ಹಾಸನ : ಹಾಸನ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಎಂ.ಪಟೇಲ್ ಅವರಿಗೆ ಎಐಸಿಸಿ ದೊಡ್ಡ ಜವಾಬ್ದಾರಿ ನೀಡಿದೆ.
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಶ್ರೇಯಸ್ ಅವರನ್ನು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಸಂಘಟನ್ ಶ್ರೀಜನ್ ಅಭಿಯಾನದ ಅಂಗವಾಗಿ ಓಡಿಶಾ ರಾಜ್ಯದ ಕಾಂಗ್ರೆಸ್ ಘಟಕದ ವೀಕ್ಷಕರನ್ನಾಗಿ ನೇಮಕ ಮಾಡಿದೆ.
ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಯುವ ಸಂಸದರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿರುವುದಕ್ಕೆ ಹಾಸನ ಜಿಲ್ಲೆಗೆ ಹೆಮ್ಮೆ ಮತ್ತು ಸಂತಸದ ವಿಷಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹರ್ಷ ವ್ಯಕ್ತಪಡಿಸಿದೆ.
ಈ ಮಹತ್ವದ ಜವಾಬ್ದಾರಿ ಸಂಸದರ ಪಕ್ಷ ನಿಷ್ಠೆ, ಪರಿಶ್ರಮ ಹಾಗೂ ಸಂಘಟನೆಗೆ ನೀಡುತ್ತಿರುವ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಿಲ್ಲೆಯ ಹಲವು ಮುಖಂಡರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.