ಹಾಸನ : ಪೆನ್ಷನ್ ಮೊಹಲ್ಲಾ ವ್ಯಾಪ್ತಿಯಲ್ಲಿ ನಡೆದಿರುವ ಗ್ಯಾಂಗ್ ರೇಪ್ ವಿರೋಧಿಸಿ, ಆರೋಪಿತರಿಗೆ ಗರಿಷ್ಟ ಪ್ರಮಾಣದ ಶಿಕ್ಷೆ ಹಾಗೂ ಸಂತ್ರಸ್ತೆಗೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಇದೆ ವೇಳೆ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅನ್‌ಷಾದ್ ಪಾಳ್ಯ ಮತ್ತು ಶಾಹಿರಾ ಮಾತನಾಡಿ, ಜಿಲ್ಲೆಯೇ ಬೆಚ್ಚಿ ಬೀಳಿಸುವಂತಹ ಪೈಶಾಚಿಕ ಕೃತ್ಯ ಕಳೆದ ಐದು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ನಗರದ ಪೆನ್ಷನ್‌ಮೊಹಲ್ಲಾ ವ್ಯಾಪ್ತಿಯಲ್ಲಿ ಬುದ್ದಿಮಾಂದ್ಯೆ ಸಹೋದರಿಯ ಮೇಲೆ ನಾಲ್ಕು ಜನ ದುರುಳರು ಸೇರಿ ಗುಂಪು ಅತ್ಯಾಚಾರ ಮಾಡಿರುತ್ತಾರೆ. ಈ ಘಟನೆಯಿಂದಾಗಿ ಇಡೀ ಸಮುದಾಯ ಇಂದು ಬಹಳ ನೋವಿನಿಂದ ಸಂತ್ರಸ್ತ ಕುಟುಂಬದ ಜೊತೆ ಇದ್ದೇವೆ ಎನ್ನುವ ಸಂದೇಶವನ್ನು ನೀಡುತ್ತಾ, ಈ ಪ್ರಕರಣವು ಪೊಲೀಸ್ ಇಲಾಖೆಯ ಗಮನಕ್ಕೆ ಬಂದ 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಿದ್ದು, ಪೋಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಅತ್ಯಾಚಾರದಂತಹ ಪ್ರಕರಣದಿಂದ ಇಡೀ ನಗರದ ಜನ ಸಾಮಾನ್ಯರು ಇದರಿಂದ ಬೆಚ್ಚಿಬಿದ್ದಿದಾರೆ. ಈ ಘಟನೆಗೆ ಕಾರಣರಾದ ನಾಲ್ಕು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಹಾಗೂ ಇಂತಹ ಘಟನೆಗಳಿಗೆ ಪೂರಕವಾಗಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಸಂಪೂರ್ಣವಾಗಿ ತಡೆಯುವಂತೆ ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಪ್ರಮುಖ ಒತ್ತಾಯಗಳೆಂದರೇ ಸಂತ್ರಸ್ತೆ ಕುಟುಂಬಕ್ಕೆ ಕನಿಷ್ಟ 25 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಬೇಕು.ಅತ್ಯಾಚಾರ ಪ್ರಕರಣದಲ್ಲಿ ಬಾಗಿಯಾಗಿರುವ ಆರೋಪಿತರಿಗೆ ಗರಿಷ್ಟ ಪ್ರಮಾಣದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಪ್ರಕರಣವನ್ನು ನಡೆಸಲು ವಿಶೇಷ ನ್ಯಾಯಾಲಯ ರಚಿಸಬೇಕು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರನ್ನು ಸರ್ಕಾರ ನೇಮಿಸಬೇಕು. ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯ ಹೆಚ್ವಿರುವ ಮೊಹಲ್ಲಾಗಳಲ್ಲಿ ವಿದ್ಯಾರ್ಥಿ – ಯುವಜನ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮಾದಕ ವಸ್ತುಗಳ ಮಾರಾಟದ ಹಾಗೂ ಸೇವನೆಯ ಪರಿಣಾಮಗಳ ಬಗ್ಗೆ ಚರ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸದಸ್ಯರಾದ ಸೈಯ್ಯದ್ ಯೂಸುಫ್, ಅಮೀರ್ ಜಾನ್, ಸೈಯ್ಯದ್ ಅನ್ಸರ್, ಫೈರೋಜ್ ಪಾಶ.ಇಮ್ರಾನ್ ಅರೇಹಳ್ಳಿ
ಮುಬಷೀರ್, ದರ್ಮೇಶ್, ಸಾಹಿರ ಬಾನು, ರೂಬಿ ವಾಹಿದ್ ರೂಪ ಹಾಸನ, ಸೂಫಿ ಇಬ್ರಾಹಿಂ, ಫರಿದ್, ನವೀದ್, ಅಕ್ರಂ ಪಾಷ, ಫಾಜಿಲ್, ಸತ್ತಾರ್, ಅರ್ಬಾಜ್, ಶಾಹಿರಾ, ರೂಬಿವಾಹಿದ್ ಇತರರು ಉಪಸ್ಥಿತರಿದ್ದರು