Sunday, April 28, 2024

ಸತ್ಯ | ನ್ಯಾಯ |ಧರ್ಮ

ಮಲೆನಾಡಲ್ಲಿ ಮತ್ತೆ ಶುರುವಾಯ್ತು ಮಂಗನ ಕಾಯಿಲೆ ; KFD ಅಷ್ಟು ಮಾರಕವಾಗಿದ್ದೇಕೆ?

ಮಳೆಗಾಲ ಕಳೆದು ಬೇಸಿಗೆ ಶುರು ಆಗುತ್ತಿದ್ದಂತೆ ಮಲೆನಾಡಲ್ಲಿ, ಅದರಲ್ಲೂ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ‘ಮಂಗನ ಕಾಯಿಲೆ’ ಎನ್ನುವ ಭಯಾನಕ ಸೋಂಕು ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಂಗನ ಕಾಯಿಲೆ ಈಗ ಮಲೆನಾಡಿಗರನ್ನು ಆತಂಕಕ್ಕೆ ದೂಡಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶೇಡ್ಗಾರ್ ನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು ತಾಲ್ಲೂಕು ಆರೋಗ್ಯಾಧಿಕಾರಿಗಳು ಕಾಡಂಚಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಕರೆ ನೀಡಿದ್ದಾರೆ. ಶೇಡ್ಗಾರ್ ಗ್ರಾಮದ 53 ವರ್ಷದ ಮಹಿಳೆಯೊಬ್ಬರ RT PCR ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದಿರುವ ಮಹಿಳೆಯ ಆರೋಗ್ಯ ಸಧ್ಯಕ್ಕೆ ಸ್ಥಿರವಾಗಿದೆ. ಇದು ಈ ವರ್ಷದ ಮೊದಲ ಪ್ರಕರಣ ಎಂದು ಆರೋಗ್ಯ ಇಲಾಖೆ ಪರಿಗಣಿಸಿದೆ.

ಮಂಗನ ಕಾಯಿಲೆಗೆ ಯಾಕಿಲ್ಲ ಮದ್ದು?
ಕೋವಿಡ್‌-19ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿಯಂತ್ರಣಕ್ಕೆ ಕ್ರಮ ಕೈಗೊಂಡದ್ದು ಎಲ್ಲರಿಗೂ ಗೊತ್ತೇ ಇರುವಂತದ್ದು. ಆದರೆ ಆರೂವರೆ ದಶಕಗಳಿಂದ ರಾಜ್ಯದ ಅರಣ್ಯ ವಾಸಿಗಳಿಗೆ ನರಕ ತೋರಿಸುತ್ತಿರುವ ಮಂಗನ ಕಾಯಿಲೆಗೆ ಸರ್ಕಾರ ಓಬಿರಾಯನ ಕಾಲದ ಪದ್ಧತಿಯನ್ನೇ ನೆಚ್ಚಿಕೊಂಡು ಕುಳಿತಿದೆ.

ಸ್ಥಳೀಯವಾಗಿ ಮಂಗನ ಕಾಯಿಲೆ ಎಂದು ಕರೆಸಿಕೊಳ್ಳುವ ಕ್ಯಾಸನೂರು ಅರಣ್ಯ ಕಾಯಿಲೆ (Kyasanuru Forest Decease) (ಕೆಎಫ್‌ಡಿ) ಪ್ರತಿ ವರ್ಷ ಒಂದಷ್ಟು ಜೀವ ಹಾನಿ ಮಾಡುತ್ತಲೇ ಬಂದಿದೆ. ಕೋವಿಡ್ ನಷ್ಟು ವ್ಯಾಪ್ತಿ ವಿಸ್ತರಿಸಿಲ್ಲ ಎಂಬುದನ್ನು ಹೊರತುಪಡಿಸಿ, ಒಮ್ಮೆ ಈ ಸೋಂಕು ಹರಡಿದರೆ ಕೋವಿಡ್ ಗಿಂತ ಹೆಚ್ಚು ದುಷ್ಪರಿಣಾಮ ಬೀರಬಲ್ಲದು. ಇದಕ್ಕೆ ಸಾಕ್ಷಿಯಾಗಿ ಮಲೆನಾಡು ಭಾಗದಲ್ಲಿ ಈ ವರೆಗೂ ಹಲವಷ್ಟು ಸಾವುಗಳು ಇದರಿಂದ ಸಂಭವಿಸಿದೆ.

ಇಷ್ಟಾಗಿಯೂ ಈ ಕಾಯಿಲೆ ಮೇಲೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕಳೆದ 35 ವರ್ಷದಿಂದ ಒಂದೇ ಒಂದು ಯಶಸ್ವಿ ಸಂಶೋಧನೆ ನಡೆದಿಲ್ಲ. ಕಾಯಿಲೆಗೆ ಕೊಡಲಾಗುತ್ತಿರುವ ಕಿಲ್ಡ್‌ ವ್ಯಾಕ್ಸಿನ್‌ನಲ್ಲಿ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಒಂದು ವರ್ಷಕ್ಕಿಂತ ಕಡಿಮೆ. ಇದರ ಜೊತೆಗೆ ಈ ವ್ಯಾಕ್ಸಿನ್ ನಿಂದ ದುಷ್ಪರಿಣಾಮಗಳೇ ಹೊರತು, ಸೋಂಕು ತಗುಲದಂತೆ, ಕಾಯಿಲೆ ಬಂದರೂ ವಾಸಿಯಾಗದಂತೆ ಕಾಪಾಡುವ ಗುಣ ತೀರಾ ಕಡಿಮೆ ಎನ್ನಬಹುದು.

ಕೇವಲ ಮಲೆನಾಡಿಗಷ್ಟೇ ಸೀಮಿತವಾಗಿರುವ ಈ ಕಾಯಿಲೆಗೆ ವ್ಯಾಪ್ತಿ ತೀರಾ ಚಿಕ್ಕದು. ಬಹುಶಃ ಈ ಕಾರಣಕ್ಕಾಗಿಯೇ ಖಾಸಗಿ ವಲಯದಲ್ಲೂ ಸಹ ಮಂಗನ ಕಾಯಿಲೆ ತಡೆಗಟ್ಟಲು ಯಶಸ್ವಿ ಔಷಧಿ ಕಂಡು ಹಿಡಿಯಲು ಈ ವರೆಗೂ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಗಾಗಲೇ ಇರುವ ವ್ಯಾಕ್ಸಿನ್ ಕೂಡಾ ನೂರಕ್ಕೆ ನೂರರಷ್ಟು ಗುಣಪಡಿಸುವ ಗುಣವನ್ನು ಹೊಂದಿಲ್ಲ. ಹೀಗಾಗಿ ಒಮ್ಮೆ ವ್ಯಾಕ್ಸಿನ್ ತಗೆದುಕೊಂಡವರಿಗೂ ಮತ್ತೆ ಮತ್ತೆ ಈ ಕಾಯಿಲೆ ಕಾಣಿಸಿಕೊಂಡ ಉದಾಹರಣೆ ಬಹಳಷ್ಟಿದೆ.

ಮಳೆಗಾಲ ಕಳೆದು ಬೇಸಿಗೆ ಶುರುವಾಗುವ ಹಂತದಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ, ಮತ್ತೆ ಮಳೆ ಶುರುವಾಗುವ ಹಂತದಲ್ಲಿ ಕಡಿಮೆಯಾಗುತ್ತದೆ. ಸೀಮಿತ ಅವಧಿ ಮತ್ತು ಸೀಮಿತ ವ್ಯಾಪ್ತಿಯ ಕಾರಣಕ್ಕೆ ಇದರ ಪರಿಣಾಮ ಇರುವುದೂ ಕೂಡಾ ಸರ್ಕಾರಿ ಹಾಗೂ ಖಾಸಗಿ ವಲಯದ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಈ ಖಾಯಿಲೆ ಮೊದಲ ಬಾರಿಗೆ ಕಂಡುಬಂದ ಹಿನ್ನೆಲೆಯಲ್ಲಿ ಇದಕ್ಕೆ ‘ಕ್ಯಾಸನೂರು ಅರಣ್ಯ ಕಾಯಿಲೆ’ (KFD) ಎಂದು ಕರೆಯಲಾಗುತ್ತಿದೆ. ಮೇಲೆ ಸೂಚಿಸಿದಂತೆ ಬೇಸಿಗೆ ಸಂದರ್ಭದಲ್ಲೇ 99% ಕಾಣಿಸಿಕೊಳ್ಳುವ ಈ ಕಾಯಿಲೆ ಈ ಬಾರಿ ಮಳೆ ಕಡಿಮೆ ಇರುವ ಕಾರಣಕ್ಕೆ ಹೆಚ್ಚು ಉಲ್ಬಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಧ್ಯಕ್ಕಂತೂ ಕಾಯಿಲೆ ಹರಡದಂತೆ ತಡೆಯುವುದು ಕಷ್ಟ. ಆದರೆ ಬಂದ ಕಾಯಿಲೆಗೆ ಸರ್ಕಾರ ಪ್ರಾಥಮಿಕ ಹಂತದಲ್ಲೇ ಇದರ ಬಗ್ಗೆ ಗಮನ ಹರಿಸಿದರೆ ಕಾಯಿಲೆ ಉಲ್ಬಣಿಸದಂತೆ, ಮಾರಣಾಂತಿಕ ಪರಿಣಾಮ ಆಗದಂತೆ ತಡೆಗಟ್ಟಬಹುದು. ಈ ಹಂತದಲ್ಲೇ ಸರ್ಕಾರ ಎಚ್ಚೆತ್ತುಕೊಂಡರೆ ಒಂದಷ್ಟು ಜೀವ ಉಳಿಸಬಹುದು.

Related Articles

ಇತ್ತೀಚಿನ ಸುದ್ದಿಗಳು