Home ಜನ-ಗಣ-ಮನ ಹೆಣ್ಣೋಟ ಮನೆಯ ಹಾದಿ ಮರೆತ ಮೋಹನ

ಮನೆಯ ಹಾದಿ ಮರೆತ ಮೋಹನ

0

(ಈ ವರೆಗೆ…)ಸುಕನ್ಯಾಳ ಮೋಹ ಪಾಶಕ್ಕೆ ಬಿದ್ದ ಮೋಹನ ಅವಳನ್ನು ಪ್ರೀತಿಸುವ ನಾಟಕವಾಡಿ ದಂಧೆಗೆ ಬಳಸುತ್ತಾನೆ. ಇದಕ್ಕಾಗಿ ಗಂಗೆಯನ್ನು ಬೇರೊಂದು ಬಾಡಿಗೆ ಮನೆಯಲ್ಲಿ ಬಿಟ್ಟು ಆಕೆಗೆ ಸಂಶಯ ಬರದ ರೀತಿಯಲ್ಲಿ ಇರುತ್ತಾನೆ. ಕೆಲ ಸಮಯದ ಬಳಿಕ ಸುಕನ್ಯಾಳ ಮಾತು ಕೇಳಿ ಗಂಗೆಯ ಮನೆ ಕಡೆ ಹೋಗುವುದನ್ನು ಕಡಿಮೆ ಮಾಡುತ್ತಾನೆ. ಗಂಗೆ ಏನು ಮಾಡಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತನೆಯ ಕಂತು.

ಮೋಹನ ಮನೆ ತೊರೆದು ಆಗಲೆ ಹದಿನೈದು ದಿನ ಕಳೆದಿತ್ತು. ಡಬ್ಬದಲ್ಲಿದ್ದ ಅಕ್ಕಿಕಾಳು ತಳ ಸೇರುತ್ತಾ ಗಂಗೆಯ ಆತಂಕವನ್ನು ಇಮ್ಮಡಿಗೊಳಿಸುತ್ತಿತ್ತು. ಅವಳ ಬಸುರೊತ್ತ ಹೊಟ್ಟೆಹಸಿವು ಪಾವಕ್ಕಿ ಅನ್ನ ಉಂಡರು ಇಂಗದಂತಾಗಿತ್ತು. ಆಗಲೋ ಈಗಲೋ ಮೆಲ್ಲನೆ ಮಿಸುಕಾಡಿ ತಾಯ ಜೀವವನ್ನು ಪುಳಕಗೊಳಿಸಬೇಕಾಗಿದ್ದ ಹೊಟ್ಟೆಯ ಕೂಸು, ಅಪ್ಪನೊಂದಿಗೆ ತಾನು ಜಿದ್ದಿಗೆ ಬಿದ್ದಂತೆ ಹೊಟ್ಟೆಯೊಳಗೆಲ್ಲಾ ಆರ್ಭಟಿಸಿ ಗುದ್ದಾಡಿ ಗಂಗೆಯನ್ನು ಹೈರಾಣಗೊಳಿಸುತ್ತಿತ್ತು. ಮೋಹನನ ದಾರಿ ಕಾಯುತ್ತಾ ಹಿಡಿ ಅಕ್ಕಿಯಲ್ಲಿಯೇ ಹಸಿವು ನೀಗಿಸಲು ಒದ್ದಾಡುತ್ತಿದ್ದ ಗಂಗೆ, ಅಕ್ಕಪಕ್ಕದವರ ಮುಂದೆ ತನ್ನ ಸಂಸಾರದ ಗುಟ್ಟು ಎಲ್ಲಿ ರಟ್ಟಾಗಿ ಬಿಡುವುದೋ ಎನ್ನುವ ಆತಂಕದಲ್ಲಿಯೇ   ಬಾಗಿಲು ತೆರೆಯದೆ ಒಳಗೇ ಕೂತುಬಿಟ್ಟಳು.

ಮುಂಜಾನೆ  ತಳ್ಳುಗಾಡಿಯೊಂದಿಗೆ ಬಂದು ತನ್ನ ಕಂಚಿನ ದನಿ ಎತ್ತಿ “ತರಕಾರಿಯೋಯ್… ತರಕಾರಿ…” ಎಂದು ಕೂಗು ಹಾಕಿ  ಗಂಗೆಯಿದ್ದ ಆ ಬೀದಿಯನ್ನು ಎಚ್ಚರಗೊಳಿಸುತ್ತಿದ್ದ ತರಕಾರಿ ಕೆಂಚಮ್ಮನಿಗೆ,  ತನ್ನಂತೆಯೆ ಹಳ್ಳಿಯಿಂದ ಬಂದ ಹುಡುಗಿಯಾಗಿದ್ದ ಗಂಗೆ ಎಂದರೆ ಬಲು ಇಷ್ಟ.  ತನ್ನ ಕೂಗು ಕೇಳಿದ ಕೂಡಲೇ ನಗುಮುಖದೊಂದಿಗೆ ಪ್ರತ್ಯಕ್ಷವಾಗುತ್ತಿದ್ದ ಗಂಗೆ, ಕೆಂಚಮ್ಮನೊಂದಿಗೆ ಅರಳು ಹುರಿದಂತೆ ಮಾತಾಡಿ ತನಗೆ ಬೇಕಾದ ತರಕಾರಿ ಕೊಂಡು ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಸಿಯೇ ಕಳುಹಿಸುತ್ತಿದ್ದಳು. ಅಂತಹ ಗಂಗವ್ವ ಯಾಕೋ ವಾರದಿಂದಲೂ ತನ್ನ ಕಣ್ಣಿಗೆ ಬಿದ್ದೇ ಇಲ್ಲವಲ್ಲ ಎಂದುಕೊಂಡ ಕೆಂಚವ್ವ, ಅವತ್ತು ತನ್ನ ತಳ್ಳುಗಾಡಿಯನ್ನು ಬದಿಗೆ ನಿಲ್ಲಿಸಿ  ಗಂಗೆ ಮನೆಯ ಕದ ಬಡಿದಳು. ಮಲಗಿದ್ದ ಗಂಗೆ ಅಸ್ಉಸ್ ಎನ್ನುತ್ತಾ ನಿಧಾನವಾಗಿ ಎದ್ದುಬಂದು ಬಾಗಿಲು ತೆಗೆದಳು.

ಕೆಂಚಮ್ಮನನ್ನು ಕಂಡ ಗಂಗೆ, ಕಷ್ಟಪಟ್ಟು  ತುಟಿಯ ಮೇಲೆ ನಗು ಅರಳಿಸಿ “ಓ….ಬಾರ್ ಕೆಂಚಕ್ಕ ಒಳ್ಗೆ” ಎಂದು ಮನಸ್ಸಿಲ್ಲದ ಮನಸ್ಸಿನಲ್ಲೇ ಕರೆದಳು.  ಲವಲವಿಕೆ ಕಳೆದುಕೊಂಡು ಸೊರಗಿದಂತೆನಿಸಿದ ಗಂಗೆಯನ್ನು ಕಂಡ  ಕೆಂಚಮ್ಮ, ಅವಳ ನಿಸ್ತೇಜ ಕಣ್ಣುಗಳನ್ನು ಕೆಳಗೆಳೆದು ನೋಡಿ “ಯಾಕ್ ಗಂಗವ್ವ ಹಿಂಗ್ ಬಿಳ್ಚೊಕೊಂಡು ಕೂತಿದ್ದಿ. ಕಣ್ಣಾಗೆ ರಕ್ತಾನೆ ಕಾಣುಸ್ತಿಲ್ಲ. ವಾರ್ದಿಂದೀಚೆಗೆ ಸೊಪ್ಪುತರಕಾರಿಗೂ ಬತ್ತಿಲ್ಲ. ಯಾಕ್ ಆರಾಮಿಲ್ವೆನವ್ವ” ಎಂದು ಗಲ್ಲ ಸವರಿದಳು. 

 ಈ ಹದಿನೈದು ದಿನಗಳಿಂದಲೂ ತನ್ನನ್ನು ಏನು ಎತ್ತ ಎಂದು ಕೇಳುವವರಿಲ್ಲದೆ ಅನಾಥಳಂತಾಗಿದ್ದ ಗಂಗೆಗೆ, ಕೆಂಚಮ್ಮನ ಆರ್ದ್ರವಾದ ದನಿ ಕೇಳಿ ಇಷ್ಟೂ ದಿನ ತನ್ನೊಳಗೆ ಮಡುಗಟ್ಟಿದ್ದ ದುಃಖವೆಲ್ಲ ಕಟ್ಟೆ ಒಡೆದು ಕಿತ್ತು ಬಂದಿತು. ಬಾಗಿಲು ಮುಚ್ಚಿ ಕೆಂಚಮ್ಮನೊಂದಿಗೆ ತನ್ನ  ಸಂಕಟವನ್ನೆಲ್ಲ ತೋಡಿಕೊಂಡ ಗಂಗೆ “ಇಷ್ಟು ದೊಡ್ ಊರ್ನಲ್ಲಿ ಅವರುನ್ನ ಎಲ್ಲಿ ಅಂತ ಹುಡಿಕೊಂಡೋಗ್ಲಿ ಕೆಂಚಕ್ಕ” ಎಂದು ಪರದಾಡಿದಳು.

ಗಂಗೆಯ ಮಾತು ಕೇಳಿ ಆಶ್ಚರ್ಯಚಕಿತಳಾದ ಕೆಂಚಮ್ಮ “ಇದೇನ್ ಹೇಳ್ತಿದ್ದಿ ಗಂಗವ್ವ, ನೆನ್ನೆ ದಿನ ನಿನ್ ಗಂಡುನ್ನ  ಆ ನಾಲ್ಕನೇ ಬೀದಿಲಿರೋ ಹಸ್ರುಬಣ್ಣುದ್ ಮನೆತವ ನೋಡಿದಿನಿ. ಕಾಲ್ಮೇಲೆ ಕಾಲಾಕೊಂಡು ಪೇಪರ್ ತಿರುವುತಾ ಕೂತಿದ್ರು ಅಂತಿನಿ” ಎಂದು ತಲೆಮೇಲೆ ಹೊಡೆದಂತೆ ಹೇಳಿದಳು. ಹಸಿರು ಬಣ್ಣದ ಮನೆ ಎಂದ ಕೂಡಲೇ ಗಂಗೆಗೆ ತಾನು ತಿಂಗಳ ಮಟ್ಟಿಗಿದ್ದ ಆ ದೊಡ್ಡ ಮನೆ ಧುತ್ತನೆ ಕಣ್ಣ ಮುಂದೆ ಬಂದು ನಿಂತಿತು. ಇಡೀ ಬೀದಿಗೆ ಇದ್ದಿದ್ದು ಅದೊಂದೆ ಗಾಢಹಸಿರು ಬಣ್ಣದ ಮನೆಯಾಗಿದ್ದರಿಂದ ಗಂಗೆಗೆ ಕೆಂಚಮ್ಮ ಹೇಳುತ್ತಿರುವುದು ಅದೇ ಮನೆ, ಎಂದು ಕೂಡಲೆ ತಿಳಿಯಿತು.

ಕೆಂಚಮ್ಮನ ಮಾತುಕೇಳಿ ಗಲಿಬಿಲಿಗೊಂಡ ಗಂಗೆ, “ನೀನು ಹೇಳ್ತಿರದು ನಿಜ್ವಾ ಕೆಂಚಕ್ಕ. ನನ್ನ ಗಂಡುನ್ನ್ ಮಖವ ನೀನು ಸರಿಯಾಗ್ ನೋಡಿದ್ದಿ ತಾನೆ” ಎಂದು ಕೇಳಿದಳು . “ಅಯ್ಯೋ…ಅದ್ಯಾಕಂಗ್ ಕೇಳ್ತಿ ಗಂಗವ್ವ. ಅಲ್ಲ ಅವತ್ತೊಂದಿನ ನೀನು ಒಳಗ್ ಬಂದು ಕಾಫಿ ಕುಡಿ ಬಾ ಕೆಂಚಕ್ಕ ಅಂತ ಹಠ ಹಿಡ್ಕೊಂಡು ಕೂತಾಗ, ನಾನು ತಡ ಆಯ್ತದೆ ಬ್ಯಾಡ ಕನವ್ವ ಇಲ್ಲೆ ಕೊಡು ಕುಡ್ದೋಯ್ತಿನಿ ಅಂದೆ, ಆಗ ನಿಮ್ಮ್ ಮನೆಯವರ್ ಬಂದು, “ಹೋಗ್ಲಿ ಬನ್ನಿ  ಬಸ್ರಿ ಹೆಂಗ್ಸು ಅಷ್ಟೊಂದು ಕರೀತವ್ಳೆ”  ಅಂತ ಹೇಳ್ಲಿಲ್ವಾ, ಅಮೇಲೆ ತಾನೆಯ ನಾನು ಒಳಗ್ಬಂದು ಕೂತಿದ್ದು ಎಂದು ನೆನಪಿಸಿದಳು. 

“ಆ ಪರಮಾತ್ಮುನ್ ಸತ್ಯುವಾಗ್ಲು ನಾನು ನೆನ್ನೆ ದಿನ ನೋಡಿದ್ದು ನಿಮ್ಮನೆ ಅವ್ರುನ್ನೆ ಕನವ್ವ.  ಅಂತೂ, ಇದೇನು ಇಟ್ ಹೊತ್ಗೆ ಇಲ್ ಬಂದು ಕೂತ್ಕಂಡವ್ರಲ್ಲ ಅಂದ್ಕೊಂಡೆ. ಅದ್ಯಾಕೋ ಮಾತಾಡ್ಸಕೆ ಸರಿ ಬರ್ಲಿಲ್ಲ. ಹಂಗಾಗಿ ಕಾಣ್ದೋಳಂಗೆ ತಲೆ ಬಗ್ಗುಸ್ಕೊಂಡು ಗಾಡಿ ನೂಕ್ಕೊಂಡು ಬಂದ್ಬುಟ್ಟೆ. ಅಲ್ಲ ಗಂಗವ್ವ ಬಾಗ್ಲು ಹಾಕ್ಕೊಂಡು ಚಿಂತೆ ಮಾಡ್ತಾ ಕೂತ್ರೆ ಸಮಸ್ಯೆ ಬಗೆಹರ್ದಾತೇ.., ನಾಕ್ಜನುದತ್ರ ಹಿಂಗಲ್ಲ ಹಿಂಗೆ ಅಂತ ಹೇಳ್ಕೊಂಡ್ರೆ ತಾನೆ ದಾರಿ ಕಾಣದು” ಎಂದು ಸಮಾಧಾನ ಮಾಡಿ, “ಏಳೇಳು ಈಗ್ಲೆ  ಆ ಮನೆತಕೋಗಿ ಇಚಾರುಸ್ಕೊಂಡು ಬಾ” ಎಂದು ಹೇಳಿ ಒಂದಷ್ಟು ಸೊಪ್ಪು ತರಕಾರಿ ತಂದು “ಬಸ್ರೆಂಗ್ಸು ಚನ್ನಾಗಿ ಉಂಡ್ಕೊಂಡು ತಿನ್ಕೊಂಡು ಇರ್ಬೇಕು ತಗೋ ವಸಿ ಏನಾರ ಮಾಡ್ಕೊಂಡು ತಿನ್ನು ನಾಳಿಕ್ ಬತ್ತಿನಿ ” ಎಂದು ಹೇಳಿ ತರಕಾರಿ ಗಾಡಿ ನೂಕುತ್ತ ಕಣ್ಮರೆಯಾದಳು. 

ಅಕ್ಕಿ ಖಾಲಿಯಾಗಿಬಿಟ್ಟರೆ ಎನ್ನುವ ಭಯಕ್ಕೆ ಪಡಿಅಕ್ಕಿ ಅನ್ನದಿಂದ, ಹಿಡಿಅಕ್ಕಿ ಅನ್ನಕ್ಕೆ ಬಂದು ನಿಂತಿದ್ದ ಗಂಗೆ, ರಾತ್ರಿ ಅರೆಹೊಟ್ಟೆಯಲ್ಲಿ ಮಲಗಿದ್ದರಿಂದಾಗಿ  ಕೆಂಚಮ್ಮ ತಂದಿಟ್ಟ ಸೊಪ್ಪು ತರಕಾರಿಗಳನ್ನು ನೋಡಿದ ಕೂಡಲೆ ಹಸಿವು ಆರ್ಭಟಿಸತೊಡಗಿತು. ಒಂದೇ ಉಸಿರಿಗೆ ಅವನ್ನೆಲ್ಲ ಚೆನ್ನಾಗಿ ತೊಳೆದು  ಉಪ್ಪು ಖಾರ ಹಾಕಿ ಬೇಯಿಸಿ ಗಬಗಬನೆ  ಒಂದು ತಟ್ಟೆ ತಿಂದು, ಹೊಟ್ಟೆಯಲ್ಲಿದ್ದ ಕೂಸನ್ನು ಶಾಂತಗೊಳಿಸಿ ಮೋಹನನನ್ನು ಹುಡುಕುತ್ತಾ ನಾಲ್ಕನೆ ಬೀದಿಯ ಆ ದೊಡ್ಡ ಮನೆಯಮುಂದೆ ಬಂದು ನಿಂತಳು.

ದೊಡ್ಡದಾಗಿ ತೆರೆದು ಕೊಂಡಿದ್ದ ಮನೆ ಬಾಗಿಲ ಮುಂದೆ ಹುಡುಗಿಯೊಬ್ಬಳು ರಂಗೋಲಿ ಹಾಕುತ್ತಾ ಕುಳಿತಿದ್ದಳು. ಅಳುಕುತ್ತಲೇ ಗೇಟ್ ತೆಗೆದು ಒಳಗೆ ಹೋದ ಗಂಗೆ, ಆ ಹುಡುಗಿಯ ಹಿಂದೆ ನಿಂತು “ಇಲ್ಲಿ ನಮ್ ಯಜ್ಮಾನ್ರೇನರ ಬಂದಿದ್ರೇನವ್ವ” ಎಂದು ಕೇಳಿದಳು. ಗಂಗೆ ಕೇಳಿದ ಪ್ರಶ್ನೆಗೆ ಗಾಬರಿಯಾಗಿ ತಲೆ ಎತ್ತಿ ನೋಡಿದ ಹುಡುಗಿ, ಒಂದೇ ನೆಗೆತಕ್ಕೆ ಒಳ ಸೇರಿ ಬಾಗಿಲು ಮುಚ್ಚಿಕೊಂಡಳು. ಹಾಗೆ ಎದ್ದೆನೋ ಬಿದ್ದೆನೋ ಎಂಬಂತೆ ಓಡಿ ಹೋದ ಹುಡುಗಿಯನ್ನು ಕಂಡು ಕಸಿವಿಸಿಕೊಂಡ ಗಂಗೆ,” ಅಯ್ಯೋ ಅದ್ಯಾಕವ್ವ ಹಂಗ್ ಓಡೋದೆ ಬಾಗ್ಲು ತಗಿ. ನಾನೇನು ಈ ಮನೆಗೆ ಹೊಸುಬ್ಳಲ್ಲ ನಿಮಗೂ ಮುಂಚೆ ಈ ಮನೇಲಿ ನಾವೆ ಇದ್ದಿದ್ದು”  ಎಂದು ಹೇಳಿ ಆ ಹುಡುಗಿಯ ಭಯವನ್ನು ದೂರ ಮಾಡಲು ಯತ್ನಿಸಿದಳು.  

ಕೆಲವು ಗಳಿಗೆಯಲ್ಲಿಯೇ ಬಾಗಿಲು ಮತ್ತೆ ತೆರೆದುಕೊಂಡಿತು.  ಸದ್ ಗೃಹಿಣಿಯಂತೆ  ಸುಕನ್ಯಾ ಎದುರು ನಿಂತಿದ್ದಳು.  ಅವಳನ್ನು ಕಂಡು  ಬೆಕ್ಕಸ ಬೆರಗಾದ ಗಂಗೆ ” ವಾ…ಇದೇನವ್ವ ಸುಕನ್ನಿ ನೀನ್ ಇಲ್ಲಿ” ಎಂದು ದೊಡ್ಡದಾಗಿ ಬಾಯಿ ತೆರೆದು ನಿಂತಳು. ತಾನೇ ಮುಂದುವರಿದು ಅವಳ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ತಾಳಿ ಹಿಡಿದು “ನಮ್ಗೊಂದು ಮಾತು ಹೇಳ್ದಂಗೆ   ಮದುವೆ ಮಾಡ್ಕೊಂಡ್ಬುಟ್ಟಿದ್ದಿ” ಎಂದು ಪ್ರೀತಿಯ ಮುನಿಸು ತೋರಿದಳು. ಗಂಗೆಯ ಮಾತಿಗೆ ದಿಮಾಕಿನಲ್ಲೆ ಉತ್ತರ ಕೊಟ್ಟ  ಸುಕನ್ಯಾ “ಬಾಗ್ಲಲ್ಲೇನು  ಮಾತು, ಬಂದು ಒಳಗ್ ಕೂತ್ಕೋ ಹೇಳ್ತೀನಿ” ಎಂದು ಬೆನ್ನು ತಿರುಗಿಸಿ ಒಳನಡೆದಳು.

 ಕೆಲವು ತಿಂಗಳ ಹಿಂದಷ್ಟೇ ಹಾಗೆ ಅಕ್ಕ, ಹೀಗೆ ಅಕ್ಕ, ಎಂದು  ತನ್ನೊಂದಿಗೆ ನಯವಾಗಿ ನಡೆದು ಕೊಳ್ಳುತ್ತಿದ್ದ ಸುಕನ್ಯಾಳಿಗೂ, ಈ ದಿನ ತನ್ನ ಮುಂದೆ ನಿಂತು ದಿಮಾಕು ತೋರುತ್ತಿರುವ ಸುಕನ್ಯಾಳಿಗೂ ಅಜಗಜಾಂತರ ವ್ಯತ್ಯಾಸವೆನಿಸಿತು. ಅವಳು ಏಕವಚನ ಬಳಸಿ ಬೇಕಾಬಿಟ್ಟಿಯಾಗಿ  ನಡೆಸಿ ಕೊಳ್ಳುತ್ತಿದ್ದುದು ಗಂಗೆಗೆ ಇರುಸು ಮುರುಸೆನಿಸಿತಾದರು ಅದನ್ನು ತೋರಗೊಡದೆ ” ಓ.. ನಾವು ಆ ಕಡಿಕ್ ಹೋದ್ಮೇಲೆ ನೀವು ಈ ಮನೆಗ್ ಬಾಡಿಗೆಗೆ ಬಂದ್ರಾ ಸುಕನ್ನಿ…” ಎಂದು ಹಾಲಿನತ್ತ ಹೆಜ್ಜೆ ಹಾಕುತ್ತಾ ಕೇಳಿದಳು. ಒಮ್ಮೆ ಹಿಂದೆ ತಿರುಗಿ ಗಂಗೆಯನ್ನು  ನೋಡಿದ ಸುಕನ್ಯಾ  “ನಾನು ಎಲ್ಲೂ ಹೋಗಿಲ್ಲ ಅವತ್ತಿನಿಂದ್ಲೂ ಅವರ್ಜೊತೆ ಇಲ್ಲೇ ಇದ್ದೀನಿ”  ಎಂದು ಅಣಕಿಸುವಂತೆ ಮೂತಿ ಓರೆ ಮಾಡಿ ನಕ್ಕಳು. 

ಸುಕನ್ಯಾಳ ಮಾತು ಕೇಳಿ ಗಲಿಬಿಲಿಗೊಂಡ ಗಂಗೆ ಒಂದೇ ಉಸಿರಿಗೆ ” ಅವ್ರು ಅಂದ್ರೆ ಯಾರು…? ಒಂಚೂರು ಬುಡ್ಸೇಳು…” ಎಂದು ಆತಂಕ ವ್ಯಕ್ತಪಡಿಸಿದಳು. ಗಂಗೆಯ ಮುಂದಿದ್ದ ಆರಾಮ ಕುರ್ಚಿಯಲ್ಲಿ  ಕಾಲು ಮೇಲೆ ಕಾಲಾಕಿ ಕೂತು ಅದನ್ನು ಹಿಂದಕ್ಕೂ ಮುಂದಕ್ಕೂ ಆಡಿಸತೊಡಗಿದ ಸುಕನ್ಯಾ,  ಕೂತ ಜಾಗದಿಂದಲೇ “ಎರಡು ಕಪ್ ಕಾಫಿ ತಗೊಂಡ್ ಬಾರೆ ವಸು” ಎಂದು ಜೋರು ದನಿಯಲ್ಲಿ ಒದರಿ, ಗಂಗೆಯನ್ನೇ ತದೇಕವಾಗಿ ನೋಡಿದಳು. “ನೀನ್ ಕಟ್ಕೊಂಡಿರೋ ಗಂಡ ಎಂತವ್ನು ಅಂತ ಹೇಳ್ತೀನಿ ಮನಸ್ಸುನ್ನ  ಗಟ್ಟಿ ಮಾಡ್ಕೊಂಡು ಕೇಳುಸ್ಕೊ” ಎಂದು ಮೋಹನನ ಒಂದೊಂದೇ ಪುರಾಣವನ್ನು ಬಿಚ್ಚತೊಡಗಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಹಿಂದಿನ ಕಂತು ಓದಿದ್ದೀರಾ? ಬಿರುಗಾಳಿಯ ಸುಳಿಯಲ್ಲಿ ಗಂಗೆ

You cannot copy content of this page

Exit mobile version