ಛತ್ತೀಸ್ಗಢ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಜಾರಿ ನಿರ್ದೇಶನಾಲಯವು(ಇಡಿ) ಶುಕ್ರವಾರ ಬಂಧಿಸಿದೆ.
ಈ ಹಿನ್ನೆಲೆಯಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಚೌರಾಸಿಯಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕಾರ್ಟೆಲ್ ಮೂಲಕ ಛತ್ತೀಸ್ಗಢದಲ್ಲಿ ಸಾಗಿಸಲಾಗುವ ಪ್ರತಿ ಟನ್ ಕಲ್ಲಿದ್ದಲಿನಿಂದ, ಪ್ರತಿ ಟನ್ಗೆ 25 ರೂ.ಗಳ ಅಕ್ರಮ ಲೆವಿಯನ್ನು ಸುಲಿಗೆ ಮಾಡಲಾಗುತ್ತಿದ್ದ ಹಗರಣಕ್ಕೆ ಸಂಬಂಧಿಸಿದಂತೆ 2002 ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಈ ಪ್ರಕರಣದಲ್ಲಿ ಹಲವಾರು ದಾಳಿಗಳನ್ನು ನಡೆಸಿದ ನಂತರ ಏಜೆನ್ಸಿಯು ಅಕ್ಟೋಬರ್‌ನಲ್ಲಿ ರಾಜ್ಯದ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇತರ ಇಬ್ಬರನ್ನು ಬಂಧಿಸಿತ್ತು.
ಈ ಕುರಿತು ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಘೇಲ್‌ರವರು, ತನಿಖಾ ಸಂಸ್ಥೆ ತನ್ನ ಮಿತಿಯನ್ನು ಮೀರುತ್ತಿದೆ ಮತ್ತು ರಾಜ್ಯದಲ್ಲಿನ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದ ಅವರು, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ‘ಹಿಂಸಾಚಾರ ಮತ್ತು ಬೆದರಿಕೆʼನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಡಿ ಮತ್ತು ಐಟಿ ಅಧಿಕಾರಿಗಳ ಹಿಂಸಾಚಾರದ ದೂರುಗಳು ತನಗೆ ತಲುಪುತ್ತಿದ್ದು, ಇದು ಸರಿಯಲ್ಲ ಎಂದು ಹೇಳಿದ್ದರು.