ಹಾಸನ : ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ಶ್ರೇಯಸ್ ಪಟೇಲ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಂಚಾರ ದಟ್ಟಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ, ಎನ್.ಆರ್. ವೃತ್ತದ ಬಲಭಾಗದಲ್ಲಿ ರೂಪಿಸಲಾಗಿರುವ ಸರ್ವಿಸ್ ರಸ್ತೆಯು ಅವೈಜ್ಞಾನಿಕ ವಿನ್ಯಾಸದಿಂದ ಕೂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಭಾರಿ ಸಂಕಷ್ಟ ತಂದೊಡ್ಡಿದೆ. ಈ ಸಮಸ್ಯೆಯನ್ನು ತುರ್ತಾಗಿ ಸರಿಪಡಿಸಲು ಜಂಟಿ ಸರ್ವೆ ನಡೆಸಿ, ಒಂದು ವಾರದೊಳಗೆ ವೈಜ್ಞಾನಿಕ ಪರಿಹಾರ ಕ್ರಮಗಳೊಂದಿಗೆ ವರದಿ ಸಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಅಧಿಕಾರಿಗಳು ಈ ಮೊದಲು ಜೂನ್ 2026ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ ಸದ್ಯದ ಕಾಮಗಾರಿ ಗತಿಯನ್ನು ಗಮನಿಸಿದರೆ ನಿಗದಿತ ಗಡುವಿನೊಳಗೆ ಕೆಲಸ ಮುಗಿಯುವುದು ಅನುಮಾನವಾಗಿದೆ. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಜೂನ್‌ನಲ್ಲಿ ಸಾಧ್ಯವಾಗದಿದ್ದರೂ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಯಾವುದೇ ಕಾರಣಕ್ಕೂ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಗೆ ಅನುದಾನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಸಂಸದ, ರಾಜ್ಯ ಸರ್ಕಾರವು ತನ್ನ ಪಾಲಿನ 24 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ ಬಳಿಕ ಕೆಲಸವು ವೇಗ ಪಡೆದುಕೊಂಡಿದೆ. ಕೇವಲ ಮೇಲ್ಸೇತುವೆ ನಿರ್ಮಾಣ ಮಾಡುವುದಷ್ಟೇ ಉದ್ದೇಶವಲ್ಲ, ಈ ಪ್ರಕ್ರಿಯೆಯಲ್ಲಿ ಸುತ್ತಲಿನ ನಿವಾಸಿಗಳು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೂ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಭರವಸೆ ನೀಡಿದರು.
