ಹಾಸನ : ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಶ್ರಮಿಸುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಸಾವಿರಾರು ಜನ ಆಶಾ ಕಾರ್ಯಕರ್ತೆಯರು ಎ.ಐ.ಯು.ಟಿ.ಯುಸಿ ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ 2ನೇ ದಿನವು ಪ್ರತಿಭಟನಾ ಧರಣಿ ಮುಂದುವರೆಸಿದರು. ಇದೆ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಹನುಮೇಶ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಎರಡನೇ ದಿನವು ಪ್ರತಿಭಟನಾ ಧರಣಿ ಮುಂದುವರೆದಿದ್ದು, ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಆಶಾ ಮೊದಲ ಕರೆ ಕೇಂದ್ರವಾಗಿದೆ. ಜನತೆಯ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ತನ್ನ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿರುವರು. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾದರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ನಮ್ಮ ಸರ್ಕಾರಗಳು ಇವರ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ ಎಂದರು. ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10,000 ಗಳ ಗೌರವಧನವನ್ನು ನೀಡಲಾಗುವುದು. ರೂ.10,000 ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ. 10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಕೂಡಲೇ ಸರ್ಕಾರದಿಂದ ಆದೇಶಿಸಬೇಕು ಎಂದು ಒತ್ತಾಯಿಸಿದರು.