Home ರಾಜ್ಯ ಕೊಡಗು ಮಡಿಕೇರಿಯ ಕುಂದಚೇರಿಯಲ್ಲಿ ನಿಗೂಢ ಸದ್ದು: ಗುಡ್ಡ ಕುಸಿಯುವ ಆತಂಕದಲ್ಲಿ ಎರಡು ಕುಟುಂಬಗಳ ಸ್ಥಳಾಂತರ

ಮಡಿಕೇರಿಯ ಕುಂದಚೇರಿಯಲ್ಲಿ ನಿಗೂಢ ಸದ್ದು: ಗುಡ್ಡ ಕುಸಿಯುವ ಆತಂಕದಲ್ಲಿ ಎರಡು ಕುಟುಂಬಗಳ ಸ್ಥಳಾಂತರ

0

ಮಡಿಕೇರಿ: ತಾಲೂಕಿನ ಕುಂದಚೇರಿ ಗ್ರಾಮದ ಪೂವಲಮಾನಿ ಎಸ್‌ಇ ಕಾಲೋನಿ ವ್ಯಾಪ್ತಿಯಲ್ಲಿ ಬೆಟ್ಟದ ಮೇಲ್ಭಾಗದ ಮಣ್ಣು ಹಾಗೂ ಸಣ್ಣ ಪ್ರಮಾಣದ ಕಲ್ಲುಗಳು ಕುಸಿದು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಟ್ಟದ ಕೆಳಭಾಗದಲ್ಲಿ ಸುಮಾರು 15 ಕುಟುಂಬಗಳು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆಯ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಮಣ್ಣು ಹಾಗೂ ಕಲ್ಲುಗಳು ಉರುಳಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ, ಕಂದಾಯ, ಅರಣ್ಯ ಇಲಾಖೆ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಟ್ಟದ ಪ್ರಸ್ತುತ ಸ್ಥಿತಿ, ಮಣ್ಣಿನ ಸಡಿಲತೆ ಹಾಗೂ ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಉಂಟಾಗಬಹುದಾದ ಅಪಾಯದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಬೆಟ್ಟದ ಕೆಳಭಾಗದಲ್ಲಿ ಅಪಾಯದಂಚಿನಲ್ಲಿದ್ದ ಎರಡು ಕುಟುಂಬಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಇದಲ್ಲದೆ, ಬೆಟ್ಟದ ಮೇಲ್ಭಾಗದಲ್ಲಿ ಮಣ್ಣು ಹಾಗೂ ಬಂಡೆಕಲ್ಲುಗಳು ಕುಸಿದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಬಂಡೆಗಳು ಉರುಳಿ ಕೆಳಭಾಗಕ್ಕೆ ಬರುವುದನ್ನು ತಡೆಯಲು ತಂತಿ ಬೇಲಿ ನಿರ್ಮಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಕುಂದಚೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಬೆಟ್ಟದ ಮೇಲ್ಭಾಗದಲ್ಲಿ ಮಣ್ಣು ಹಾಗೂ ಬಂಡೆಕಲ್ಲು ಕುಸಿದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೀರಾ ಅಪಾಯದಲ್ಲಿದ್ದ ಎರಡು ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಕಂದಾಯ ಪರಿವೀಕ್ಷಕ ಶಿವಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಲೆಕ್ಕಿಗ ಜನಾರ್ದನ, ಎನ್‌ಡಿಆರ್‌ಎಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy content of this page

Exit mobile version