ಪುಣೆ: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರುವುದನ್ನು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ವಿದ್ಯಾರ್ಥಿಗಳ ಸಂಘಟನೆ ತೀವ್ರವಾಗಿ ಖಂಡಿಸಿದೆ. ಸರ್ಕಾರದ ಈ ಕ್ರಮ “ಕೇವಲ ನಿರಾಶಾದಾಯಕವಲ್ಲ, ಅಪಾಯಕಾರಿ ಕೂಡಾ” ಎಂದು ಅದು ಹೇಳಿದೆ.
‘ದಿ ಕೇರಳ ಸ್ಟೋರಿ’ ಚಲನಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ನಿರ್ದೇಶಕ’ ಮತ್ತು ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಕೇರಳದ ಮಹಿಳೆಯರನ್ನು ಬಲವಂತವಾಗಿ ಮತಾಂತರಿಸಲಾಗಿದೆ ಮತ್ತು ಅವರನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಕತೆಗಾಗಿ ವಿವಾದಕ್ಕೆ ಒಳಗಾಗಿತ್ತು.
ಆಗಸ್ಟ್ 2ರಂದು ನೀಡಿದ ಹೇಳಿಕೆಯಲ್ಲಿ, FTII ವಿದ್ಯಾರ್ಥಿ ಸಂಘಟನೆ ‘ದಿ ಕೇರಳ ಸ್ಟೋರಿ’ ಒಂದು ಚಲನಚಿತ್ರವಲ್ಲ, ಅದೊಂದು ‘ಶಸ್ತ್ರ’ ಎಂದು ಹೇಳಿದೆ.
“ಸರ್ಕಾರವು ತನ್ನ ಉದ್ದೇಶವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಚಲನಚಿತ್ರದ ಹೆಸರಿನಲ್ಲಿ ಪ್ರೊಪಗಾಂಡ ಹರಡುವ ಮತ್ತು ತನ್ನ ಬಹುಸಂಖ್ಯಾತ, ದ್ವೇಷಪೂರಿತ ಅಜೆಂಡಾವನ್ನು ಬೆಂಬಲಿಸುವ ಚಲನಚಿತ್ರಗಳಿಗೆ ಇದು ಪ್ರಶಸ್ತಿಗಳನ್ನು ನೀಡುತ್ತಿದೆ. ‘ದಿ ಕೇರಳ ಸ್ಟೋರಿ’ ಒಂದು ಚಲನಚಿತ್ರವಲ್ಲ; ಅದೊಂದು ಶಸ್ತ್ರ. ಇದು ಮುಸ್ಲಿಂ ಸಮುದಾಯವನ್ನು ದೂಷಿಸಲು ಮತ್ತು ಐತಿಹಾಸಿಕವಾಗಿ ಕೋಮು ಸೌಹಾರ್ದತೆ, ಶಿಕ್ಷಣ ಮತ್ತು ಪ್ರತಿರೋಧವನ್ನು ಎತ್ತಿಹಿಡಿದ ಇಡೀ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸಲು ಸೃಷ್ಟಿಸಿದ ಸುಳ್ಳು ಕಥೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಈ ಸಿನೆಮಾ ತಟಸ್ಥವಾಗಿಲ್ಲ, ಇದೊಂದು ಪ್ರಭಾವ ಬೀರುವ ಸಾಧನವಾಗಿ ಕೆಲಸ ಮಾಡಿದೆ. ಇಂತಹ ಚಿತ್ರಕ್ಕೆ ಪ್ರಶಸ್ತಿ ಕೊಟ್ಟಿರುವುದು ನಿರಾಶದಾಯಕ ಮಾತ್ರವಲ್ಲ ಅಪಾಯಕಾರಿ ಬೆಳವಣಿಗೆ ಕೂಡಾ, ಸರ್ಕಾರಿ ಬೆಂಬಲಿತ ಸಂಸ್ಥೆಯೊಂದು ಸಂಸ್ಥೆಯೊಂದು ಅಲ್ಪಸಂಖ್ಯಾತರ ವಿರುದ್ಧ ತಪ್ಪು ಮಾಹಿತಿ ಮತ್ತು ಭಯವನ್ನು ಹರಡುವ ಚಲನಚಿತ್ರವನ್ನು ಗೌರವಿಸಿದರೆ ಅದು ಆ ಮೂಲಕ ಕೇವಲ ಕಲೆಯನ್ನು ಗುರುತಿಸಿದಂತಲ್ಲ, ಅದು ಹಿಂಸೆಯನ್ನು ಕಾನೂನುಬದ್ಧಗೊಳಿಸಿದಂತೆ. ಇದು ಮುಂದೆ ಗುಂಪು ಹತ್ಯೆಗಳು, ಸಾಮಾಜಿ ಬಹಿಷ್ಕಾರ ಮತ್ತು ರಾಜಕೀಯವಾಗಿ ದೂರವಿಡುವಂತಹ ಕತೆಗಳುಳ್ಳ ಚಿತ್ರಗಳನ್ನು ತೆಗೆಯಲು ಪ್ರೇರೇಪಿಸುತ್ತದೆ” ಎಂದು ಸಂಘಟನೆಯ ಹೇಳಿಕೆ ತಿಳಿಸಿದೆ.