದನ್ನು ಅವರು ಅಶ್ಲೀಲ ಮಾಂಸದ ಮುದ್ದೆ (ಹರಾಂ ಕಿ ಬೋಟಿ) ಎಂಬಂತೆ ನೋಡುತ್ತಾರೆ.
ಈ ನೋವನ್ನು ಅನುಭವಿಸಿದ ಮಹಿಳೆಯರನ್ನು ಮಾತನಾಡಿಸಿದರೆ, ಅವರಿಗೆ ಲೈಂಗಿಕ ಜೀವನ ಎಷ್ಟು ಭಯಾನಕವಾಗಿದೆ ಮತ್ತು ಅದು ಅವರ ವೈವಾಹಿಕ ಜೀವನ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದು ತಿಳಿಯುತ್ತದೆ.
FGM ಪದ್ಧತಿಯು ಸಂವಿಧಾನದ ಮೂಲ ಆಶಯಗಳನ್ನೇ ಉಲ್ಲಂಘಿಸುತ್ತದೆ. ಒಂಭತ್ತು ನ್ಯಾಯಾಧೀಶರ ಪೀಠವು ಈ ಪ್ರಮುಖ ವಿಷಯದ ವಿಚಾರಣೆ ನಡೆಸುವಾಗ, ಸಂಪ್ರದಾಯ ಅಥವಾ ಧರ್ಮದ ಹೆಸರಿನಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ಹೀಗೆ ಹಿಂಸಿಸಬೇಕೇ ಎಂದು ಆಲೋಚಿಸಬೇಕಿದೆ. ಕಳೆದ ಒಂಭತ್ತು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ತೆವಳುತ್ತಾ ಸಾಗುತ್ತಿರುವಾಗ, ಇನ್ನೂ ಎಷ್ಟು ಹೆಣ್ಣು ಮಕ್ಕಳನ್ನು ಅಂತಹ ಶಿಥಿಲ ಕಟ್ಟಡಗಳಿಗೆ ಅಥವಾ ಆಸ್ಪತ್ರೆಗಳಿಗೆ ಈ ಹಿಂಸೆಗಾಗಿ ಕರೆದೊಯ್ಯಲಾಗಿದೆಯೋ ಯಾರಿಗೆ ಗೊತ್ತು?
(ಲೇಖಕರು ಹಿರಿಯ ಪತ್ರಕರ್ತೆ ಮತ್ತು ‘ದೇ ವಿಲ್ ಶೂಟ್ ಯೂ ಮೇಡಂ’ ಪುಸ್ತಕದ ಲೇಖಕರು)
