Home ಬೆಂಗಳೂರು ಪೋಕ್ಸೊ ಕಾಯ್ದೆ ಖಾಸಗಿ ಆಸ್ಪತ್ರೆಗಳಿಗೆ – ಹೊಸ ರೂಲ್ಸ್‌

ಪೋಕ್ಸೊ ಕಾಯ್ದೆ ಖಾಸಗಿ ಆಸ್ಪತ್ರೆಗಳಿಗೆ – ಹೊಸ ರೂಲ್ಸ್‌

ಬೆಂಗಳೂರು : ಪೋಕ್ಸೋ ಕಾಯ್ದೆಯಡಿ (POCSO Act) ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣಗಳ ಕುರಿತು ಆರೋಗ್ಯ ಇಲಾಖೆಯು ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇಂತಹ ಸೂಕ್ಷ್ಮ ಪ್ರಕರಣಗಳು ವರದಿಯಾದಾಗ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಆದೇಶ ನೀಡಲಾಗಿದ್ದು, ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಏನಿದೆ ಹೊಸ ಮರ್ಗಾಸೂಚಿಯಲ್ಲಿ?
ಹೊಸ ಮಾರ್ಗಸೂಚಿಯ ಪ್ರಕಾರ, ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನು ಆಸ್ಪತ್ರೆಗಳು ನಿಖರವಾಗಿ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಲಭ್ಯವಾಗುವ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಕಡ್ಡಾಯ. ಮುಖ್ಯವಾಗಿ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಬಾಲಕಿಯ ಗೌಪ್ಯತೆಯನ್ನು ಕಾಪಾಡುವುದು ಆಸ್ಪತ್ರೆಗಳ ಆದ್ಯ ಕರ್ತವ್ಯವಾಗಿದ್ದು, ತನಿಖಾಧಿಕಾರಿಗಳು ಮಾಹಿತಿ ಕೇಳಿದಾಗ ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿಯಮ ಪಾಲನೆಗೆ ಸೂಚನೆ
ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು ಮತ್ತು ಸಿಬ್ಬಂದಿಗೆ ಪೋಕ್ಸೋ ಕಾಯ್ದೆಯ ವಿಧಿ-ನಿಯಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಾಲ ಗರ್ಭಿಣಿ ಪ್ರಕರಣಗಳು ಕಂಡುಬಂದಾಗ ಅವುಗಳನ್ನು ಮುಚ್ಚಿಡದೆ ಕಡ್ಡಾಯವಾಗಿ ವರದಿ ಮಾಡಬೇಕು ಮತ್ತು ತನಿಖೆಗೆ ಪೂರಕವಾಗಿ ಸ್ಪಂದಿಸಬೇಕು. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಕಾನೂನು ಪ್ರಕ್ರಿಯೆ ನಡೆಯಲು ಈ ಮಾರ್ಗಸೂಚಿಗಳು ಸಹಕಾರಿಯಾಗಲಿವೆ.

You cannot copy content of this page

Exit mobile version