ಟೆಹ್ರಾನ್/ಹೊಸದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದ್ದು, ಮೂರು ದಿನಗಳಲ್ಲಿ ಎರಡನೇ ಬಾರಿಗೆ ಇರಾನ್ ಮೇಲೆ ಅಮೆರಿಕ ಸೇನೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಮಂಗಳವಾರ ರಾತ್ರಿ ಇರಾನ್‌ನ ಸಿರಿಕ್, ಖುಜೆಸ್ತಾನ್, ಖೇಶಮ್ ದ್ವೀಪ ಮತ್ತು ಬಂದರ್ ಅಬ್ಬಾಸ್ ಪ್ರದೇಶಗಳ ಮೇಲೆ ಅಮೆರಿಕ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದು, ಒಟ್ಟು 12 ಮಂದಿ ಸಾವನ್ನಪ್ಪಿ 68ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ತಿಳಿಸಿದೆ.
ಸಿರಿಕ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರ ಮೇಲೆ ಕ್ಷಿಪಣಿ ಬಿದ್ದ ಪರಿಣಾಮ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಮೃತಪಟ್ಟಿದ್ದು, 68 ಮಂದಿ ಗಾಯಗೊಂಡಿದ್ದಾರೆ. ಖುಜೆಸ್ತಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಏಳು ಮಂದಿ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ದಾಳಿ ನಡೆಸಲು ಯತ್ನಿಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ರೇಡಾರ್, ಸಂವಹನ ಕೇಂದ್ರಗಳು ಮತ್ತು ನೌಕಾ ನೆಲೆಗಳನ್ನು ಮಾತ್ರವೇ ತಾವು ಗುರಿಯಾಗಿಸಿಕೊಂಡಿದ್ದು, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಅಮೆರಿಕ ನೌಕಾಪಡೆ ಸಮರ್ಥಿಸಿಕೊಂಡಿದೆ.
ಈ ದಾಳಿಗೆ ಪ್ರತಿಯಾಗಿ ಇರಾನ್ ತಕ್ಷಣವೇ ಅಮೆರಿಕದ ವಿರುದ್ಧ ಪ್ರಚಂಡ ಪ್ರತೀಕಾರದ ದಾಳಿ ಆರಂಭಿಸಿದೆ. ಜೋರ್ಡಾನ್, ಬಹ್ರೇನ್, ಕುವೈತ್ ಹಾಗೂ ಯುಎಇನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡಜನ್‌ಗಟ್ಟಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ಇರಾನ್ ಘೋಷಿಸಿದೆ. ಯುಎಇಯ ಅಲ್ ದಫ್ರಾ ಮತ್ತು ಅಲ್ ಮಿನ್ಹಾದ್ ನೆಲೆಗಳಲ್ಲಿದ್ದ ಅಮೆರಿಕದ ರಾಡಾರ್ ವ್ಯವಸ್ಥೆಗಳು ಮತ್ತು ಸೇನಾ ಜಮಾವಣೆ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿದೆ.
ಆಕ್ರಮಣಕಾರರಿಗೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ ಹಾಗೂ ಈ ದುಸ್ಸಾಹಸಕ್ಕೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಐಆರ್‌ಜಿಸಿ ವಕ್ತಾರ ಹುಸೇನ್ ಮೊಹಬಿ ಮತ್ತು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿ ಮುಖ್ಯಸ್ಥ ಇಬ್ರಾಹಿಂ ಅಜಿಜಿ ಎಚ್ಚರಿಕೆ ನೀಡಿದ್ದಾರೆ.
