ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಡೆಯಿಂದ ಹೈದರಾಬಾದ್‌ನಿಂದ ಸಂಸದರಾಗಿ ಪುನರಾಯ್ಕೆಯಾದ ಅಸಾದುದ್ದೀನ್ ಓವೈಸಿ ಅವರು ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸುವುದರ ಜೊತೆಗೆ ತಮ್ಮ ಪ್ರಮಾಣವಚನದ ಕೊನೆಯಲ್ಲಿ “ಜೈ ಪ್ಯಾಲೆಸ್ತೀನ್” ಎನ್ನುವ ಘೋಷಣೆ ಕೂಗಿ ಬಿಜೆಪಿ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ 18ನೇ ಲೋಕಸಭೆಯಲ್ಲಿ “ಜೈ ಪ್ಯಾಲೆಸ್ತೀನ್” ಘೋಷಣೆಯೊಂದಿಗೆ ತಮ್ಮ ಪ್ರಮಾಣ ವಚನವನ್ನು ಮುಕ್ತಾಯಗೊಳಿಸಿದರು.
ಅದಕ್ಕೂ ಮೊದಲು ಸ್ಪೀಕರ್ ರಾಧಾ ಮೋಹನ್ ಸಿಂಗ್ ಅವರು ಓವೈಸಿ ಅವರನ್ನ ಪ್ರಮಾಣವಚನಕ್ಕೆ ಕರೆದಾಗ ಆಡಳಿತಾರೂಢ ಬಿಜೆಪಿ ಸಂಸದರು “ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್” ಎನ್ನುವ ಘೋಷಣೆ ಕೂಗುವ ಮೂಲಕ ತಮ್ಮ ಎಂದಿನ ಶೈಲಿಯಂತೆ ಕೆಣಕುವ ಪ್ರಯತ್ನ ನಡೆಸಿದರು. ಆದರೆ ಎಲ್ಲಿಯೂ ವಿಚಲಿತರಾಗದ ಸಂಸದ ಅಸಾದುದ್ದೀನ್ ಓವೈಸಿಯವರು ನೇರವಾಗಿ ಸ್ಪೀಕರ್ ಪಕ್ಕದಲ್ಲೆ ಉರ್ದುವಿನಲ್ಲಿ ಅಲ್ಲಾಹುವಿನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಪುನರಾಯ್ಕೆಯಾದ ಓವೈಸಿ ಅವರು ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ‘ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂಬ ಘೋಷಣೆಗಳೊಂದಿಗೆ ಅದನ್ನು ಮುಕ್ತಾಯಗೊಳಿಸಿದರು.
“ಜೈ ಪ್ಯಾಲೆಸ್ತೀನ್” ಎಂಬ ಅನಿರೀಕ್ಷಿತ ಸೇರ್ಪಡೆ ತಕ್ಷಣವೇ ಶೋಭಾ ಕರಂದ್ಲಾಜೆ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರಿಂದ ಆಕ್ಷೇಪಣೆಗೆ ಒಳಗಾಯಿತು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಧಾ ಮೋಹನ್ ಸಿಂಗ್ ಅವರು ವಿವಾದಾತ್ಮಕ ಘೋಷಣೆಯನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕುವುದಾಗಿ ಘೋಷಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಭಾಷಣ ಎಲ್ಲೆಡೆ ವೈರಲ್ ಆಗಿತ್ತು.
ರಾಧಾ ಮೋಹನ್ ಸಿಂಗ್ ಭರವಸೆ ನೀಡಿದ ಹೊರತಾಗಿಯೂ, ಬಿಜೆಪಿ ಸಂಸದರು ಸ್ವಲ್ಪ ಸಮಯದವರೆಗೆ ಪ್ರತಿಭಟನೆಯನ್ನು ಮುಂದುವರೆಸಿದರು.
ಗದ್ದಲಕ್ಕೆ ಪ್ರತಿಕ್ರಿಯೆಯಾಗಿ, ಓವೈಸಿ ತಮ್ಮ ಪದಗಳ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರು ಎತ್ತಿರುವ ಆಕ್ಷೇಪಣೆಗಳಿಗೆ ಸಂವಿಧಾನಾತ್ಮಕವಾಗಿ ಆಧಾರ ತೋರಿಸಲಿ ಎಂದು ಸವಾಲು ಎಸೆದಿದ್ದಾರೆ.
“ಇತರ ಸದಸ್ಯರೂ ವಿಭಿನ್ನವಾಗಿ ಹೇಳುತ್ತಿದ್ದಾರೆ… ನಾನು ‘ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂದು ಹೇಳಿದೆ. ವಿರೋಧಿಸುವವರು ಅದು ಹೇಗೆ ತಪ್ಪಾಗಿದೆ ಎಂದು ಸಂವಿಧಾನದ ನಿಬಂಧನೆಗಳ ಆಧಾರದಲ್ಲಿ ನನಗೆ ತಿಳಿಸಿ.. ಇತರರು ಹೇಳಿದ್ದನ್ನು ನೀವು ಕೇಳಬೇಕು ಎಂಬುದು ಹೇರಿಕೆಯ ಮನಸ್ಥಿತಿ. ಮಹಾತ್ಮ ಗಾಂಧೀಜಿಯವರು ಪ್ಯಾಲೆಸ್ತೀನ್ ಬಗ್ಗೆ ಏನು ಹೇಳಿದ್ದಾರೋ ಅದನ್ನು ಓದಿರಿ ಎಂದು ಓವೈಸಿ ಹೇಳಿದ್ದಾರೆ.