ಡಾಲಿ ಧನಂಜಯ, ರಚಿತಾ ರಾಮ್ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಬಿಡುಗಡೆಯ ಸುದ್ದಿ ಕೊಟ್ಟಿದೆ. ಬಹುನಿರೀಕ್ಷಿತ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರ ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ.
ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ರಚಿತಾ ರಾಮ್ “ಡಾಲಿ ಧನಂಜಯ ಅವರು ನಿಜಕ್ಕೂ ನಟ ರಾಕ್ಷಸ. ಅವರ ಜೊತೆ ನಟಿಸೋದು ನನಗೂ ಚಾಲೆಂಜಿಂಗ್ ಆಗಿತ್ತು, ಈ ಚಿತ್ರದ ಸಂಭಾಷಣೆ ತುಂಬ ಚೆನ್ನಾಗಿದೆ. ಇಡೀ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ನಾನು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಾನ್ಸೂನ್ ಸಮಯದಲ್ಲಿ ನಮ್ಮ ಈ ಸಿನಿಮಾ ಶೂಟಿಂಗ್ ಮಾಡಿದ್ದೆವು, ಆದರೆ ಮಾನ್ಸೂನ್ ಸಮಯದಲ್ಲಿ ರಿಲೀಸ್ ಆಗತ್ತೆ ಅಂತ ಗೊತ್ತಿರಲಿಲ್ಲ ಎಂದಿದ್ದಾರೆ.
ಇನ್ನು ಡಾಲಿ ಧನಂಜಯ ಅವರು, “ರಚಿತಾ ರಾಮ್ ಜೊತೆ ಮೊದಲ ಬಾರಿಗೆ ನಟಿಸಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ನಟಿ ರಚಿತಾ ಅವರು ನನ್ನ ಜೊತೆ ಅದ್ಭುತವಾಗಿ ನಟಿಸಿದ್ದಾರೆ. ಸುಹಾಸಿನಿ, ಯಶಾ ಶಿವಕುಮಾರ್ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಯವಿಟ್ಟು ನೋಡಿ. ಇಲ್ಲಿ ಮುಜುಗರ ಆಗುವಂತಹ ದೃಶ್ಯ ಇಲ್ಲ, ಇಡೀ ಕುಟುಂಬ ಕೂತು ಈ ಸಿನಿಮಾ ನೋಡಬಹುದು, ಇಡೀ ರಾತ್ರಿಯೆಲ್ಲ ಮಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದೇವೆ ” ಎಂದಿದ್ದಾರೆ.
“ಇದುವರೆಗೂ ನೋಡಿರದ ಪಾತ್ರದಲ್ಲಿ ರಚಿತಾ ರಾಮ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಧನಂಜಯ, ರಚಿತಾ ರಾಮ್ ಅವರು ಚಾಲೆಂಜಿಂಗ್ ಆಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಅವರು ಸೀರಿಯಸ್ ಆಗಿದ್ದೂ ನಗಿಸುತ್ತಾರೆ “ಅನ್ನೋದು ನಿರ್ದೇಶಕ ಎಸ್ ರವೀಂದ್ರನಾಥ್ ಅವರ ಮಾತು.
ಅಂದಹಾಗೆ, ಈಗಾಗಲೇ ವೀಲ್ ಚೇರ್ ರೋಮಿಯೋ, ಬೈರಾಗಿ ಚಿತ್ರಗಳಲ್ಲಿ ತಮ್ಮ ಮಾತುಗಲಿಂದ ಗಮನ ಸೆಳೆದಿದ್ದ ಬರಹಗಾರ ಗುರು ಕಶ್ಯಪ್ ಅವರು ಈ ಚಿತ್ರದ ಸಂಭಾಷಣೆ ಬರೆದಿದ್ದರು, ಆದರೆ ಅವರು ಇಂದು ದೈಹಿಕವಾಗಿ ಇಲ್ಲ.