ಕೊಡಗು : ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಕಕ್ಕಬ್ಬೆ (kakkabbe) ಗ್ರಾಮದ ವ್ಯಾಪ್ತಿಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ (kerala) ಮೂಲದ ಯುವತಿಯೊಬ್ಬರು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಕೇರಳದ ಶರಣ್ಯ ಜಿ.ಎಸ್. ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ.
ಶರಣ್ಯ ಅವರು ತಡಿಯಂಡಮೋಲ್ ಬೆಟ್ಟದ ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದಾರೆ. ಇವರು ಖಾಸಗಿ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಇವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವ ಕಾರಣ, ಹೋಂ ಸ್ಟೇ ಸಿಬ್ಬಂದಿ ಇವರ ಜೊತೆಗೆ ಇತರರನ್ನು ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.
ಶೋಧ ಕಾರ್ಯ ಚುರುಕು
ಯುವತಿ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸರು ಮತ್ತು ಅರಣ್ಯ ಇಲಾಖೆಯ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಶ್ವಾನ ದಳದ ಸಹಾಯವನ್ನೂ ಪಡೆಯಲಾಗುತ್ತಿದೆ.
ನಿನ್ನೆ ಸಂಜೆ ನಾನು ದಾರಿ ತಪ್ಪಿರುವುದಾಗಿ ಶರಣ್ಯ ಅವರು ತಮ್ಮ ಹೋಂ ಸ್ಟೇ ಮಾಲೀಕರಿಗೆ ಫೋನ್ ಮಾಡಿ ತಿಳಿಸಿದ್ದರು. ಆದರೆ, ಅದಾದ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ (ನಾಟ್ ರೀಚಬಲ್) ಆಗಿದೆ. ಶರಣ್ಯ ಅವರು ಒಂಬತ್ತು ಜನರ ತಂಡದೊಂದಿಗೆ ಚಾರಣಕ್ಕೆ ತೆರಳಿದ್ದರು. ಚಾರಣದ ವೇಳೆ ನಾಯಿಗಳ ಜೊತೆ ಆಟವಾಡುತ್ತಾ ತಂಡದಿಂದ ಹಿಂದೆ ಉಳಿದ ಇವರು, ನಂತರ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
