ಹಾಸನ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (ಭಾರತ ಸರ್ಕಾರ) ಹಾಗೂ ಪ್ರಾಂತೀಯ ನಿರ್ದೇಶನಾಲಯ, ಬೆಂಗಳೂರು ಇವರ ಆಶ್ರಯದಲ್ಲಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಜನವರಿ 5ರಿಂದ 11ರವರೆಗೆ ಆಯೋಜಿಸಲಾಗಿದೆ ಎಂದು ಹಿಮ್ಸ್ ನಿರ್ದೇಶಕ ಡಾ. ಬಿ. ರಾಜಣ್ಣ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಈ ಶಿಬಿರವನ್ನು ಎರಡನೇ ಬಾರಿ ಹಾಸನದಲ್ಲಿ ಆಯೋಜಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಜಾತಿ, ಧರ್ಮ ಹಾಗೂ ಪ್ರಾಂತೀಯ ಭೇದಭಾವಗಳನ್ನು ನಿವಾರಿಸಿ ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಶಿಬಿರದ ಉದ್ದೇಶವಾಗಿದೆ. ಶಿಬಿರದಲ್ಲಿ ದೇಶದ 10 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ 15 ಕಾಲೇಜುಗಳಿಂದ ಆಯ್ಕೆಯಾದ 200 ಶಿಬಿರಾರ್ಥಿಗಳು ಹಾಗೂ 10 ಶಿಬಿರಾಧಿಕಾರಿಗಳು ಭಾಗವಹಿಸಲಿದ್ದಾರೆ.ಶಿಬಿರಾರ್ಥಿಗಳಿಗೆ ಹಿಮ್ಸ್ ಆವರಣದಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಸಮಾರಂಭವು ಜನವರಿ 5ರಂದು ನಡೆಯಲಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭವು ಜನವರಿ 11ರಂದು ನಡೆಯಲಿದೆ. ಶಿಬಿರದ ಅವಧಿಯಲ್ಲಿ ಯೋಗಾಭ್ಯಾಸ, ತರಬೇತಿ ಕಾರ್ಯಕ್ರಮಗಳು, ಶ್ರಮದಾನ, ಗ್ರಾಮ ಮತ್ತು ಐತಿಹಾಸಿಕ ಸ್ಥಳಗಳ ಭೇಟಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿಮ್ಸ್ ಆಡಳಿತ ಮಂಡಳಿಯ ಡಾ. ರಾಘವೇಂದ್ರ, ಡಾ. ಪ್ರಕಾಶ್, ಶಿಬಿರಾಧಿಕಾರಿ ನಿಚಿತ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
