Home ಅಂಕಣ SIR ನಿಂದ ಡಿಲಿಮಿಟೇಷನ್ ಹಾನಿಯೂ ತೀವ್ರವಾಗಲಿದೆಯೇ? ಬಿಜೆಪಿಯೇತರ ರಾಜ್ಯಗಳಿಗೆ ಡಬಲ್ ಪೆಟ್ಟು.

SIR ನಿಂದ ಡಿಲಿಮಿಟೇಷನ್ ಹಾನಿಯೂ ತೀವ್ರವಾಗಲಿದೆಯೇ? ಬಿಜೆಪಿಯೇತರ ರಾಜ್ಯಗಳಿಗೆ ಡಬಲ್ ಪೆಟ್ಟು.

0

“..ದೇಶದೊಳಗೆ ಪ್ರಜಾತಾಂತ್ರಿಕ ಪ್ರಾತಿನಿಧ್ಯದಲ್ಲಿ  ಪ್ರಾದೇಶಿಕ ಅಸಮತೋಲನ ಆಗದಂತೆ ಮಾಡುವುದು ಹೇಗೆ ಎನ್ನುವುದು ನಿಜವಾದ ಪ್ರಜಾತಂತ್ರವಾದಿಗಳು ಗಂಭೀರವಾಗಿ ಯೋಚಿಸಬೇಕಿದೆ…” ಚಿಂತಕರಾದ ಶಿವಸುಂದರ್ ಅವರ ಬರಹದಲ್ಲಿ

SIR ಇನ್ನು ಮುಗಿದೇ ಇಲ್ಲ. ಆಗಲೇ ಮೋದಿ ಸರ್ಕಾರ ಭಾರತದ ಜನತೆಯ ಮೇಲೆ ಡಿಲಿಮಿಟೇಷನ್ ಪ್ರಹಾರ ನಡೆಸುತ್ತಿದೆ.

ಡಿಲಿಮಿಟೇಷನ್ ನಂತರದ ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ 23.6%  ನಿಂದ 20% ಗೆ ಇಳಿದು , ಬಿಜೆಪಿ ಬಲಿಷ್ಠವಾಗಿರುವ  ಹಿಂದಿ-ಹಿಂದೂ ಹೃದಯ ಭಾಗದ ರಾಜ್ಯಗಳ ಪ್ರಾತಿನಿಧ್ಯ 38.1% ನಿಂದ   43.1ಗೆ ಏರಿಕೆಯಾಗುತ್ತದೆ . ಇದರಿಂದ ಬಿಜೆಪಿ ತನ್ನ ವಿರೋಧಿ ಪಕ್ಷಗಳು ಪ್ರಬಲವಾಗಿರುವ ದಕ್ಷಿಣ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಿಯೂ ಅಧಿಕಾರದಲ್ಲಿ ಮುಂದುವರೆಯುವುದು ಸುಲಭವಾಗುತ್ತದೆ.

ಆದರೆ ಈ ಫೆಡರಲ್ ಸಮಸ್ಯೆಗೆ ಮತ್ತೊಂದು ಅಪ್ರಜಾತಾಂತ್ರಿಕ ಮುಖವೂ ಇದೆ.

ಡಿಲಿಮಿಟೇಷನ್ ವ್ಯವಸ್ಥೆ ಜಾರಿಗೆ ಬಂದದ್ದೇ ಒಬ್ಬ ವ್ಯಕ್ತಿಗೆ ಒಂದು ಒಂದು ಓಟು. ಒಂದು ಓಟಿಗೆ ಒಂದೇ ಮೌಲ್ಯದ ತತ್ವದ ಅನುಸಾರವಾಗಿ.

ಇದರಂತೆ  ಪ್ರತಿ  ಶಾಸನಸಭಾ ಅಥವಾ ಲೋಕಸಭಾ ಕ್ಷೇತ್ರದ ಪ್ರತಿನಿಧಿ ದೇಶದ್ಯಂತ ಹೆಚ್ಚೂ ಕಡಿಮೆ ಒಂದೇ ಪ್ರಮಾಣದ ಮತದಾರರನ್ನು ಪ್ರತಿನಿಧಿಸುವಂತಾಗಬೇಕು. ಅದನ್ನು ಆಧರಿಸಿ   ಪ್ರತಿ ರಾಜ್ಯಗಳ ಶಾಸನ ಸಭಾ ಮತ್ತು ಲೋಕಸಭಾ ಸ್ಥಾನಗಳನ್ನು ನಿಗದಿ ಪಡಿಸುವುದು ಡಿಲಿಮಿಟೆಯೇಶನ್ ಹಿಂದಿನ ಪ್ರಜಾತಾಂತ್ರಿಕ ಪ್ರಣಾಲಿ.

ಉದಾಹರಣೆಗೆ :

-2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 15.44 ಕೋಟಿ ಮತದಾರರಿದ್ದರು. ಉ. ಪ್ರದೇಶಕ್ಕೆ ನೀಡಿರುವ ಒಟ್ಟು ಲೋಕಸಭಾ ಸ್ಥಾನ 80.

ಅಂದರೆ ಉ. ಪ್ರದೇಶದಲ್ಲಿ  ಒಬ್ಬ ಲೋಕಸಭಾ ಪ್ರತಿನಿಧಿ ಸರಾಸರಿ 19.30 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ

-ಅದೇ ರೀತಿ 2024 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 6.24 ಕೋಟಿ ಮತದಾರರಿದ್ದರು. ತಮಿಳುನಾಡಿಗೆ  ನೀಡಿರುವ ಒಟ್ಟು ಲೋಕಸಭಾ ಸ್ಥಾನ 39.

ಅಂದರೆ  ತಮಿಳುನಾಡಿನಲ್ಲಿ  ಒಬ್ಬ ಲೋಕಸಭಾ ಪ್ರತಿನಿಧಿ ಸರಾಸರಿ 16 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ …

ಇದರಿಂದಾಗಿ ತಾರ್ಕಿಕವಾಗಿ  ಉ. ಪ್ರದೇಶದ ಮತದಾರರ ಮತದಾನದ ಮೌಲ್ಯ, ತಮಿಳುನಾಡಿನ ಮತದಾರರ ಮೌಲ್ಯಕ್ಕಿಂತ ಕಡಿಮೆಯಾಗಿ ಬಿಡುತ್ತದೆ.

ಆದ್ದರಿಂದ ಡಿಲಿಮಿಟೇಷನ್ ವ್ಯವಸ್ಥೆಯು ಇದನ್ನು ಸರಿಪಡಿಸಿ ದೇಶಾದ್ಯಂತ ಸರಾಸರಿ ತಲಾ 10 ಲಕ್ಷಕ್ಕೊ ಅಥವಾ 15 ಲಕ್ಷಕ್ಕೊ ಒಬ್ಬರು ಲೋಕಸಭಾ ಪ್ರತಿನಿಧಿ ಎಂದು ಮಾಡಬೇಕಿತ್ತು.

ಆದರೆ ಇದರಿಂದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳ ಪ್ರಾತಿನಿಧ್ಯ  ಹೆಚ್ಚಾಗಿ , ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಿಬಿಡುತ್ತದೆ.

ಹೀಗೆ ದೇಶದೊಳಗೆ ಪ್ರಜಾತಾಂತ್ರಿಕ ಪ್ರಾತಿನಿಧ್ಯದಲ್ಲಿ  ಪ್ರಾದೇಶಿಕ ಅಸಮತೋಲನ ಆಗದಂತೆ ಮಾಡುವುದು ಹೇಗೆ ಎನ್ನುವುದು ನಿಜವಾದ ಪ್ರಜಾತಂತ್ರವಾದಿಗಳು ಗಂಭೀರವಾಗಿ ಯೋಚಿಸಬೇಕಿದೆ.

ಆದರೆ ಮೋದಿ ಸರ್ಕಾರ ಈ ಯಾವುದೇ ಪರಿವಿಲ್ಲದೆ ಡಿಲೀಮಿಟೇಷನ್ ಅನ್ನು ತನ್ನ ಫ್ಯಾಶಿಸ್ಟ್ ಸರ್ವಾಧಿಕಾರದ ಮುಂದುವರಿಕೆಗೆ ತಕ್ಕಂತೆ ಬಳಸುತ್ತಿರುವುದು ಸ್ಪಷ್ಟ.

ಆದರೆ ಈ ಮಧ್ಯೆ ಮೋದಿ ಸರ್ಕಾರ ಮಾಡಿರುವ  ಮಾಡುತ್ತಿರುವ SIR , ಈ ಮತಗಣಿತವನ್ನು ಮತ್ತು ಪ್ರಾತಿನಿಧ್ಯ ರಾಜಕೀಯವನ್ನು  ಇನ್ನಷ್ಟು ಬಿಜೆಪಿ ಪರ ಮಾಡಿಬಿಟ್ಟಿರುವುದು ಹೆಚ್ಚು ಚರ್ಚೆಯಾಗುತ್ತಿಲ್ಲ..

ಮುಖ್ಯವಾದ ವಿಷಯವೇನೆಂದರೆ:
ಲೋಕಸಭಾ ಸ್ಥಾನವನ್ನು ತೀರ್ಮಾನ ಮಾಡುವುದು ಡಿಲಿಮಿಟೇಷನ್ನೇ ಆದರೂ  ಮತದಾರರು ಯಾರೆಂದು ತೀರ್ಮಾನ ಮಾಡುವುದು SIR ..

SIR ನಂತರದ ಡಿಲಿಮಿಟೇಷನ್ ಇಂದಾಗಿ  ದಕ್ಷಿಣ ರಾಜ್ಯಗಳು ಹೆಚ್ಚು ಪೆಟ್ಟು ತಿನ್ನುತ್ತವೆ.

ಅದು ಹೇಗೆಂದು SIR ಮುಗಿದಿರುವ ಉ. ಪ್ರದೇಶ ಮತ್ತು ತಮಿಳುನಾಡು ಉದಾಹರಣೆಗಳನ್ನು ಗಮನಿಸೋಣ :

-ಹಾಲಿ ಮೋದಿ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿರುವ ಸಂವಿಧಾನ ತಿದ್ದುಪಡಿ ಕಾಯ್ದೆಯ ಪ್ರಕಾರ ಲೋಕಸಭಾ ಸ್ಥಾನಗಳನ್ನು 2011 ರ ಜನಗಣತಿಯನ್ನು ಆಧರಿಸಿ ಮಾಡಲಾಗುತ್ತಿದೆ.
ಅದರಂತೆ :

-80  ಲೋಕಸಭಾ ಸ್ಥಾನಗಳನ್ನು ಹೊಂದಿದ್ದ ಉ.ಪ್ರದೇಶಕ್ಕೆ 143  ಸ್ಥಾನಗಳು ಸಿಗುತ್ತವೆ.
-39   ಲೋಕಸಭಾ ಸ್ಥಾನಗಳನ್ನು ಹೊಂದಿದ್ದ  ತಮಿಳುನಾಡಿಗೆ  49 ಸ್ಥಾನಗಳು ಸಿಗುತ್ತವೆ.

-ಆದರೆ SIR ಆದ ನಂತರ ಉ. ಪ್ರದೇಶದ ಮತದಾರರ ಸಂಖ್ಯೆ 13.39 ಕೋಟಿ ಮಾತ್ರ. ಅಂದರೆ   13.39 ಕೋಟಿ ಮತದಾರರಿಗೆ 143  ಸ್ಥಾನಗಳು ಸಿಗುತ್ತವೆ. 

ಅಂದರೆ SIR ಮತ್ತು ಡಿಲಿಮಿಟೇಷನ್ ಆದ ನಂತರ  ಉ. .ಪ್ರದೇಶದಲ್ಲಿ ಸರಾಸರಿ 9.36 ಲಕ್ಷ (133900000 /143=9.36 )   ಜನರಿಗೆ ಒಬ್ಬರು ಲೋಕಸಭಾ ಸದಸ್ಯರು ಪ್ರತಿನಿಧಿಸುತ್ತಾರೆ.

-ಆದರೆ ತಮಿಳುನಾಡಿನಲ್ಲಿ  SIR ಆದ ನಂತರ  ಮತದಾರರ ಸಂಖ್ಯೆ 5.67 ಕೋಟಿ. ಹೀಗಾಗಿ ಈಗ ಅಲ್ಲಿ 5.67  ಕೋಟಿ ಮತದಾರರಿಗೆ  ಸ್ಥಾನಗಳು   49  ಸಿಗುತ್ತವೆ.

ಈ ಕಾರಣದಿಂದ SIR ಮತ್ತು ಡಿಲಿಮಿಟೇಷನ್ ಆದ ನಂತರ  ತಮಿಳುನಾಡಿನಲ್ಲಿ  ಸರಾಸರಿ 11.57 ಲಕ್ಷ ಜನರಿಗೆ ಒಬ್ಬರು ಲೋಕಸಭಾ ಸದಸ್ಯರು ಪ್ರತಿನಿಧಿಸುತ್ತಾರೆ.

ಅಂದರೆ SIR ಮತ್ತು ಡಿಲಿಮಿಟೇಷನ್ ಆದ ನಂತರ :
ಉ.ಪ್ರದೇಶದಲ್ಲಿ  9.36 ಲಕ್ಷ ಜನರಿಗೆ ಒಬ್ಬರು ಲೋಕಸಭಾ ಸದಸ್ಯರು..
ತಮಿಳುನಾಡಿನಲ್ಲ 11.57 ಲಕ್ಷ ಜನರಿಗೆ ಒಬ್ಬರು ಲೋಕಸಭಾ ಸದಸ್ಯರು!
ಹೀಗಾಗಿ SIR ನಂತರದ ಡಿಲೀಮಿಟೇಷನ್ ನಿಂದಾಗಿ ದಕ್ಷಿಣ ರಾಜ್ಯಗಳ ಮತಮೌಲ್ಯವೂ ಕಡಿಮೆಯಾಗಲಿದೆ…

ಹೀಗಾಗಿ ತಮಿಳುನಾಡಿಗೆ SIR ಇಂದಲೂ ಪೆಟ್ಟು, ಡಿಲಿಮಿಟೇಷನ್ ಇಂದಲೂ ಪೆಟ್ಟು. SIR ನಿಂದಾಗಿ ಡಿಲಿಮಿಟೇಷನ್ ಪೆಟ್ಟು ಇನ್ನೂ ಹೆಚ್ಚು!!

ಕರ್ನಾಟಕದಲ್ಲಿ ಇನ್ನೂ SIR ಆಗಿಲ್ಲ. ಡಿಲಿಮಿಟೇಷನ್ ಆದ ಮೇಲೆ   ಕರ್ನಾಟಕಕ್ಕೆ 41 ಸ್ಥಾನಗಳು ಸಿಗುತ್ತವೆ. ಈಗಿರುವಂತೆ ಮತದಾರರೆಲ್ಲರೂ ಉಳಿದುಕೊಂಡರೂ

ಸರಾಸರಿ 13. 51 ಲಕ್ಷ ಮತದಾರರಿಗೆ ಒಂದು  ಲೋಕಸಭಾ ಸ್ಥಾನ ಸಿಗುತ್ತದೆ. ತಮಿಳುನಾಡಿನಂತೆ ಇಲ್ಲೂ 97 ಲಕ್ಷ ಜನರು ಮತದಾನದ ಹಕ್ಕು ಕಳೆದುಕೊಂಡರೆ 11 ಲಕ್ಷಕ್ಕೆ ಮತದಾರರಿಗೆ ಒಂದು ಲೋಕಸಭಾ ಸ್ಥಾನ ಸಿಗುತ್ತದೆ.

ಹೀಗೆ  ಹಿಂದಿ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚೂ ಕಡಿಮೆ ಎಲ್ಲ ದಕ್ಷಿಣ ರಾಜ್ಯಗಳಲ್ಲಿ  ಕೇವಲ ಲೋಕಸಭಾ ಸ್ಥಾನಗಳ ಅನುಪಾತ  ಮಾತ್ರವಲ್ಲ ತಲಾವಾರು ಮತದ  ಮೌಲ್ಯವೂ ಕಡಿಮೆಯಾಗುತ್ತಿದೆ.

ಉ. ಪ್ರದೇಶದಂತೆ ತಲಾ 9.36 ಲಕ್ಷ ಮತದಾರರಿಗೆ ಒಂದು ಸ್ಥಾನದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯಿಸುವುದಾದರೆ   ತಮಿಳುನಾಡಿಗೆ ಸಿಗಬೇಕಿರುವುದು 49 ಸ್ಥಾನಗಳಲ್ಲ. 60 ಸ್ಥಾನಗಳು. ಹಾಗೆಯೇ ಕರ್ನಾಟಕಕ್ಕೂ ಸಹ.

ಆದ್ದರಿಂದ ಮೋದಿ ಸರ್ಕಾರದ SIR ಮತ್ತು ಡಿಲೀಮಿಟೇಷನ್ ಎರಡೂ ಅಸಂವಿಧಾನಿಕ. ಅಪ್ರಜಾತಾಂತ್ರಿಕ. ಎರಡನ್ನು ಸಂಪೂರ್ಣವಾಗಿ ವಿರೋಧಿಸಬೇಕಿದೆ.

ಡಿಲಿಮಿಟೇಷನ್ ಅನ್ನು ಪ್ರಾದೇಶಿಕ ತಾರತಮ್ಯ ಹೆಚ್ಚು ಮಾಡದೆ ದೇಶಾದ್ಯಂತ  ಒಂದು ಓಟಿಗೆ ಹೆಚ್ಚೂ ಕಡಿಮೆ ಒಂದೇ ಮೌಲ್ಯ ಇರುವಂತ ಪ್ರಜಾತಾಂತ್ರಿಕ ಮಾರ್ಗವನ್ನು ಅನ್ವೇಷಿಸಬೇಕಿದೆ.

You cannot copy content of this page

Exit mobile version