Home ಅಂಕಣ ನಾಗಮೋಹನ್ ದಾಸ್ ವರದಿ ಖಂಡಿತವಾಗಿ ಜಾರಿ ಆಗಬೇಕು.. ಆದರೆ…

ನಾಗಮೋಹನ್ ದಾಸ್ ವರದಿ ಖಂಡಿತವಾಗಿ ಜಾರಿ ಆಗಬೇಕು.. ಆದರೆ…

0

“ದೇವನೂರು ಮಹಾದೇವ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಇಬ್ಬರೂ ನಾಗಮೋಹನ್ ದಾಸ್ ವರದಿಯನ್ನು ಯತಾವತ್ತು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಈ ಮಾತನ್ನು ಇವರು ಹೃದಯದಿಂದ ಯೋಚಿಸದೇ ಮೆದುಳಿನಿಂದಲೂ ಯೋಚಿಸಬೇಕಿತ್ತು” ಬಿಆರ್ ಭಾಸ್ಕರ್ ಪ್ರಸಾದ್ ಬರಹದಲ್ಲಿ

ದೇವನೂರು ಮಹಾದೇವ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಈ ಇಬ್ಬರು ಹಿರಿಯರು, ನಾಗಮೋಹನ್ ದಾಸ್ ವರದಿಯನ್ನು ಯತಾವತ್ತು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಈ ಇಬ್ಬರೂ ಮಹನೀಯರ ಮಾತುಗಳನ್ನು ನಾನು ಓದಿದಾಗ ಮತ್ತು ಕೇಳಿಸಿಕೊಂಡಾಗ ನನಗೆ ಅನ್ನಿಸಿದ್ದು ಈ ಇಬ್ಬರೂ ಹೃದಯದಿಂದ ಯೋಚಿಸಿದ್ದಾರೆ ಮತ್ತು ದೇವನೂರರು ಒಳಮೀಸಲಾತಿ ಜಾರಿಯಾ ವಿಚಾರದಲ್ಲಿ ತಮ್ಮ ಮೇಲಿನ ಕಳಂಕವನ್ನು ಕಳೆದುಕೊಳ್ಳುವ ದಾವಂತದಲ್ಲಿದ್ದಾರೆಂದು ಸ್ಪಷ್ಟವಾಗಿ ಅರ್ಥವಾಯಿತು. ವರದಿ ಯತಾವತ್ತು ಜಾರಿಯ ವಿಚಾರದಲ್ಲಿ ಇವರಿಬ್ಬರೂ ಕೇವಲ ಹೃದಯದಿಂದ ಯೋಚಿಸದೇ, ಹೃದಯದ ಜೊತೆ ಮೆದುಳಿನಿಂದಲೂ ಯೋಚಿಸಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನಾಗಮೋಹನ್ ದಾಸ್ ವರದಿ ಖಂಡಿತವಾಗಿಯೂ ಯತಾವತ್ತು ಜಾರಿ ಆಗಲ್ಲ ಮತ್ತು ಹಾಗೆ ಯಾತಾವತ್ತು ಜಾರಿ ಆಗಲೂ ಬಾರದು.

ಹಾಗೊಂದು ವೇಳೆ ವರದಿಯು ಯಾತಾವತ್ತು ಜಾರಿ ಆದರೇ, ಜಾರಿಯಾದ ಕ್ಷಣದಿಂದಲೇ ಅನೇಕ ಕಗ್ಗಂಟುಗಳು ಶುರುವಾಗುತ್ತವೆ ಮತ್ತದು ಕೋರ್ಟುಗಳಲ್ಲಿ ಕೊಳೆಯಲಾರಂಭಿಸುತ್ತವೆ ಅಷ್ಟೇ.
ನಾಗಮೋಹನ್ ದಾಸ್ ಅವರ ವರದಿ ಅನೇಕ ಸತ್ಯಾಸತ್ಯತೆಗಳ ಜೊತೆಗೆ ಕೆಲವು ಲೋಪಗಳಿಂದಲೂ ಕೂಡಿರುವುದು ಸುಳ್ಳಲ್ಲ. ವರದಿಯಲ್ಲಿನ ಲೋಪಗಳ ಬಗ್ಗೆ ತಮ್ಮ ಪತ್ರದಲ್ಲಿ ಸ್ವತಃ ಒಪ್ಪಿಕೊಳ್ಳುವ ದೇವನೂರರು, ಆ ಲೋಪಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಸರಿಪಡಿಸಿಕೊಂಡರೆ ಸಾಕು ಎಂದು ಅದಕ್ಕಾಗಿ ಶಾಶ್ವತ ಆಯೋಗ ರಚನೆಯೆಂಬ ಅಂಗೈ ಚಂದ್ರನನ್ನು ತೋರಿಸಿ ಮಕ್ಕಳನ್ನು ರಮಿಸುವಂತ ಮಾತುಗಳ ಮೂಲಕ ಸದ್ಯಕ್ಕೀಗ ವರದಿಯು ಯತಾವತ್ತು ಜಾರಿ ಆಗಿಬಿಡಲಿ ಎಂದು ಅಭಿಪ್ರಾಯ ಪಡುತ್ತಾರೆ. ದೇವನೂರರ ಈ ಅಭಿಪ್ರಾಯ, ನಾನು ಆಗಲೇ ಹೇಳಿದಂತೆ ದೇವನೂರರು ಮೆದುಳಿನಿಂದ ಯೋಚಿಸದೆ ಕೇವಲ ಹೃದಯದಿಂದ ಯೋಚಿಸಿದ್ದಾರೆ ಮತ್ತು ತಾನು ಒಳಮಿಸಲಾತಿಯ ವಿರೋಧಿಯಾಗಿದ್ದೇನೆ ಎನ್ನುವ ತಮ್ಮ ಮೇಲಿನ ಕಳಂಕವನ್ನು ಕಳೆದುಕೊಳ್ಳುವ ದಾವಂತದಲ್ಲಿದ್ದು ಹೇಳಿದ್ದಾರೆಂದು ನನಗೆ ಅನ್ನಿಸುತ್ತದೆ. ಹೊಲೆಯ ಸಂಭಂದಿತ ಕೆಲವು ಜಾತಿಗಳನ್ನು ನಾಗಮೋಹನ್ ದಾಸ್ ಅವರು ಉದ್ದೇಶಪೂರ್ವಕವಾಗಿ ಹೊಲೆಯ ಸಂಭಂದಿತ ಜಾತಿಗಳ ಗುಂಪಿನಿಂದ ಬೇರ್ಪಡಿಸಿ ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸಿದ್ದಾರೆಂದು, ಮತ್ತು ಆ ಜಾತಿಗಳನ್ನು ಪುನಃ ನಮ್ಮ ಜಾತಿಯ ಗುಂಪಿನಲ್ಲೇ ಹಾಕಬೇಕು ಎನ್ನುವ ಹೊಲೆಯ ಸಮುದಾಯದ ಧ್ವನಿಯನ್ನೇ ನಾವು ಕೇಳಿಸಿಕೊಳ್ಳಲ್ಲ, ಪರಿಗಣಿಸಲ್ಲ, ವರದಿ ಯತಾವತ್ತು ಜಾರಿ ಆಗಿಬಿಡಲಿ ಮುಂದೆ ನೋಡಿಕೊಳ್ಳೋಣ ಎಂದರೆ, ಅದು ಸರಿಯಾದ ಕ್ರಮ ಅಲ್ಲ ಎನ್ನುವುದು ನನ್ನ ವಾದ.

ಚಲವಾದಿ, ಛಲುವಾದಿ ಮುಂತಾದ ಹೊಲೆಯ ಸಂಬಂದಿತ ಜಾತಿಗಳನ್ನು ಹೊಲೆಯ ಗುಂಪಿನಿಂದ ಬೇರ್ಪಡಿಸಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯ ಏನಿತ್ತು. ಹೊಲೆಯ ಸಂಭಂದಿತ ಜಾತಿಯಾದ ಪರೆಯರನ್ನು ಮಾದಿಗರ ಗುಂಪಿಗೆ ಸೇರಿಸಿ ಆಟ ಕಟ್ಟುವ ಉದ್ದೇಶವೇನಿತ್ತು. ಇಂತಹ ಕೆಲವು ಲೋಪಗಳ ಬಗ್ಗೆ ಹೊಲೆಯ ಸಮುದಾಯ ಪ್ರಶ್ನೆ ಮಾಡುತ್ತಿರುವಾಗ ಅದನ್ನು ನಿರ್ಲಕ್ಷಿಸಿ ನಡೆಯಿರಿ ಎನ್ನುವುದು ಸರಿಯೇ. ಇದರಿಂದ ಏನನ್ನು ಸಾಧಿಸಿದಂತೆ ಆಗುತ್ತದೆ. ಯಾವ AK AD AAಗಳಲ್ಲಿ ಇರುವ ಜನಸಮುದಾಯದ ಸ್ಪಷ್ಟ ಜಾತಿಗಳ ಅಂಕಿ ಸಂಖ್ಯೆಯೇ ನಿಖರವಾಗಿ ಗೊತ್ತಾಗದೆ ಗೊಂದಲವಾಗಿದೆ, ಒಳಮೀಸಲಾತಿ ಜಾರಿಗೆ ಇದೆ ದೊಡ್ಡ ತೊಡಕು ಎಂದು ಇಲ್ಲಿಯವರೆಗೂ ಹೇಳಿಕೊಂಡು ಬಂದು ಈಗ ಮತ್ತದೇ AK AD AAಗಳ ಗುಂಪೊಂದನ್ನು ರಚಿಸಿ, ಆ ಗುಂಪಿಗೂ 1% ಮೀಸಲಾತಿ ನೀಡಿರುವ ಔಚಿತ್ಯವನ್ನು ಹೊಲೆಮಾದಿಗರಿಬ್ಬರೂ ಪ್ರಶ್ನೆ ಮಾಡುತ್ತಿರುವಾಗ, ಕೆಲವು ಜಿಲ್ಲೆಗಳಲ್ಲಿ ಮಾದಿಗರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎನ್ನುವ ಆರೋಪಗಳು ಇರುವಾಗ  ಕನಿಷ್ಠ ಅದನ್ನು ಕೇಳಿಸಿಕೊಳ್ಳದೆ, ಪರಿಹಾರದ ಮಾರ್ಗ ಕಂಡುಕೊಳ್ಳದೆ, ವರದಿಯನ್ನು ಯತಾವತ್ತು ಜಾರಿ ಮಾಡುವ ಮಾತಾಡುವುದರ ಹಿಂದೆ ಇರುವ ಉದ್ದೇಶವೇ ಸರಿ ಅಲ್ಲ.

ನಾಗಮೋಹನ್ ದಾಸ್ ವರದಿ ಜಾರಿ ಖಂಡಿತವಾಗಿ ಜಾರಿ ಆಗಬೇಕು. ಆದರೆ ಅದು ಯತಾವತ್ತು ಜಾರಿ ಆಗದೆ ಕೆಲವು ತಿದ್ದುಪಡಿಗಳಿಗಾಗಿ ಪರಿಷ್ಕರಣೆ ಆಗಲೇಬೇಕು. ಅದಕ್ಕಾಗಿ ವರದಿ ಜಾರಿ ಆದ ನಂತರದಲ್ಲಿ ಯಾವುದೇ ರೀತಿಯಲ್ಲೂ ಕಾನೂನು ತೊಡಕಾಗಂತೆ ಎಚ್ಚರಿಕೆ ವಹಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು  ಒಳಮೀಸಲಾತಿಗಾಗಿ ಕ್ರಾಂತಿಕಾರಿ ಪಾದಯಾತ್ರೆ ತಂಡವು ದಿನಾಂಕ 10/08/2025 ರಂದು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ ನಡೆಸಿ, ನಾಗಮೋಹನ್ ದಾಸ್ ಅವರ ವರದಿ ಜಾರಿಗೆ ಸಂಬಂಧಿಸಿದಂತೆ ಹಿರಿಯ ವಕೀಲರು, ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯದ ವಿವಿಧ ಸಂಘಟನೆಗಳ ಹೋರಾಟಗಾರರ ಮದ್ಯೆ ಗಂಬೀರ ಚರ್ಚೆಗಳನ್ನು ನಡೆಸಿತ್ತು. ದುಂಡುಮೇಜಿನ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಆ ನಿರ್ಣಯಗಳು ಹೀಗಿವೆ.

* ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗಾಗಿ ಕರೆಯಲಾಗಿರುವ ವಿಶೇಷ ಕ್ಯಾಬಿನೆಟ್ಟಿನಲ್ಲೇ ಒಳಮೀಸಲಾತಿ ಜಾರಿಗೊಳಿಸಲೇಬೇಕು. ಯಾವುದೇ ಉಪ ಸಮಿತಿ ರಚಿಸಿ, ಒಳಮೀಸಲಾತಿ ಜಾರಿಯನ್ನು ಮತ್ತಷ್ಟು ಕಾಲ ಮುಂದೂಡಿ, ಈಗಾಗಲೇ ವಯೋಮಿತಿ ಮೀರುತ್ತಿರುವ ಯುವಕರ ಭವಿಷ್ಯವನ್ನು ಹಾಳು ಮಾಡಬಾರದು.
* ಒಳಮೀಸಲಾತಿ ಜಾರಿಯಲ್ಲಿ ಕರ್ನಾಟಕದ ಮೀಸಲಾತಿ ಪ್ರಮಾಣವು 15% ಅಥವಾ 17% ಎನ್ನುವುದರ ಬಗ್ಗೆ ಹಲವಾರು ವಾದಗಳಲ್ಲಿ ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರವು ಕ್ಯಾಬಿನೆಟ್ ನಿರ್ಧಾರಕ್ಕೆ ಮುನ್ನ ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಒಳಮೀಸಲಾತಿ ಚರ್ಚೆಯ ಕ್ಯಾಬಿನೆಟ್ ಸಭೆಗೂ ಒಂದೆರಡು ದಿನಗಳ ಮುಂಚೆಯೇ ಕಾನೂನು ಇಲಾಖೆಯ ಸಭೆ ಕರೆದು, 15% ಅಥವಾ 17% ಮೀಸಲಾತಿ ಪ್ರಮಾಣದ ಬಗ್ಗೆ ಸ್ಪಷ್ಟ ನಿಲುವಿಗೆ ಬರುವ ನಿಟ್ಟಿನಲ್ಲಿ ಸಂವಿಧಾನ ತಜ್ಞರು ಮತ್ತು ಕಾನೂನು ಪಂಡಿತರ ಸಭೆ ಕರೆದು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕಾರಣ, 17% ಮೀಸಲಾತಿ ಪ್ರಮಾಣವು ಕಾನೂನು ಮಾನ್ಯವಲ್ಲ ಅದಕ್ಕೆ ಘನ ನ್ಯಾಯಾಲಯ ತಡೆ ನೀಡಿದೆ, ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೆ ನಮ್ಮ ಒಳಮೀಸಲಾತಿ ಹೋರಾಟದ ಮೂರ್ನಾಲ್ಕು ಬೇಟಿ ಮತ್ತು ಚರ್ಚೆಯ ಸಂದರ್ಭದಲ್ಲಿ ಪದೇ ಪದೇ ನಮ್ಮೊಂದಿಗೆ ಮಾತನಾಡಿದ್ದಾರೇ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಮಾತುಗಳೇ ನಮ್ಮನ್ನು ಹೆಚ್ಚು ಆತಂಕಕ್ಕೆ ದೂಡಿದೆ, ಕಾರಣ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯು 17% ಮೀಸಲಾತಿ ಪ್ರಮಾಣವನ್ನು ಶಿಫಾರಸ್ಸು ಮಾಡಿದೆ. ಮೀಸಲಾತಿಯ ಪ್ರಮಾಣವು 15% ಅಥವಾ 16% ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ನಾಗಮೋಹನ್ ದಾಸ್ ಅವರ ವರದಿಯ ನಿಲುವುಗಳಲ್ಲೇ ನಮಗೆ ದ್ವಂದ್ವವೂ ಕಾಣುತ್ತಿರುವಾಗ. ಸರ್ಕಾರವು ಕ್ಯಾಬಿನೆಟ್ ಚರ್ಚೆಗೂ ಮುನ್ನವೇ ಈ ಗೊಂದಲವನ್ನು ಪರಿಹರಿಸಿಕೊಳ್ಳದೆ ಕಾಟಾಚಾರದ ಒಳಮೀಸಲಾತಿ ಜಾರಿ ಆದೇಶ ಮಾಡಿ, ಮುಂದೆ ಇದೆ ವಿಷಯ ಕಾನೂನು ಕಗ್ಗಂಟಾಗಿ ಸರ್ಕಾರದ ಒಳಮೀಸಲಾತಿ ಜಾರಿ ಆದೇಶವು ಬಿದ್ದು ಹೋದರೆ, ಸರ್ಕಾರಕ್ಕೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ಪ್ರಾಮಾಣಿಕತೆ ಇಲ್ಲ ಮತ್ತು ಕಾನೂನು ಕಗ್ಗಂಟನ್ನು ಪದೇ ಪದೇ ಸೃಷ್ಟಿಸುವ ಮೂಲಕವೇ ಒಳಮೀಸಲಾತಿ ಜಾರಿ ಮಾಡದ ದುರುದ್ದೇಶ ಹೊಂದಿತ್ತು ಮತ್ತು ಒಳಮೀಸಲಾತಿಯ ವಿರೋಧಿಗಳ ಜೊತೆ ಸರ್ಕಾರವೂ ಕೈ ಜೋಡಿಸಿ ಮೋಸ ಮಾಡುವ ಉದ್ದೇಶ ಹೊಂದಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಮೀಸಲಾತಿ ಪ್ರಮಾಣದ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಧಾರಕ್ಕೆ ಒಂದೆರಡು ದಿನಗಳ ಮುಂಚೆಯೇ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು.
* ಕೆಲವರು ಆರೋಪಿಸುವಂತೆ ನಾಗಮೋಹನ್ ದಾಸ್ ವರದಿಯಲ್ಲಿ ಇರಬಹುದಾದ ಇನ್ನಿತರ ಯಾವುದೇ ಲೋಪದ ನಿವಾರಣೆಯ ಬಗ್ಗೆ ಸರ್ಕಾರವು ಕ್ಯಾಬಿನೆಟ್ಟಿಗೂ ಮುಂಚೆಯೇ ಪರಿಹಾರವನ್ನು ಕಂಡುಕೊಳ್ಳಬೇಕು. 
* ಯಾವುದೇ ಆಯೋಗ ಅಥವಾ ಸಮಿತಿಗಳು ನೀಡುವ ವರದಿಗಳೇ ಅಂತಿಮವಲ್ಲವಾದ್ದರಿಂದ, ವರದಿ ಜಾರಿಗೆ ಕಾನೂನಾತ್ಮಕವಾಗಿ ಅಡ್ಡಿಯಾಗಬಹುದಾದ ಏನೇ ಲೋಪಗಳು ಇದೆ ಎಂದು ಕ್ಯಾಬಿನೆಟ್ಟಿನ ಗಮನಕ್ಕೆ ಬಂದರೇ, ಕ್ಯಾಬಿನೆಟ್ ಅದರ ಬಗ್ಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ಮತ್ತು ಅತಿ ಮುಖ್ಯವಾಗಿ ಸುಪ್ರೀಂ ಕೋರ್ಟ್ ಹೇಳಿರುವ ದತ್ತಾಂಶದ ಆದಾರದಲ್ಲೇ ಒಳಮೀಸಲು ಜಾರಿಗೊಳಿಸಲು ಅಗತ್ಯವಾಗಿ, ವರದಿಯಲ್ಲಿ ಏನಾದರೂ ತಿದ್ದುಪಡಿಯ ಅಗತ್ಯಬಿದ್ದರೆ ಮತ್ತು ಸಣ್ಣ ಪುಟ್ಟ ಜಾತಿಗಳ ಪಟ್ಟಿಯಲ್ಲಿ ವ್ಯತ್ಯಾಸಗಳನ್ನು ಸರಿಮಾಡಿಕೊಳ್ಳುವ ಅಗತ್ಯ ಕಂಡುಬಂದರೇ, ಹಾಗೆ ಮಾಡಿಕೊಳ್ಳಲು ಕ್ಯಾಬಿನೆಟ್ಟಿಗೆ ಸಂಪೂರ್ಣ ಅಧಿಕಾರ ಇರುವ ಕಾರಣ, ವರದಿಯನ್ನು ನ್ಯಾಯಸಮ್ಮತವಾಗಿಯೂ ಮತ್ತು ಸಮಾನ ಹಕ್ಕು ಅಧಿಕಾರ ಹಂಚಿಕೆಯ ಆಶಯಕ್ಕೆ ತಕ್ಕನಾಗಿಯೂ, ವರದಿ ಜಾರಿಯ ಆದೇಶವು ಯಾವುದೇ ಕಾನೂನಿನ ಕಗ್ಗಂಟಿಗೆ ಒಳಗಾಗದಂತೆ ಅತ್ಯಂತ ಜಾಗ್ರತೆ ವಹಿಸಿ ಜಾರಿಯ ಆದೇಶ ಮಾಡಬೇಕು.

ಈ ಮೇಲಿನ ನಿರ್ಣಯಗಳಂತೆ ಕ್ರಾಂತಿಕಾರಿ ಪಾದಯಾತ್ರೆ ತಂಡವು ಸಾಮಾಜಿಕ ನ್ಯಾಯಪರ ವಕೀಲರ ತಂಡದ ಸಲಹೆ ಮತ್ತು ಅಭಿಪ್ರಾಯವನ್ನೂ ಪಡೆದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಒಳಮಿಸಲಾತಿ ಜಾರಿಗಾಗಿ ಆಗ್ರಹದ ಪತ್ರ ಬರೆದು ಇನ್ನು ಹೆಚ್ಚು ವಿಳಂಬಕ್ಕೆ ಅವಕಾಶ ನೀಡದಂತೆ ಕೆಲವು ಸಲಹೆಗಳನ್ನು ನೀಡಿ, ಅದರಂತೆ ಕೂಡಲೇ ಒಳಮೀಸಲಾತಿ ಜಾರಿಗೆ ಒತ್ತಾಯ ಪಡಿಸಿದೆ. ಇವಿಷ್ಟು ವಿಚಾರಗಳನ್ನು ತಮ್ಮೆಲ್ಲರ ಗಮನಕ್ಕೆ ತಂದ ನಂತರ ನಾಗಮೋಹನ್ ದಾಸ್ ವರದಿ, ಯತಾವತ್ತು ಜಾರಿ ಆಗಿ, ಸಮುದಾಯಗಳ ಮಧ್ಯೆ ಕಂದಕಗಳು ಸೃಷ್ಟಿಯಾಗಿ, ಅದು ಕಾನೂನಿನ ಕುಣಿಕೆಗೆ ಒಡ್ಡಿಕೊಳ್ಳಬೇಕಾ, ಅಥವಾ ವರದಿಯು ಪರಿಷ್ಕರಣೆಗೊಂಡು, ತಿದ್ದುಪಡಿಯಾಗಿ ಪರಿಣಾಮಕಾರಿ ಅನುಷ್ಠಾನವಾಗಬೇಕಾ ಎನ್ನುವುದನ್ನು ಹಿರಿಯರಾದ ದೇವನೂರ ಮಹದೇವ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಓದುಗರಾದ ತಮಗೆ ಬಿಟ್ಟು ಬಿಟ್ಟಿದ್ದೇನೆ.

You cannot copy content of this page

Exit mobile version