ಬಿಜೆಪಿ ಹೈಕಮಾಂಡ್ ನಾಯಕರು ಬೆಂಗಳೂರು ಗ್ರಾಮಾಂತರದಿಂದಲೇ ಚುನಾವಣಾ ಪ್ರಚಾರ ಆರಂಭಿಸುವ ಸುದ್ದಿಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್, ಮೋರ್ ಸ್ಟ್ರಾಂಗ್ ಮೋರ್ ಪವರ್ ಎಂದು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಹೆಚ್ಚಿನ ಅಭ್ಯರ್ಥಿಗಳು ರಾಜ್ಯಾದ್ಯಂತ ಬಿರುಸಿನ ಪ್ರಚಾರಕ್ಕೆ ಇಳಿದಿರುವಾಗ, ಮೈತ್ರಿ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಓಟಕ್ಕೆ ಯಾವ ಬ್ರೇಕ್ ಕೂಡಾ ಹಾಕಲಾರರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಲೇಬೇಕು ಎಂಬ ಪಣ ತೊಟ್ಟು, ಅಮಿತ್ ಷಾ ಅವರನ್ನು ಗ್ರಾಮಾಂತರದಿಂದ ಪ್ರಚಾರ ಶುರು ಮಾಡುವ ತಂತ್ರಗಾರಿಕೆ ಹಿಂದೆ ಈಗ ಡಿ.ಕೆ.ಶಿವಕುಮಾರ್ ಮತ್ತಷ್ಟು ಪ್ರತಿತಂತ್ರಕ್ಕೆ ಮುಂದಾಗಿದ್ದಾರೆ.
ಹೆಚ್ಡಿ ದೇವೇಗೌಡ ಅವರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್ಡಿ ಕುಮಾರಸ್ವಾಮಿ ಅವರನ್ನ ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನೂ ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನ ಎದುರಿಸುತ್ತೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಕೋವಿಡ್ ಸಂದರ್ಭದಲ್ಲಿ ಹೆಣ ಹೊತ್ತವರು, ಮಣ್ಣು ಮಾಡಿದವರು ಯಾರು ಇರಲಿಲ್ಲ. ಈಗ ಮಾತಾಡುವವರು ಕೋವಿಡ್ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? ಆಹಾರದ ಕಿಟ್, ಔಷದಿ ಕೊಡುವಾಗ ಯಾರು ಇರಲಿಲ್ಲ. ಆಗ ಕ್ಷೇತ್ರದಲ್ಲಿ ಇದ್ದದ್ದು ಕಾಂಗ್ರೆಸ್ ಮತ್ತು ಡಿಕೆ ಸುರೇಶ್ ಮಾತ್ರ ಎಂದಿದ್ದಾರೆ.