ಕೇರಳ ರಾಜ್ಯದ ತ್ರಿಶೂರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಕರ್ನಾಟಕ ಸರ್ಕಾರದ ಆಗ್ರಹಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಉಡಾಫೆಯ ಉತ್ತರ ನೀಡಿದ್ದಾರೆ. ಈ ಬೇಡಿಕೆಯನ್ನು ಅವರು “ರಾಜಕೀಯ ಗಿಮಿಕ್” ಎಂದು ಬಣ್ಣಿಸಿದ್ದು, ಪ್ರಿಯಾಂಕ್ ಖರ್ಗೆಯವರ ಕಾನೂನಾತ್ಮಕ ಪ್ರಶ್ನೆಗೆ ಕಾನೂನಾತ್ಮಕವಾಗಿ ಅಥವಾ ಸಂವಿಧಾನದ ಅಡಿಯಲ್ಲಿ ಸಂಘದ ಚಟುವಟಿಕೆ ಬಗ್ಗೆ ಸಮರ್ಪಕ ಉತ್ತರ ನೀಡಲು ಮೋಹನ್ ಭಾಗವತ್ ಹಿಂದೇಟು ಹಾಕಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಆರ್‌ಎಸ್‌ಎಸ್ ಯಾವುದೇ ರಹಸ್ಯ ಸಂಘಟನೆಯಲ್ಲ. ನಮ್ಮ ಶಾಖೆಗಳು ಮತ್ತು ಕಾರ್ಯಕ್ರಮಗಳು ತೆರೆದ ಮೈದಾನಗಳಲ್ಲಿ ನಡೆಯುತ್ತವೆ. ಜನರನ್ನು ಆಹ್ವಾನಿಸಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಕೆಲಸ ಮಾಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎನ್ನುವುದು ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.
ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಆರ್‌ಎಸ್‌ಎಸ್ ಚಟುವಟಿಕೆಗಳು ಪಾರದರ್ಶಕವಾಗಿಲ್ಲ ಎಂಬ ಕಾರಣ ನೀಡಿ, ಸಂಘಟನೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾಗವತ್, “ಇದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯವೇ ಇಲ್ಲ. ಇದು ಕೇವಲ ರಾಜಕೀಯ ಪ್ರೇರಿತ ಪ್ರಯತ್ನ. ಸಂಘದ ವಿರುದ್ಧ ಇಂತಹ ಗಿಮಿಕ್‌ಗಳನ್ನು ಮಾಡುವುದು ಹೊಸದೇನಲ್ಲ. ನಮ್ಮ ಕಾರ್ಯಗಳಿಗೆ ಅಡ್ಡಿಪಡಿಸಲು ಹಾಗೂ ಜನರಲ್ಲಿ ಅನುಮಾನ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ” ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಇತಿಹಾಸವನ್ನು ಉಲ್ಲೇಖಿಸಿದ ಅವರು, “ಬ್ರಿಟಿಷರ ಆಳ್ವಿಕೆಯ ಕಾಲದಲ್ಲೇ ಜನರ ಇಚ್ಛಾಶಕ್ತಿಯಿಂದ ಸಂಘ ಸ್ಥಾಪನೆಯಾಗಿದೆ. ಕಳೆದ 100 ವರ್ಷಗಳಲ್ಲಿ ಯಾರೂ ಸಂಘವನ್ನು ನೋಂದಣಿ ಮಾಡಿಕೊಳ್ಳುವಂತೆ ಹೇಳಿರಲಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನವಿದ್ದು, ಅದನ್ನು 1950ರ ದಶಕದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಗ ಸರ್ಕಾರ ಮೊದಲು ನೋಂದಣಿ ಮಾಡಿಕೊಳ್ಳಿ ಎಂದು ಯಾವುದೇ ಷರತ್ತು ವಿಧಿಸಿರಲಿಲ್ಲ” ಎಂದು ತಿಳಿಸಿದರು.
ಇದೇ ವೇಳೆ, ಆರ್‌ಎಸ್‌ಎಸ್ ಮೇಲೆ ಈ ಹಿಂದೆ ಎರಡು ಬಾರಿ ನಿಷೇಧ ಹೇರಲಾಗಿದ್ದ ವಿಚಾರವನ್ನು ಪ್ರಸ್ತಾಪಿಸಿದ ಭಾಗವತ್, “ಸರ್ಕಾರಕ್ಕೆ ಆರ್‌ಎಸ್‌ಎಸ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ನಮ್ಮ ಮೇಲೆ ನಿಷೇಧ ಹೇರಿದ ಸಂದರ್ಭಗಳಲ್ಲಿಯೂ ನ್ಯಾಯಾಲಯದ ಆದೇಶಗಳು ಮತ್ತು ಸತ್ಯಾಗ್ರಹಗಳ ಬಳಿಕ ನಿಷೇಧವನ್ನು ಹಿಂಪಡೆಯಲಾಯಿತು. ಸಂಘದ ಮೇಲೆ ನಿಷೇಧ ಹೇರಲಾಗಿದೆ ಎಂದರೆ, ಆರ್‌ಎಸ್‌ಎಸ್ ಎಂಬ ಸಂಘಟನೆಯ ಅಸ್ತಿತ್ವವನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂಬುದಕ್ಕೆ ಅದು ಸಾಕ್ಷಿ” ಎಂದು ಹೇಳಿದರು.
ಸಂಘದ ಕಾನೂನುಬದ್ಧ ಸ್ಥಾನಮಾನ, ಸಂಘಟನಾ ರಚನೆ, ಹಣಕಾಸು ಮೂಲಗಳು ಹಾಗೂ ಸಾರ್ವಜನಿಕ ಉತ್ತರದಾಯಿತ್ವಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದರು. ಆರ್‌ಎಸ್‌ಎಸ್‌ಗೆ ಸಾವಿರಾರು ಶಾಖೆಗಳು, ವಾರದ ಬೈಠಕ್‌ಗಳು ಮತ್ತು ಮಾಸಿಕ ಮಂಡಲಿಗಳಿದ್ದು, ಲಕ್ಷಾಂತರ ಜನರನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮಗಳು, ಸಮಾವೇಶಗಳು ಹಾಗೂ ಪಥಸಂಚಲನಗಳುು ನಡೆದರೂ ಸಂಘದ ಕಾನೂನುಬದ್ಧ ಸ್ಥಾನಮಾನ, ಅಧಿಕಾರಿಗಳು, ಆದಾಯದ ಮೂಲಗಳು, ವೆಚ್ಚ ಮತ್ತು ಆಸ್ತಿ ವಿವರಗಳು, ತೆರಿಗೆ ಪಾವತಿ ಸ್ಥಿತಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆದಿರುವ ಅನುಮತಿಗಳ ಕುರಿತು ಮಾಹಿತಿ ನೀಡಬೇಕೆಂಬುದು ಸಚಿವರ ಪ್ರಶ್ನೆಯಾಗಿತ್ತು. ಸಧ್ಯ ಇವು ಯಾವುದಕ್ಕೂ ಮೋಹನ್ ಭಾಗವತ್ ಉಡಾಫೆ ಉತ್ತರ ನೀಡಿದ್ದಲ್ಲದೆ, ಸಚಿವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಇಲ್ಲ ಎಂದೇ ಪ್ರತಿಕ್ರಿಯಿಸಿದ್ದಾರೆ.
