Home ಅಂಕಣ ನಮೋ ಕುರ್ಚಿಗಂಟಿದ ಫೆವಿಕಾಲ್‌ ನಂಟು (ರಾಜಕೀಯ ವಿಡಂಬನಾ ಬರಹ)

ನಮೋ ಕುರ್ಚಿಗಂಟಿದ ಫೆವಿಕಾಲ್‌ ನಂಟು (ರಾಜಕೀಯ ವಿಡಂಬನಾ ಬರಹ)

0

“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು”

ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು – ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ.  ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿದರೂ ಅದನ್ನೇ ಹೊಗಳಿಕೆ ಎಂದು ಸಂಭ್ರಮಿಸುವ ನಮೋ ಮೂರ್ಖತನಕ್ಕೆ ಮುಖ ಕಿವಿಚಿಕೊಂಡ. ಹಿನ್ನೆಲೆಯಲ್ಲಿ ʼನಗುವುದೋ…ಅಳುವುದೋ…ʼ ಎಂಬ ಪ್ಯಾಥೊ ಸಾಂಗ್‌ಕೇಳಿಬರುತ್ತಿತ್ತು.

ಆ ದಿನ ಬೆಳ್ಳಂಬೆಳಗ್ಗೆ ಅ.ಕು.ಮಂತ್ರಿ ಮತ್ತು ಕಮಲೀ ಪಡೆ ಮುಖ್ಯಸ್ಥ ಕಪಿ ದಡ್ಡನನ್ನು ಬರ ಹೇಳಿದ ಸಾಮ್ರಾಟ ನಮೋ, ಮಾಯಾದರ್ಪಣದಲ್ಲಿ ತನ್ನ ಫಾರಿನ್‌ಟೂರಿನ ಶೂಟಿಂಗನ್ನು ರೀವೈಂಡ್‌ಮಾಡುತ್ತ, ಡಯಾಸ್ಪೊರದಲ್ಲಿ ಅನಿವಾಸಿ ದೇಶಭಕ್ತರು ಭಜನೆ ಮಾಡುವುದನ್ನು ತೋರಿ ಆನಂದದಲ್ಲಿ ಮುಳುಗಿದ್ದ. ನಮೋವನ್ನು ಮೆಚ್ಚಿಸಲು ಕಪಿ ದಡ್ಡ ಆಗಾಗ್ಗೆ ಎದ್ದು “ಓಂ ನಮೋ…ಓಂ ನಮೋ” ಎನ್ನುತ್ತ ತಾಳ ಹಾಕಿ ಕುಣಿಯುವುದು ಕುತಂತ್ರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಆದರೂ, ದಡ್ಡನಿಗೆ ಉಗಿಯೋಕು ಆಗದೆ ಉಗುಳನ್ನು ನುಂಗೋಕು ಆಗದೇ  ಕುಳಿತಲ್ಲಿಯೇ ಚಡಪಡಿಸಿದ.

ಅಷ್ಟರಲ್ಲಿ – ಮಾ.ಕೃ.ಕುಟೀರದ ಪೂಜಾರಿ ಗಣವೇಶಧಾರಿಯಾಗಿ ನೆಲಕ್ಕೆ ಕೋಲು ಬಡಿಯುತ್ತ “ಆಲ್‌ಇಸ್‌ನಾಟ್‌ವೆಲ್”‌ಎಂದು ಕೂಗುತ್ತ ಅಂತಃಪುರದತ್ತಲೇ ಬರುವುದನ್ನು ಕುತಂತ್ರಿ ಕಿಟಕಿಯಲ್ಲಿ ಗಮನಿಸಿದ. ಎಷ್ಟು ಬಾರಿ ಹೇಳಿ ಕಳಿಸಿದರೂ ಕುಟೀರದ ಕಡೆ ತಲೆ ಹಾಕದಿದ್ದಕ್ಕೆ ರೋಸಿ ಹೋದ ಪುರೋಹಿತ, ಕ್ಯಾತೆ ತೆಗೆಯಲೆಂದೇ ಅರಮನೆಗೆ ಬರುತ್ತಿರುವುದನ್ನು ಊಹಿಸಿದ ಕುತಂತ್ರಿ ಕಪಿ ದಡ್ಡನಿಗೆ ಕಣ್ಸನ್ನೆ ಮಾಡಿದ. ಅವನು ಹೆದರುತ್ತಲೇ ಓಡಿ ಹೋಗಿ ಮಂಚದ ಕೆಳಗೆ ಅವಿತುಕೊಂಡ.

ಕಾವಲಿಗಿದ್ದ ರಾಜಭಟರನ್ನು ದೂಡಿಕೊಂಡು ಅಂತಃಪುರಕ್ಕೆ ಸೀದಾ ನುಗ್ಗಿದ ಪೂಜಾರಿ                 ಕುರ್ಚಿಯೊಂದನ್ನು ಎಳೆದು ನಮೋನ ಎದುರಿಗೆ ಕಾಲು ಮೇಲಾಕಿ ಕುಳಿತು ಬುಸುಗುಟ್ಟ ತೊಡಗಿದ. ಆತ್ಮರತಿಯ ಸಂತೋಷದ ಅಲೆಗಳಲ್ಲಿ ತೇಲಾಡಿ, ಓಲಾಡುತ್ತಿದ್ದ ನಮೋ ದೊಪ್ಪೆಂದು ನೆಲಕ್ಕೆ ಬಿದ್ದ.

“ಏನ್…ಪುರೋಹಿತರೇ? ಸುದ್ದಿ ಕೊಡದೇ ಬಂದಿದ್ದೀರ? ಕುಟೀರದಲ್ಲಿ ಎಲ್ಲರೂ ಸೌಖ್ಯವೇ?” ಎಂದು ನಮೋ ಕೇಳಿದ್ದೇ ತಡ “ನಿನ್ನ ಸೌಖ್ಯ ನೆಗೆದುಬಿತ್ತು. ಎಲ್ಲಿ? ಆ ಕಪಿ…ಆ ದಡ್ಡ…ಎಷ್ಟು ಸರ್ತಿ ಹೇಳಿ ಕಳಿಸೋದು. ಕುಟೀರಕ್ಕೆ ಅಗೌರವ ತೋರುವುದೇ? ನಂಗೆ ಗೊತ್ತು. ಎಲ್ಲವೂ ನಿಮ್ಮಗಳದೇ ಚಿತಾವಣೆ” ಎಂದ ಕಣ್ಣಲ್ಲಿ ಕೆಂಡ ಕಾರಿದ. ವಿಷಯ ತನ್ನ ಬುಡಕ್ಕೇ ಬರುತ್ತಿರುವುದನ್ನು ಗಮನಿಸಿದ ಕುತಂತ್ರಿ ಮಂತ್ರಿ, ದೂರ ಹೋಗಿ ಮೂಲೆ ಹಿಡಿದು ಕೈ ಕಟ್ಟಿಕೊಂಡು ವಿನಮ್ರತೆಯಿಂದ ನಿಂತ.

“ಪುರೋಹಿತರೇ…ವಿಷಯ ಏನೆಂದು ತಿಳಿಸಬಾರದೇ? ಕುಟೀರದ ವ್ಯವಹಾರದಲ್ಲಿ ನಾವ್ಯಾಕೆ ಮೂಗು ತೂರಿಸೋಣ?”

“ನಿಮ್ಮ ನಟನಾ ಕೌಶಲ್ಯವನ್ನು ಸಗಣಿ ಭಕ್ತರ ಮುಂದಿಡಿ. ನನ್ನತ್ರ ನವರಂಗಿ ಆಟ ಬೇಡ. ಅವಧಿ ಮುಗಿದ ಕೂಡಲೇ ಕುರ್ಚಿ ತಂದು ಕುಟೀರಕ್ಕೆ ಒಪ್ಪಿಸಬೇಕು. ಅದು ಕುಟೀರದ ನಿಯಮ. ಆ ದಡ್ಡ ಕುರ್ಚಿಗೇ ಫೆವಿಕಾಲ್‌ಹಾಕಿ ಕುಂತಿದ್ದಾನೆ. ಹೇಳಿ ಕಳಿಸಿದರೆ ಬರೋ ಸೌಜನ್ಯವಿಲ್ಲ!”

“ಅಯ್ಯೋ…ಒಂದೆರೆಡು ತಿಂಗಳು ತಡ ಆದ್ರೆ ಆಕಾಶ ಕಳಚಿ ಬೀಳುತ್ತಾ? ಇಷ್ಟು ವರ್ಷ ಅಂಟಿಕೊಂಡಿರೊ ಫೆಲಿಕಾಲ್ನ ಬಿಡಿಸಬೇಡವೇ? ಅಧ್ಯಕ್ಷ ಕುರ್ಚಿನ ನಾನೇ ಖುದ್ದಾಗಿ ಮೆರವಣಿಗೆಲೀ ತಂದು ಕುಟೀರಕ್ಕೆ ಒಪ್ಪಿಸುತ್ತೇನೆ. ಸಮಾಧಾನ ಮಾಡಿಕೊಳ್ಳಿ”

“ನಿಮ್ಮೆಲ್ಲಾ ಕುತಂತ್ರಗಳು ಗೊತ್ತಿರೋದೆ” ಎಂದು ಒಮ್ಮೆ ಅ.ಕು.ಮಂತ್ರಿಯ ಕಡೆ ದಿಟ್ಟಿಸಿ “ನಮೋ ಸಾಮ್ರಾಟ ದೇವರ ಎತ್ತರಕ್ಕೆ ಬೆಳೆದಿದ್ದಾನೆ. ಈಗ ಕಮಲಿಗಳಿಗೆ ಕುಟೀರದ ಹಂಗಿಲ್ಲಾಂತ ಆ ದಡ್ಡನ ಬಾಯಲ್ಲಿ ಹೇಳಿಸಿದ್ದು ಯಾರೂಂತ ನಂಗೊತ್ತು. ತಿಪ್ಪೆ ಸಾರಿಸೋ ಮಾತು ಬೇಡ. ಇದು ನಾನು…ಅಂದರೆ ಕುಟೀರದ ಪೂಜಾರಿಯಾಗಿ ಕೊಡುತ್ತಿರೋ ಕೊನೆ ವಾರ್ನಿಂಗ್!‌ನಿಮಗೂ ಎಪ್ಪತೈದು ಆಯ್ತು. ರೂಲ್ಸ್‌ಎಲ್ಲರಿಗೂ ಒಂದೇ. ಇರೋದು ಎರಡೇ ಅಪ್ಷನ್.‌ಒಂದೋ ಸಿಂಹಾಸನದ ವ್ಯಾಮೋಹ ಬಿಡಿ. ಇಲ್ಲಾ…ಅಧ್ಯಕ್ಷ ಕುರ್ಚಿನಾ ಕುಟೀರಕ್ಕೆ ತಂದೊಪ್ಪಿಸಿ”

ಸುತ್ತಿಬಳಸಿ ಇಂಡೈರೆಕ್ಟಾಗಿ ಸಿಂಹಾಸನಕ್ಕೆ ಕೈ ಹಾಕಿದ್ದರಿಂದ ನಮೋ ಒಮ್ಮೆಗೆ ಕಂಗಾಲಾದ. ಸಿಂಹಾಸನವಿಲ್ಲದ ಶೋಕಿಲಾಲ ಬದುಕು ಹೇಗೆ? ಫಾರಿನ್‌ಟೂರು ಹೊಡೆಯುತ್ತ, ಫೋಟೊ ಶೂಟಿಂಗಂತ ಮೋಜು ಮಸ್ತಿ ಮಾಡೋದು ಹೇಗೆ? ದಶಕಗಳಿಂದ ಸಾಕಿದ ಅಖಂಡ ಲಂಡಭಕ್ತರ ಗತಿ ಏನು? ಕಣ್ಣಿಗೆ ಕತ್ತಲು ಕಟ್ಟಿದಂತಾಗಿ ತಳ ಮುಟ್ಟಿ ನೋಡಿಕೊಂಡ. ಫೆಲಿಕಾಲ್‌ಅಂಟು ಗಟ್ಟಿಯಾಗಿದ್ದು ನಿಟ್ಟುಸಿರು ಬಿಟ್ಟ. ಬೌನ್ಸ್‌ಬಾಲ್‌ಹಾಕಿ ಪ್ರಯೋಜನವಿಲ್ಲವೆಂದು ಗೂಗ್ಲೀ ಹಾಕಲು ಯೋಚಿಸಿದ.

“ಸ್ವಲ್ಪ ಸಮಯ ಕೊಡಿ. ಎಲ್ಲಾ ಸರಿ ಮಾಡ್ತೇನೆ. ಅದಿರಲಿ. ಆಶ್ರಮವಾಸಿಗಳಿಗೆ, ಯುವಕರ ತಲೇಲಿ    ಸನಾತನ ಸಗಣಿ ತುಂಬೋರಿಗೆ, ಮಂದಿ ಮಧ್ಯೆ ಬೆಂಕಿ ಹಚ್ಚೋರಿಗೆ ಕೊಡಲು ದುಡ್ಡು ಸಾಕಾಗ್ತಿಲ್ಲ ಅಂತ ಕೇಳಿದೆ. ವ್ಯವಸ್ಥೆ ಮಾಡ್ತೀನಿ. ಚಿಂತೆ ಮಾಡ್ಬೇಡಿ”  

“ಏನೂಂತ…ಮಾತಾಡ್ತಿದ್ದೀಯ. ಕೂತ ಸಿಂಹಾಸನಕ್ಕಾದರೂ ಗೌರವ ಬೇಡವೇ? ಅವರೆಲ್ಲ ದೇಶ ರಕ್ಷಣೆ, ಧರ್ಮ ರಕ್ಷಣೆ ಮಾಡ್ತಿರೋದು. ಅದು ನಿಂಗೆ ಗೊತ್ತಿರೋದೆ ಅಲ್ವಾ? ನಾಲಿಗೇನಾ ಇಷ್ಟು ಹಗುರ ಬಿಡಬಾರದು. ಆಯ್ತು…ಬೇಗ ವ್ಯವಸ್ಥೆ ಮಾಡು. ಆದರೆ, ಆಶ್ರಮವಾಸಿಗಳನ್ನು ಟುರುಪೀಸ್‌ಟ್ರೋಲ್ಗಳಿಗೆ ಹೋಲಿಸಿ ದುಡ್ಡು ಕೊಡೋವಾಗ ಕಂಜೂಸಿತನ ಬೇಡ. ಖರ್ಚು ಬಹಳಷ್ಟಿದೆ. ಹಾಗೆ ದಡ್ಡನ ಕುರ್ಚಿ ಬೇಗ ಕಳಿಸು…ಇಲ್ಲಾಂದ್ರೆ ಸಿಂಹಾಸನ ಬಿಡು. ರಾಜನಾಗಲು ನಿನಗಿಂತ ಯೋಗ್ತೆ ಇರೋ ಪೂರ್ವಾಶ್ರಮದ ನಿವಾಸಿಗಳು ಬಹಳ ಮಂದಿ ಇದ್ದಾರೆ” ಎಂದು ಕುಳಿತಲ್ಲಿಂದ ಎದ್ದವನು “ಕುರ್ಚಿ ಮೇಲೆ ಕೂತಾಕ್ಷಣ ರಾಜ್ಯಭಾರ ಮಾಡೋ ಕ್ಯಪ್ಯಾಸಿಟಿ ಬಂದ್ಬಿಡುತ್ತ!   ಬುದ್ದಿ ಬೇಕು. ಖಾಲಿ ಡಬ್ಬದಿಂದ ಬರೀ ಸೌಂಡೇ ಬರೋದು. ಟೆಲಿಪ್ರಾಂಟರ್‌ಇಲ್ಲದೆ ನೆಟ್ಟಗೆ ಮೂರು ಮಾತು ಆಡೋಕೆ ಬಾರದ ಸಾಮ್ರಾಟ ಅಂತ ಜನ ಉಗಿತ್ತಿದ್ದಾರೆ. ಯಾವ ಲೋಕದಿಂದ ಉದುರಿದ ದೇವರು ಇವ್ನು…ಮೂರು ಬಿಟ್ಟವ….ಊರಿಗೆ…ಅಲ್ಲಾ ಜಗತ್ತಿಗೆ ದೊಡ್ಡವ” ಎಂದು ಗೊಣಗುತ್ತ ಅಲ್ಲಿಂದ ಹೊರಟ.

(ಸಶೇಷ)

  • ಚಂದ್ರಪ್ರಭ ಕಠಾರಿ

cpkatari@yahoo.com

You cannot copy content of this page

Exit mobile version