Saturday, April 27, 2024

ಸತ್ಯ | ನ್ಯಾಯ |ಧರ್ಮ

ಹೊಸ ಶಿಕ್ಷಣ ನೀತಿ- ಮೂಲ ಧಾತು ಎಲ್ಲಿದೆ ?

ಲಿಂಗ-ಸೂಕ್ಷ್ಮತೆ ಮತ್ತು ಸಂವೇದನೆ, ಭ್ರಾತೃತ್ವ-ಸಮನ್ವಯದ ಭಾವನೆ, ವೈವಿಧ್ಯಮಯ ಸಂಸ್ಕೃತಿಗಳ ವಿನಿಮಯದ ಧೋರಣೆ ಹಾಗೂ ಸರ್ವ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಈಡೇರಿಸುವ ರೀತಿಯಲ್ಲಿ ಭವಿಷ್ಯದ ತಲೆಮಾರಿಗೆ ರಾಜ್ಯ ಶಿಕ್ಷಣ ನೀತಿ ಅಡಿಪಾಯ ಹಾಕಬೇಕಿದೆ – ನಾ ದಿವಾಕರ, ಚಿಂತಕರು

“ಶಿಕ್ಷಣ ಎಂದರೆ ಭವಿಷ್ಯದ ಪೀಳಿಗೆಗಾಗಿ ಒಂದು ಆರೋಗ್ಯಕರ, ಪ್ರಾಮಾಣಿಕ, ನಿಸ್ವಾರ್ಥ ಸಮಾಜವನ್ನು ಕಟ್ಟಲು ಬಳಸಬಹುದಾದ ವರ್ತಮಾನದ ಬೌದ್ಧಿಕ ಅಡಿಪಾಯ.” ಮೂಲತಃ ಹೀಗೆ ಪರಿಭಾವಿಸಬಹುದಾದ ಸಾಮಾಜಿಕ ಔದಾತ್ಯದ ಒಂದು ವಲಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ಪೋಷಿಸುವಾಗ ಆ ಹಾದಿಯಲ್ಲಿ ಸಮಾನತೆ, ವೈವಿಧ್ಯತೆ ಹಾಗೂ ಸಮತೋಲನದ ಆಶಯಗಳು ಈ ಅಡಿಪಾಯದಲ್ಲಿ ಬಳಸಬೇಕಾದ ಅಡಿಗಲ್ಲುಗಳಾಗಬೇಕು. ದುರಾದೃಷ್ಟವಶಾತ್‌ ಭಾರತದ ಪ್ರಜಾಪ್ರಭುತ್ವ ಇದಕ್ಕೆ ವ್ಯತಿರಿಕ್ತ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಮೂರು ದಶಕಗಳಲ್ಲಿ ರೂಪಾಂತರಗೊಂಡಿರುವ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂರಚನೆಯಲ್ಲಿ ಶಿಕ್ಷಣ ಅಥವಾ ಶೈಕ್ಷಣಿಕ ಭೂಮಿಕೆಗಳು ಶೋಷಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಹಾಗಾಗಿಯೇ ಶಿಕ್ಷಣ ನೀತಿಯೂ ಸಹ ಉಳ್ಳವರನ್ನು ಪೋಷಿಸುವ, ಶೋಷಕರನ್ನು ಸಲಹುವ ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ರೂಪುಗೊಳ್ಳುತ್ತಿದೆ. ತತ್ಪರಿಣಾಮವಾಗಿ ಶಿಕ್ಷಣದ ವಾಣಿಜ್ಯೀಕರಣ ಮತ್ತು ಕಾರ್ಪೋರೇಟೀಕರಣ ಅವ್ಯಾಹತವಾಗಿ ಸಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಹಿಂದಿನ ಬಿಜೆಪಿ ಸರ್ಕಾರ ಏಕಾಏಕಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೊಸ ಶಿಕ್ಷಣ ನೀತಿ-2020 ಎರಡು ಕಾರಣಗಳಿಗಾಗಿ ವಿರೋಧ ಎದುರಿಸಿತ್ತು. ಮೊದಲನೆಯದು ಈ ಶಿಕ್ಷಣ ನೀತಿ ಮೂಲತಃ ಮಾರುಕಟ್ಟೆ ಪ್ರೇರಿತವಾಗಿದ್ದು ಕೇಸರೀಕರಣದ ಛಾಯೆ ಅಂತರ್ಗತವಾಗಿತ್ತು. 21ನೆಯ ಶತಮಾನದ ಆರಂಭದಲ್ಲಿ ಚಾಲನೆ ಪಡೆದ ಶಿಕ್ಷಣದ ವಾಣಿಜ್ಯೀಕರಣ ಪ್ರಕ್ರಿಯೆ ಈಗ ಕಾರ್ಪೋರೇಟೀಕರಣದತ್ತ ದಾಪುಗಾಲು ಹಾಕುತ್ತಿದ್ದು, ಈ ಶಿಕ್ಷಣ ನೀತಿಯೂ ಅದನ್ನೇ ಪೋಷಿಸುವ ಒಂದು ಪ್ರಯತ್ನವಾಗಿದೆ. ಎರಡನೆಯ ಕಾರಣ ಎಂದರೆ  ಪ್ರಾಥಮಿಕ ಹಂತದಿಂದ ಅನುಷ್ಟಾನಗೊಂಡು ಉನ್ನತ ವ್ಯಾಸಂಗದೆಡೆಗೆ ಸಾಗಬೇಕಾದ ಶಿಕ್ಷಣ ನೀತಿಯನ್ನು ತದ್ವಿರುದ್ಧ ದಿಕ್ಕಿನಲ್ಲಿ ಪದವಿ ತರಗತಿಗಳಿಂದ ಆರಂಭಿಸುವ ಮೂಲಕ ಸರ್ಕಾರವು ರಾಜ್ಯ ಶಿಕ್ಷಣ ವಲಯದಲ್ಲಿ ಸಾಕಷ್ಟು ಗೊಂದಲ/ಸಮಸ್ಯೆಗಳನ್ನು ಹುಟ್ಟುಹಾಕಿತ್ತು. ಅಷ್ಟೇ ಅಲ್ಲದೆ ಪ್ರಾದೇಶಿಕ ವೈಶಿಷ್ಟ್ಯಗಳ ಪರಿವೆಯೇ ಇಲ್ಲದೆ ಶಿಕ್ಷಣ ನೀತಿಯನ್ನು ಮೈಮೇಲೆ ಹೇರಿಕೊಂಡಿದ್ದು ಸರ್ಕಾರದ ದೊಡ್ಡ ಪ್ರಮಾದವಾಗಿತ್ತು. ಈ ಎರಡೂ ಲೋಪಗಳನ್ನು ಸರಿಪಡಿಸುವ ಸಾಂವಿಧಾನಿಕ ಜವಾಬ್ದಾರಿ ಇರುವ ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ತನ್ನದೇ ಆದ “ ರಾಜ್ಯ ಶಿಕ್ಷಣ ನೀತಿ ”ಯನ್ನು ಜಾರಿಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ.

ಈ ನಿಟ್ಟಿನಲ್ಲಿ ಸರ್ಕಾರವು ಪ್ರೊ. ಸುಖದೇವ್‌ ಥೋರಟ್‌ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದು ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಹಲವು ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಿಸಿದೆ. ದೇಶದ ಅಥವಾ ರಾಜ್ಯದ ಶಿಕ್ಷಣ ನೀತಿಯನ್ನು ಎರಡು ನೆಲೆಗಳಲ್ಲಿ ವ್ಯಾಖ್ಯಾನಿಸಬೇಕಾಗುತ್ತದೆ. ಮೊದಲನೆಯದು ಇದು ಕರ್ನಾಟಕದ ಬಹುಸಾಂಸ್ಕೃತಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಸಂಸ್ಕೃತಿ, ಭಾಷೆ ಹಾಗೂ ತಳಸಮುದಾಯಗಳ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಗ್ರ ನೀತಿಯಾಗಬೇಕಿದೆ. ಪಠ್ಯಕ್ರಮ, ಕಲಿಕಾ ವಿಧಾನ ಮತ್ತು ಬೋಧನಾ ಕ್ರಮಗಳಲ್ಲಿ ಹಾಗೂ ಅಧ್ಯಯನ ಕೇಂದ್ರಿತ ಬೌದ್ಧಿಕ ಸಂರಚನೆಗಳ ಸೌಕರ್ಯಗಳಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗದವರೆಗೆ ನಿರಂತರತೆಯನ್ನು ಕಾಪಾಡುವುದು ಶಿಕ್ಷಣ ನೀತಿಯ ಪ್ರಥಮ ಆದ್ಯತೆಯಾಗಬೇಕಿದೆ.

ಎರಡನೆಯದು ರಾಜ್ಯ ಶಿಕ್ಷಣ ನೀತಿ ಎನ್ನುವುದು ಭವಿಷ್ಯದ ಹಲವು ಪೀಳಿಗೆಗಳ ಬದುಕನ್ನು ರೂಪಿಸಬಹುದಾದ ಬೌದ್ಧಿಕ ತಳಪಾಯ ಆಗುವುದರಿಂದ ಈ ಶೈಕ್ಷಣಿಕ ಸ್ಥಾವರದ ಮೂಲ ಧಾತು ಯಾವುದಾಗಿರಬೇಕು ಎನ್ನುವುದು ಮುಖ್ಯವಾಗುತ್ತದೆ. ಕೇಂದ್ರ ಸರ್ಕಾರದ ಎನ್‌ಇಪಿ-2020 ಮೇಲ್ನೋಟಕ್ಕೆ ಮಾತೃಭಾಷಾ ಶಿಕ್ಷಣ, ಕೌಶಲ್ಯಾಧಾರಿತ ಕಲಿಕೆ-ಬೋಧನೆ ಹಾಗೂ ಡಿಜಿಟಲೀಕರಣದ ಅಪೇಕ್ಷಣೀಯ ಅಂಶಗಳನ್ನು ಒಳಗೊಂಡಿದ್ದರೂ, ಅಂತಿಮವಾಗಿ ಈ ನೀತಿಯಲ್ಲಿ ನಿರ್ಣಾಯಕವಾಗುವುದು ಶೈಕ್ಷಣಿಕ ವಲಯದ ಸಾಂಸ್ಥಿಕ ಸ್ವರೂಪ. ಇದು ಈಗಾಗಲೇ ತಾರಕಕ್ಕೇರಿರುವ ವಾಣಿಜ್ಯೀಕರಣ ಹಾಗೂ ಹಂತಹಂತವಾಗಿ ನೆಲೆಗೊಳ್ಳುತ್ತಿರುವ ಕಾರ್ಪೋರೇಟೀಕರಣದಲ್ಲಿ ಪರ್ಯವಸಾನ ಹೊಂದುತ್ತದೆ.  2002ರಿಂದಲೇ ಆರಂಭವಾದ ಈ ಪ್ರಕ್ರಿಯೆಗೆ ಪೂರಕವಾಗಿ ವಿಶ್ವವಿದ್ಯಾಲಯಗಳ ಕಾರ್ಪೋರೇಟೀಕರಣ ಹಾಗೂ ಡೀಮ್ಡ್‌ ವಿವಿಗಳ ವ್ಯಾಪಕ ಪ್ರಸರಣವೂ ಕಂಡುಬರುತ್ತಿದೆ.

ಕರ್ನಾಟಕ ಎಂದು ಮರುನಾಮಕರಣಗೊಂಡ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಕಡ್ಡಾಯವಾಗಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಲು ಈವರೆಗೂ ಸಾಧ್ಯವಾಗದಿರುವುದು ಒಂದು ಪ್ರಧಾನ ಲೋಪವಾಗಿ ಕಾಣುತ್ತದೆ. ಮತ್ತೊಂದೆಡೆ ಕನ್ನಡ ಮಾಧ್ಯಮವನ್ನು ಅವಲಂಬಿಸುವ ಕೋಟ್ಯಂತರ ವಿದ್ಯಾರ್ಥಿಗಳಿಗೆ ಭರವಸೆಯುಕ್ತ ಭವಿಷ್ಯದ ಹಾದಿಯನ್ನು ಕಂಡುಕೊಳ್ಳಲು ನೆರವಾಗುವಂತಹ ಕಲಿಕೆ ಮತ್ತು ಬೋಧನೆಯ ಮಾದರಿಗಳನ್ನೂ ರೂಪಿಸಬೇಕಾಗಿದೆ. ಹಾಗೆಯೇ ಜಾಗತೀಕರಣದ ಡಿಜಿಟಲ್‌ ಯುಗದಲ್ಲಿ ಅನಿವಾರ್ಯವಾಗಿರುವ ಆಂಗ್ಲಭಾಷಾ ಜ್ಞಾನವನ್ನು ಬೆಳೆಸಲು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಭಾಷಾ ಕಲಿಕೆಯನ್ನು ವ್ಯವಸ್ಥಿತವಾಗಿ ಅನುಸರಿಸಬೇಕಾದ ತುರ್ತು ಎದುರಾಗಿದೆ. ಶಿಕ್ಷಣ ಎಂದರೆ ಔದ್ಯಮಿಕ ಜಗತ್ತಿಗೆ ಬಾಗಿಲು ತೆರೆಯುವ ಸಾಧನ ಎಂದು ಭಾವಿಸುವುದರ ಬದಲು ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಗೆ ಅನುಗುಣವಾದ ಒಂದು ಸಮನ್ವಯ-ಸಹಬಾಳ್ವೆಯ ಸಮಾಜವನ್ನು ಕಟ್ಟಲು ನೆರವಾಗುವ ಬೌದ್ಧಿಕ ಹೆಬ್ಬಾಗಿಲು ಎಂದು ಭಾವಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ.

ಪ್ರೊ. ಸುಖದೇವ್‌ ಥೋರಟ್‌

ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್‌ ಥೋರಟ್‌ ಮತ್ತು ಅವರ ತಂಡ ಈ ಅಂಶಗಳಿಗೆ ಪ್ರಥಮ ಆದ್ಯತೆ ನೀಡುತ್ತದೆಯೇ ? ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಲೇ ಗಮನಿಸಬೇಕಾದ ಸೂಕ್ಷ್ಮ ಸಂಗತಿ ಎಂದರೆ ಕರ್ನಾಟಕದಲ್ಲಿ ಈಗಾಗಲೇ ಡೀಮ್ಡ್‌ ವಿವಿಗಳು ಹೆಚ್ಚಾಗಿದ್ದು, ಉನ್ನತ ವ್ಯಾಸಂಗದ ನೆಲೆಗಳೆಲ್ಲವೂ ಕಾರ್ಪೋರೇಟ್‌ ಔದ್ಯಮೀಕರಣಕ್ಕೊಳಗಾಗುವತ್ತ ದಾಪುಗಾಲು ಹಾಕುತ್ತಿದೆ. ಆಂಗ್ಲ ಶಿಕ್ಷಣದ ನೆಪದಲ್ಲಿ ಈಗಾಗಲೇ ರಾಜ್ಯದ ಶೈಕ್ಷಣಿಕ ವಲಯ ಖಾಸಗೀಕರಣದ ಹಾವಳಿಯಿಂದ ತತ್ತರಿಸುತ್ತಿದ್ದು, ಗ್ರಾಮೀಣ ಸಾಮಾನ್ಯ ಜನತೆಗೆ ಲಭ್ಯವಾಗುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಹಂತದಿಂದಲೇ ಶಿಥಿಲವಾಗುತ್ತಿವೆ. ತಾಂತ್ರಿಕ/ವೈದ್ಯಕೀಯ ಶಿಕ್ಷಣದ ತೊಟ್ಟಿಲು ಎಂದೇ ಪರಿಗಣಿಸಲಾಗುವ ಕರ್ನಾಟಕ ಈ ಕ್ಷೇತ್ರವನ್ನು ಪೋಷಿಸುವ ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಗಳಿಗೆ ಇನ್ನೂ ಹಿತಕರವಾದ ಜೋಲಿಯಂತೆ ಕಾಣುತ್ತಿದೆ.

ಪ್ರಾಥಮಿಕ ಶಾಲಾ ಹಂತದಿಂದ ಕಡ್ಡಾಯ ಮಾತೃಭಾಷಾ ಶಿಕ್ಷಣವನ್ನು ಜಾರಿಗೊಳಿಸಲು ಈವರೆಗೂ ಸಾಧ್ಯವಾಗದಿರುವ ಹೊತ್ತಿನಲ್ಲಿ, ಈ ಹಂತದಿಂದಲೇ ಮಕ್ಕಳಿಗೆ ಆಂಗ್ಲ ಭಾಷೆಯನ್ನೂ ಕಲಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಸಮತೋಲನವನ್ನು ಸಾಧಿಸುತ್ತಲೇ ಶಾಲೆ ಅಥವಾ ಕಾಲೇಜು ವಿದ್ಯಾಭ್ಯಾಸವನ್ನು ತೊರೆದು ಬಾಹ್ಯ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಬರುವ ಬೃಹತ್‌ ಯುವ ಸಮುದಾಯದಲ್ಲಿ ಭೌತಿಕ ಅರಿವು, ಬೌದ್ಧಿಕ ಜ್ಞಾನ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸಬೇಕಾದುದು ಈ ಕಾಲದ ತುರ್ತು.  ವಿಜ್ಞಾನ ಮತ್ತು ಗಣಿತ ಕಲಿಕೆಯೊಂದಿಗೇ  ಚರಿತ್ರೆಯ ಬೋಧನೆಯಲ್ಲಿ ವೈಚಾರಿಕತೆ ಮುಖ್ಯವಾಗುತ್ತದೆ. ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕೆಂದರೆ ಶಿಕ್ಷಣ ನೀತಿಯು ಸ್ಥಳೀಯ ಸಂಸ್ಕೃತಿಗಳ ವೈವಿಧ್ಯತೆಯನ್ನು ವೈಚಾರಿಕತೆಯ ನೆಲೆಯಲ್ಲಿ ಪರಿಚಯಿಸುವ ಸವಾಲನ್ನು ಎದುರಿಸುತ್ತದೆ. ಈ ದೃಷ್ಟಿಯಿಂದ  ಆಯೋಗದಲ್ಲಿ ಮಹಿಳೆಯರ ಪ್ರಾತಿನಿಧ್ಯ, ಸಾಂಸ್ಕೃತಿಕ ವಲಯದ, ವಿಜ್ಞಾನ ಮತ್ತು ಗಣಿತ ಶಿಸ್ತಿನ ಬೋಧಕರ-ತಜ್ಞರ, ಲಲಿತಕಲೆ-ರಂಗಭೂಮಿಯ ತಜ್ಞರ ಪ್ರಾತಿನಿಧ್ಯದ ಗೈರು ಎದ್ದು ಕಾಣುತ್ತದೆ.

ಲಿಂಗ-ಸೂಕ್ಷ್ಮತೆ ಮತ್ತು ಸಂವೇದನೆ, ಭ್ರಾತೃತ್ವ-ಸಮನ್ವಯದ ಭಾವನೆ, ವೈವಿಧ್ಯಮಯ ಸಂಸ್ಕೃತಿಗಳ ವಿನಿಮಯದ ಧೋರಣೆ ಹಾಗೂ ಸರ್ವ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಈಡೇರಿಸುವ ರೀತಿಯಲ್ಲಿ ಭವಿಷ್ಯದ ತಲೆಮಾರಿಗೆ ರಾಜ್ಯ ಶಿಕ್ಷಣ ನೀತಿ ಅಡಿಪಾಯ ಹಾಕಬೇಕಿದೆ. ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಬಿಗಿಹಿಡಿತದಿಂದ ಶಿಕ್ಷಣ ವಲಯವನ್ನು ವಿಮೋಚನೆಗೊಳಿಸದೆ ಹೋದರೆ ಯಾವುದೇ ರೀತಿಯ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳು ನಿರರ್ಥಕವಾಗುತ್ತವೆ. ಹಾಗಾಗಿ, ರಾಜ್ಯದ ಶಿಕ್ಷಣ ವಲಯ ಶಾಲಾಕಾಲೇಜು ಅಂಗಳದಲ್ಲಿರಬೇಕೇ ಹೊರತು ಮಾರುಕಟ್ಟೆ ಜಗುಲಿಯಲ್ಲಿರಬಾರದು. ಈ ಎಚ್ಚರ ಅತ್ಯವಶ್ಯ.

ನಾ.ದಿವಾಕರ

ಚಿಂತಕರು

ಇದನ್ನೂ ಓದಿ-ಹೆಚ್ಚಾದ ಹಿಂದುತ್ವದ ಅಮಲು; ಹೆಸರುಗಳೇ ಬದಲು

Related Articles

ಇತ್ತೀಚಿನ ಸುದ್ದಿಗಳು