ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಶುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಯಾತ್ರಿಕರಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 12 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಹದರ್ಲಾ ಅಸುನ್ ಧನಿವಾರಿ ಎಂಬ ಪ್ರದೇಶದಲ್ಲಿ ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ. ಯಾಗ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಒಂದು, ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಮತ್ತೊಂದು ಟ್ರಕ್‌ಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ 12 ಜನ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತಕ್ಕೊಳಗಾದ ಟ್ರಕ್‌ನಲ್ಲಿ ಬರೋಬ್ಬರಿ 100 ಕ್ಕೂ ಹೆಚ್ಚು ಯಾಗ್ರಿಕರು ಪ್ರಯಾಣಿಸುತ್ತಿದ್ದರು. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಟ್ರಕ್‌ನೊಳಗೆ ಹಲವಾರು ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದರು.
ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಭಾರಿ ಹರಸಾಹಸ ಪಟ್ಟು ಟ್ರಕ್‌ನಲ್ಲಿದ್ದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭೀಕರ ಅಪಘಾತದಿಂದಾಗಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅತಿಯಾದ ವೇಗ ಮತ್ತು ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಅಂದಾಜಿಸಲಾಗಿದೆ.
ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಹೆದ್ದಾರಿ ಸುರಕ್ಷತೆಯ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಪಘಾತ ತಡೆಗೆ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
