ಮುಸ್ಲಿಂ ವ್ಯಕ್ತಿಯ ಗುಂಪು ಹತ್ಯೆ ಪ್ರಕರಣ: 14 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಧ್ಯಪ್ರದೇಶ ಕೋರ್ಟ್ ಐತಿಹಾಸಿಕ ತೀರ್ಪು!

ನರ್ಮದಾಪುರಂ: ಗೋವುಗಳ ಸಾಗಣೆ ಆರೋಪದ ಮೇಲೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರನ್ನು ಗುಂಪು ಹತ್ಯೆ (ಮಾಬ್ ಲಿಂಚಿಂಗ್) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ನ್ಯಾಯಾಲಯವು ಎಲ್ಲಾ ಹದಿನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಮಹಾರಾಷ್ಟ್ರದ ಅಮರಾವತಿ ನಿವಾಸಿಯಾದ ನಜೀರ್ ಅಹ್ಮದ್ ಎಂಬುವವರನ್ನು ಕಳೆದ 2022 ರ ಆಗಸ್ಟ್ 3 ರಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಲೋನಿ ಮಾಲ್ವಾದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ಎಲ್ಲಾ 14 ಜನ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದಾರೆ.

ಅಪರಾಧಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ದಂಗೆ ಎಬ್ಬಿಸುವುದು ಮತ್ತು ಕಾನೂನುಬಾಹಿರವಾಗಿ ನಿರ್ಬಂಧಿಸುವುದು ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ.

2022 ರ ಆಗಸ್ಟ್ 3 ರಂದು ನಡೆದಿದ್ದೇನು? ಪ್ರಾಸಿಕ್ಯೂಷನ್ ವಿವರಗಳ ಪ್ರಕಾರ, ಈ ಘಟನೆಯು ಸಿಲೋನಿ ಮಾಲ್ವಾದ ಬರಖಾಡ್ ಗ್ರಾಮದ ಸಮೀಪ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಡೆದಿತ್ತು. ಮಹಾರಾಷ್ಟ್ರದಿಂದ ಜಾನುವಾರುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದನ್ನು ಜನರ ಗುಂಪೊಂದು ತಡೆದು ನಿಲ್ಲಿಸಿತ್ತು. ಟ್ರಕ್‌ನಲ್ಲಿ ಕಾನೂನುಬಾಹಿರವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ಶಂಕಿಸಿದ ಉದ್ರಿಕ್ತ ಗುಂಪು, ಟ್ರಕ್ ಚಾಲಕ ಮತ್ತು ಅದರಲ್ಲಿದ್ದ ಇತರ ಇಬ್ಬರು ಸಿಬ್ಬಂದಿಯ ಮೇಲೆ ಭೀಕರವಾಗಿ ಮುಗಿಬಿದ್ದಿತ್ತು.

ಈ ಹಿಂಸಾತ್ಮಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಜೀರ್ ಅಹ್ಮದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇನ್ನು ವಾಹನದಲ್ಲಿದ್ದ ಇತರ ಇಬ್ಬರು ಅದೃಷ್ಟವಶಾತ್ ಬದುಕುಳಿದಿದ್ದರು. ಈ ಘಟನೆಯ ನಂತರ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಯಾವುದೇ ಪ್ರಶ್ನೆ ಕೇಳದೆ ಮುಗಿಬಿದ್ದಿದ್ದ 60 ಜನರ ಗುಂಪು: ಈ ಭೀಕರ ದಾಳಿಯಿಂದ ಪವಾಡಸದೃಶವಾಗಿ ಬದುಕುಳಿದಿದ್ದ ಟ್ರಕ್ ಚಾಲಕ ಶೇಖ್ ಲಾಲಾ, ತನಿಖೆಯ ವೇಳೆ ಪೊಲೀಸರ ಮುಂದೆ ಆ ಕರಾಳ ರಾತ್ರಿಯ ವಿವರಗಳನ್ನು ಬಿಚ್ಚಿಟ್ಟಿದ್ದರು. ಸುಮಾರು 50 ರಿಂದ 60 ಜನರಿದ್ದ ದೊಡ್ಡ ಗುಂಪೊಂದು ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಲಾಗಿ ಬಂದು ತಮ್ಮ ವಾಹನವನ್ನು ತಡೆದು ನಿಲ್ಲಿಸಿತು ಮತ್ತು ಯಾವುದೇ ಪ್ರಶ್ನೆಗಳನ್ನು ಕೇಳದೆ ತಕ್ಷಣವೇ ಕೋಲು ಹಾಗೂ ಕಬ್ಬಿಣದ ರಾಡ್‌ಗಳಿಂದ ತಮ್ಮ ಮೇಲೆ ಮನಬಂದಂತೆ ಹಲ್ಲೆ ನಡೆಸಲು ಆರಂಭಿಸಿತು ಎಂದು ಅವರು ಹೇಳಿದ್ದರು.

ತಾವು ಪ್ರಜ್ಞೆ ತಪ್ಪಿ ಬೀಳುವವರೆಗೂ ಆ ಗುಂಪು ಭೀಕರವಾಗಿ ಹೊಡೆಯುತ್ತಲೇ ಇತ್ತು ಎಂದು ಅವರು ತಿಳಿಸಿದ್ದರು. ಆ ಸಮಯದಲ್ಲಿ ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅದರಲ್ಲಿ ಗುಂಪು ಘೋಷಣೆಗಳನ್ನು ಕೂಗುತ್ತಾ ಸಂತ್ರಸ್ತರನ್ನು ಹಿಂಸಾತ್ಮಕವಾಗಿ ಹೊಡೆಯುತ್ತಿರುವುದು ಕಂಡುಬಂದಿತ್ತು. ಸ್ಥಳೀಯ ಕೆಲವು ನಾಗರಿಕರು ಮಧ್ಯಪ್ರವೇಶಿಸಿ ತಡೆದಿದ್ದರಿಂದಲೇ ಉಳಿದ ಇಬ್ಬರ ಜೀವ ಉಳಿದಿತ್ತು ಎಂದು ವರದಿಯಾಗಿದೆ.

ತೀರ್ಪಿನ ಬೆನ್ನಲ್ಲೇ ಕೋರ್ಟ್ ಆವರಣದಲ್ಲಿ ಭಾರಿ ಹೈಡ್ರಾಮಾ: ನ್ಯಾಯಾಲಯವು ಹದಿನಾಲ್ಕು ಜನರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕೋರ್ಟ್ ಆವರಣದ ಹೊರಗೆ ಅತ್ಯಂತ ಉದ್ವಿಗ್ನ ಮತ್ತು ಕಣ್ಣೀರಿನ ದೃಶ್ಯಗಳು ಕಂಡುಬಂದವು. ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಪೊಲೀಸರು ಜೈಲಿಗೆ ಕರೆದೊಯ್ಯಲು ವಾಹನ ಹತ್ತಿಸುತ್ತಿದ್ದಾಗ, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ಒಟ್ಟಾಗಿ ಕೋರ್ಟ್ ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.

ಕೆಲವು ಮಹಿಳೆಯರು ಮತ್ತು ಆಪ್ತರು ಪೊಲೀಸರ ವಾಹನವನ್ನು ತಡೆಯಲು ಅದರ ಮುಂದೆಯೇ ರಸ್ತೆಯಲ್ಲಿ ಮಲಗಿಕೊಂಡರು. ಈ ವೇಳೆ ಪೊಲೀಸರು ಮತ್ತು ಅಪರಾಧಿಗಳ ಕುಟುಂಬ ಸದಸ್ಯರ ನಡುವೆ ಭಾರಿ ತಳ್ಳಾಟ ಮತ್ತು ಜಟಾಪಟಿ ನಡೆಯಿತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು, ಬಿಗಿ ಭದ್ರತೆಯ ನಡುವೆಯೇ ಎಲ್ಲಾ 14 ಜನ ಅಪರಾಧಿಗಳನ್ನು ಸೆಂಟ್ರಲ್ ಜೈಲಿಗೆ ರವಾನಿಸಿದರು.

ನ್ಯಾಯಾಲಯದ ಈ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಪರಾಧಿಗಳ ಕುಟುಂಬಸ್ಥರು, ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ, ಅವರು ಕೇವಲ ಗೋವುಗಳನ್ನು ರಕ್ಷಿಸಲು ಅಲ್ಲಿಗೆ ಹೋಗಿದ್ದರು, ಆದರೆ ಇಂದು ಅವರಿಗೇ ಕಠಿಣ ಶಿಕ್ಷೆಯಾಗಿದೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ ನ್ಯಾಯಾಲಯವು ಕಳೆದ ನಾಲ್ಕು ವರ್ಷಗಳ ಕಾಲ ನಡೆದ ಕಾನೂನು ಪ್ರಕ್ರಿಯೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಈ ತೀರ್ಪನ್ನು ನೀಡಿದೆ.

ಸದ್ಯ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋರ್ಟ್ ಆವರಣ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು