Tuesday, June 18, 2024

ಸತ್ಯ | ನ್ಯಾಯ |ಧರ್ಮ

“ಯುವಕರೇ, ವಾರಕ್ಕೆ 70 ಗಂಟೆ ದುಡಿಯಿರಿ!”: ಇನ್ಫೀ ನಾರಾಯಣ ಮೂರ್ತಿಗೆ ನೆಟ್ಟಿಗರ ತರಾಟೆ

ಬೆಂಗಳೂರು,ಅಕ್ಟೋಬರ್‌.27: ಇನ್ಫೋಸಿಸ್ ನಾರಾಯಣ ಮೂರ್ತಿಯವರು ಭಾರತದ ವರ್ಕ್‌ ಕಲ್ಚರ್‌ ಬಗ್ಗೆ ಆಡಿರುವ ಮಾತು ಸದ್ಯ ಭಾರೀ ಚರ್ಚೆಯಲ್ಲಿದೆ. ಕೆಲಸದಲ್ಲಿನ ಉತ್ಪಾದಕತೆಯಲ್ಲಿ ಜಾಗತಿಕವಾಗಿ ಭಾರತದ ಸ್ಥಾನ ಹಿಂದುಳಿದಿದೆ ಎನ್ನುತ್ತಾ “ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ.

3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ ‘ದಿ ರೆಕಾರ್ಡ್’ ನ ಉದ್ಘಾಟನೆಯಲ್ಲಿ ಮಾತನಾಡುತ್ತಾ ನಾರಾಯಣ ಮೂರ್ತಿ, ರಾಷ್ಟ್ರದ ವರ್ಕಿಂಗ್‌ ಕಲ್ಚರ್‌ನ ಉತ್ಪಾದಕತೆಯನ್ನು ಹೆಚ್ಚಸಿ, ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ನಾವು ಸಿದ್ಧರಾಗಿರಬೇಕು ಎಂದು ಭಾರತದ ಯುವಕರಿಗೆ ʼಕರೆʼ ನೀಡಿದ್ದಾರೆ.

ತಮ್ಮ ಚರ್ಚೆಯಲ್ಲಿ ಅವರು ಭಾರತದ ಕೆಲಸದ ಸಂಸ್ಕೃತಿಯನ್ನು ಚೀನಾ, ಜಪಾನ್ ಮತ್ತು ಜರ್ಮನಿಯಂತಹ ದೇಶಗಳಿಗೆ ಹೋಲಿಸಿ, ಹೆಚ್ಚಿನ ಕೆಲಸದ ಸಮಯ ಮತ್ತು ಸಮರ್ಪಣಾ ಭಾವವನ್ನು ಬೆಳೆಸುವ ಮೂಲಕ ಜಪಾನ್ ಮತ್ತು ಜರ್ಮನಿ ಎರಡನೇ ಮಹಾಯುದ್ಧದ ನಂತರದ ಗಮನಾರ್ಹ ಆರ್ಥಿಕ ಚೇತರಿಕೆಗಳನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ. ಈ ದೇಶಗಳಿಂದ ಸ್ಪೂರ್ತಿ ಪಡೆಯುವಂತೆ ಯುವಕರಿಗೆ ಸಲಹೆ ನೀಡಿದ್ದಾರೆ.

‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ.’ ಎಂದು ನಮ್ಮ ಯುವಕರು ಹೇಳಬೇಕು. – ನಾರಾಯಣ ಮೂರ್ತಿ

ನಾರಾಯಣ ಮೂರ್ತಿಯವರ ಈ ಮಾತು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಇವರ ಈ ಮಾತುಗಳು “ವಿಷಕಾರಿ ದುಡಿಮೆಯ ಸಂಸ್ಕೃತಿಗೆ” ಕಾರಣವಾಗಬಹುದು ಎಂದು ಟೀಕಿಸಿದ್ದಾರೆ. ಈ ರೀತಿಯ ವರ್ಕಿಂಗ್‌ ಕಲ್ಚರ್‌ ಬೆಳೆಸುವುದರಿಂದ ಅತಿಯಾದ ಒತ್ತಡದ ಕೆಲಸ ಹಾಗೂ ಕಡಿಮೆ ವೇತನಕ್ಕೆ ಕಾರಣವಾಗಬಹುದು ಎಂದು ವಿಮರ್ಶಿಸಿದ್ದಾರೆ.

ಈ ರೀತಿಯ ಒತ್ತಡದ ವರ್ಕಿಂಗ್‌ ಕಲ್ಚರ್‌ನಿಂದಾಗಿ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಅಸಮತೋಲನ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ನಾರಾಯಣ ಮೂರ್ತಿಯವರ ಅಭಿಪ್ರಾಯವನ್ನು ಟೀಕಿಸುತ್ತಾ  ಹಾಸ್ಯನಟ ವೀರ್ ದಾಸ್ ತಮ್ಮ X ನಲ್ಲಿ “ನೀವು ವಾರಕ್ಕೆ 70 ಗಂಟೆಗಳು, ವಾರದಲ್ಲಿ 5 ದಿನಗಳು, ಬೆಳಿಗ್ಗೆ 9 ರಿಂದ ರಾತ್ರಿ 11 ರವರೆಗೆ ಕೆಲಸ ಮಾಡುತ್ತಿದ್ದರೆ, ನೀವು ಮನೆಗೆ 12.30 ಗಂಟೆಗೆ ಹೋಗುತ್ತೀರಾ? ವಾಪಾಸ್‌ ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಡುತ್ತೀರಾ? ನಿಮ್ಮ ಬಾಸಿನ ಆಫೀಸಿನಲ್ಲಿ ಹೂಸು ಬಿಡಲೂ ಅನುಮತಿ ಸಿಗಬೇಕು. ಟೈಮ್‌ ಕಮಿಟ್‌ಮೆಂಟ್‌ ಕೇಳಲು ಹೋದರೆ, ನಿಮಗೆ ಇಂಟಿಮಸಿ ಕೂಡ ಸಿಗಬೇಕು” ಎಂದು ಹಾಸ್ಯಭರಿತವಾಗಿ ಪೋಸ್ಟ್‌ ಮಾಡಿದ್ದಾರೆ.

 

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಏನೇನು ಚರ್ಚೆಗಳಾಗಿವೆ ಎಂಬುದನ್ನು ಇಲ್ಲಿ ನೋಡಿ…

Related Articles

ಇತ್ತೀಚಿನ ಸುದ್ದಿಗಳು