ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾಮೂಹಿಕ ಹೆಣ ಹೂಳುವಿಕೆಯ ಕುರಿತ ಸುದ್ದಿಗಳ ಪ್ರಕಟಣೆಯನ್ನು ನಿಲ್ಲಿಸಲು ಮತ್ತು ಆ ಲಿಂಕ್‌ಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿದ್ದ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು, ಈ ಪ್ರಕರಣದಿಂದ ಹಿಂದಕ್ಕೆ ಸರಿದಿದ್ದಾರೆ.
ಪ್ರಕರಣದ ಪ್ರತಿವಾದಿಯೊಬ್ಬರು ‘ಹಿತಾಸಕ್ತಿ ಸಂಘರ್ಷ’ದ ವಿಷಯವನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜುಲೈ 18 ರಂದು, ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸಾಮೂಹಿಕ ಹೂಳುವಿಕೆಯ ಆರೋಪವಿರುವ 8,842 ಕ್ಕೂ ಹೆಚ್ಚು ವೆಬ್ ಲಿಂಕ್‌ಗಳನ್ನು ತೆಗೆದುಹಾಕಲು ಮತ್ತು de-index ಮಾಡಲು 332 ಪ್ರತಿವಾದಿಗಳ ವಿರುದ್ಧ ಆದೇಶ ನೀಡಿತ್ತು.
ಪ್ರಕರಣದ 25ನೇ ಪ್ರತಿವಾದಿ (ನವೀನ್ ಸೂರಿಂಜೆ), ಪತ್ರಕರ್ತರಾಗಿದ್ದು, ತಮ್ಮ ವಕೀಲರ ಮೂಲಕ ಜ್ಞಾಪಕ ಪತ್ರ (memo) ಸಲ್ಲಿಸಿದ್ದರು. ಆಗಸ್ಟ್ 2ರಂದು, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, ಧರ್ಮಸ್ಥಳದಿಂದ ನಡೆಯುವ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ ದಾವೆಯ ವಿಚಾರಣೆ ನಡೆಯುತ್ತಿದ್ದಾಗ, 25ನೇ ಪ್ರತಿವಾದಿಯ ವಕೀಲರು ತಮ್ಮ ಕಕ್ಷಿದಾರರು ನೀಡಿದ ಪತ್ರದೊಂದಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು.
ಆ ಪತ್ರದಲ್ಲಿ, ನ್ಯಾಯಾಧೀಶರಾದ ವಿಜಯ್ ಕುಮಾರ್ ರೈ ಬಿ. ಅವರು ದಾವೆದಾರರ ಕುಟುಂಬದಿಂದ ನಿರ್ವಹಿಸಲ್ಪಡುವ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು) ವಿದ್ಯಾರ್ಥಿಯಾಗಿದ್ದರು ಎಂದು ತಿಳಿಸಲಾಗಿತ್ತು. ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ವಕೀಲರಿಗೆ ಆ ಪತ್ರದಲ್ಲಿ ಕೋರಲಾಗಿತ್ತು.
ದಾವೆದಾರರ ವಕೀಲರು ಜ್ಞಾಪಕ ಪತ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು ಮತ್ತು ಕೇವಲ ಒಂದು ಪತ್ರದ ಆಧಾರದ ಮೇಲೆ ಪ್ರಕರಣವನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಆದರೆ, ನ್ಯಾಯಾಧೀಶರು, ಜ್ಞಾಪಕ ಪತ್ರ ಮತ್ತು ಅದರೊಂದಿಗೆ ಲಗತ್ತಿಸಲಾದ ಪತ್ರದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ, 25 ವರ್ಷಗಳ ಹಿಂದೆ ತಾವು ದಾವೆದಾರರ ಕುಟುಂಬದವರಿಂದ ನಿರ್ವಹಿಸಲ್ಪಡುವ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದದ್ದು ನಿಜ ಎಂದು ಹೇಳಿದರು.
“ಆದರೆ ಈ ನ್ಯಾಯಾಧೀಶರು ಯಾವುದೇ ಹಂತದಲ್ಲಿ ದಾವೆದಾರರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಭೇಟಿಯಾಗಿಲ್ಲ ಅಥವಾ ಮಾತನಾಡಿಲ್ಲ. ಆದರೂ, ಅಧ್ಯಕ್ಷರು ದಾವೆದಾರರ ಕುಟುಂಬದಿಂದ ನಿರ್ವಹಿಸಲ್ಪಡುವ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದದ್ದು ಮತ್ತು ಪ್ರತಿವಾದಿಯೊಬ್ಬರು ಈ ವಿಷಯವನ್ನು ಪ್ರಸ್ತಾಪಿಸಿ ಜ್ಞಾಪಕ ಪತ್ರ ಸಲ್ಲಿಸಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.